ADVERTISEMENT

‘ಪುಸ್ತಕ ಭಾಗ್ಯ’ ಯೋಜನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:30 IST
Last Updated 16 ಡಿಸೆಂಬರ್ 2013, 5:30 IST

ಚನ್ನಗಿರಿ: ಸರ್ಕಾರ ಕ್ಷೀರಭಾಗ್ಯ, ಅನ್ನಭಾಗ್ಯ, ಬಿದಾಯಿ ಯೋಜನೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಹಿತಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ‘ಪುಸ್ತಕ ಭಾಗ್ಯ’ ಯೋಜನೆ ಜಾರಿಗೆ ತರಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ರಿಜಿಸ್ಟಾರ್ ರಂಗರಾಜ ವನದುರ್ಗ ಒತ್ತಾಯಪಡಿಸಿದರು.

ಪಟ್ಟಣದ ರಾಘವೇಂದ್ರ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲೋಚನ ಡಾ.ಎಚ್‌ಎಸ್‌ವಿ ಸಾಹಿತ್ಯಾಭಿ ಮಾನಿಗಳ ಬಳಗದ ವತಿಯಿಂದ ಶನಿವಾರ ನಡೆದ ಅಭಿನಂದನೆ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೆಂಕಟೇಶಮೂರ್ತಿ ಅವರು 70 ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ ಅಪರೂಪದ ಸಾಹಿತಿ ಆಗಿದ್ದಾರೆ. ಅವರು ಹುಟ್ಟಿದ ಈ ಮಣ್ಣಿನಲ್ಲಿ ಅವರನ್ನು ಸನ್ಮಾನಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದು ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚಾಗಿ ಸೇರುತ್ತಿರುವುದರಿಂದಾಗಿ ಕನ್ನಡ ಹಾಡುಗಳನ್ನು ಹಾಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಮಕ್ಕಳನ್ನು ಮೆಚ್ಚಿಸುವುದು ತುಂಬಾ ಕಷ್ಟ. ಗೆದ್ದವರಿಗಿಂತ ಸೋತವರ ಅನುಭವ ಮುಂದಿನ ಗೆಲುವಿಗೆ ದಾರಿ ಆಗುತ್ತದೆ. ಸೋಲನ್ನು ಅರಗಿಸಿಕೊಳ್ಳುವ ಕಲೆಯನ್ನು ಕಲಿತುಕೊಳ್ಳಬೇಕು. ಮಕ್ಕಳು ಕನ್ನಡ ಹಾಡುಗಳನ್ನು ಹಾಡಿದರೆ ಮನಸ್ಸಿಗೆ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಮಾತನಾಡಿ, ಮಕ್ಕಳ ಕವಿತೆಗಳನ್ನು ಬರೆಯುವ ಕವಿಗಳ ಸಂಖ್ಯೆ ಕಡಿಮೆ ಇದೆ. ಇಂತಹ ಸಂದರ್ಭದಲ್ಲಿ ಬಾಲ ಸಾಹಿತ್ಯಕ್ಕೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಅವರಿಗೆ ದೊರೆತಿರುವುದು ಸಂತಸದ ವಿಷಯ. ಮಕ್ಕಳು ಚಿಕ್ಕಂದಿನಲ್ಲಿಯೇ ಕನ್ನಡ ಹಾಡುಗಳನ್ನು ಹಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಜೆಡಿಎಸ್‌ ಅಧ್ಯಕ್ಷ ಹೊದಿಗರೆ ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಒ.ಎಸ್‌. ನಾಗರಾಜ್, ರಾಘವೇಧ್ರ ಟ್ರಸ್ಟ್ ಅಧ್ಯಕ್ಷ ಕೃಷ್ಣ ಉಪಾಧ್ಯ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪಿ.ವಿ. ತಿರುಮಲರಾವ್‌ ಅಧ್ಯಕ್ಷತೆ ವಹಿಸಿದ್ದರು. ತೇಜಸ್‌ ಶಾಸ್ತ್ರಿ ಪ್ರಾರ್ಥಿಸಿದರು. ಪಿ.ವಿ. ವಾದಿರಾಜ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.