ADVERTISEMENT

‘ಕಲೆ ಆಸ್ವಾದಿಸುವ ಹೃದಯವಂತಿಕೆ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:55 IST
Last Updated 8 ಜನವರಿ 2014, 5:55 IST

ದಾವಣಗೆರೆ: ‘ಒತ್ತಡದ ಬದುಕಿಗೆ ಸಾಂಸ್ಕೃತಿಕ ನೆಲೆ ಅಗತ್ಯ’ ಎಂದು ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು. ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಈಚೆಗೆ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಾಟ್ಯ ಭಾರತಿ 55ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಸಮಾರಂಭದ
ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕಲೆಗೆ ಜಾತಿಯಿಲ್ಲ. ಜಾತ್ಯತೀತವಾದ ಸಾಂಸ್ಕೃತಿಕ ವಲಯದಲ್ಲಿ ಎಲ್ಲರೂ ಭಾಗಿಗಳಾಗುವ ಮೂಲಕ ಸೃಜಶೀಲ ಬದುಕನ್ನು ಕಟ್ಟಿಕೊಳ್ಳಬಹುದು. ಕಲೆ ಮತ್ತು ಕಲಾವಿದರನ್ನು ಆಸ್ವಾದಿಸುವಂತಹ ಹೃದಯಗಳ ಕೊರತೆ ಕಾಡುತ್ತಿದೆ. ಕಲೆಯನ್ನು ಆಸ್ವಾದಿಸುವ ಹೃದಯವಂತಿಕೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.

ಸಾಂಸ್ಕೃತಿಕ ವಲಯಗಳನ್ನು ಬೆಳೆಸಿಕೊಂಡಿರುವ ಸಂಘ–ಸಂಸ್ಥಗಳು ನಗರದಲ್ಲಿ ಹೆಚ್ಚಾಗಿರುವುದರಿಂದ ದಾವಣಗೆರೆ ಬರೀ ವಾಣಿಜ್ಯ ನಗರವಾಗದೇ ಸಾಂಸ್ಕೃತಿಕ ನಗರವಾಗಿಯೂ ಗುರುತಿಸಿಕೊಂಡಿದೆ. ಕಲಾವಂತಿಕೆ ಎಲ್ಲಿರುತ್ತದೆಯೋ ಅಲ್ಲಿ ಸಾಂಸ್ಕೃತಿಕ ಜೀವಂತಿಕೆ ಇರುತ್ತದೆ. ಹಾಗಾಗಿ, ಸಾಂಸ್ಕೃತಿಕ ಚಟುವಟಿಕೆ ವಲಯವನ್ನು ನಿತ್ಯ ಬದುಕಿನ ಸುತ್ತಲೂ ಅನಾವರಣಗೊಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾನೂನು ತಜ್ಞ ಪ್ರೊ.ಎಸ್.ಎಚ್.ಪಟೇಲ್ ಮಾತನಾಡಿ, ‘ಭಾರತೀಯ ಶಾಸ್ತ್ರೀಯ ನಾಟ್ಯ ಕಲಿಯಲು ಕಠಿಣ ಪರಿಶ್ರಮಬೇಕು. ಪರಿಶ್ರಮ–ಪ್ರತಿಭೆ ಎರಡೂ ಮೇಳೈಸಲು ನಿರಂತರ ಅಭ್ಯಾಸ ಅಗತ್ಯ. ಅಂತಹ ಮಕ್ಕಳ ನಾಟ್ಯ, ಗಾಯನ, ನೃತ್ಯ ಅಲೌಕಿಕ ಆನಂದ ನೀಡುತ್ತದೆ. ಮಕ್ಕಳನ್ನು ಕೇವಲ ಪಠ್ಯದ ಹುಳುಗಳನ್ನಾಗಿಸದೇ ಸಾಂಸ್ಕೃತಿಕ ಬದುಕಿನತ್ತ ಕರೆದೊಯ್ಯುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸೀತಾ ಡಿ. ಚಪ್ಪರ್ ಹಾಗೂ ಎಸ್.ಕೆ. ಜಿಲಾನಿ ಬಾಷಾ ಅವರಿಗೆ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಮತ್ತು ವಿದುಷಿ ಲಕ್ಷ್ಮಿದೇವಮ್ಮ ಪ್ರಶಸ್ತಿಯನ್ನು ಪ್ರೊ.ನಾಗಮಣಿ ಶ್ರೀನಾಥ್, ವಿದ್ವಾನ್ ಜಿ. ದುರ್ಗೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಸವಪ್ರಭು ಸ್ವಾಮೀಜಿ, ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ಗೌರವ ಕಾರ್ಯದರ್ಶಿ ಎಚ್.ಬಿ. ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ರಜನಿ ರಘುನಾಥ್ ಕುಲಕರ್ಣಿ, ಕಾರ್ಯದರ್ಶಿ ಶ್ರೀಕಾಂತ್ ಆರ್. ಕುಲಕರ್ಣಿ, ಎಸ್.ಆರ್. ಹೆಗಡೆ, ಎಸ್.ಎಚ್. ಶಿವರುದ್ರಪ್ಪ, ಮಂಜುನಾಥ್ ಕುರ್ಕಿ, ಗುಂಡಿಪುಷ್ಪಾ ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.