ADVERTISEMENT

‘ಬಿಎಸ್‌ವೈ ಸೇರ್ಪಡೆ 5ರೊಳಗೆ ನಿರ್ಧಾರ’

ಹುಬ್ಬಳ್ಳಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯಕಾರಿಣಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:23 IST
Last Updated 2 ಡಿಸೆಂಬರ್ 2013, 7:23 IST

ಹುಬ್ಬಳ್ಳಿ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಕುರಿತು ಇದೇ 4 ಅಥವಾ 5ರಂದು ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿ­ದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಜರುಗಿದ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಡಿಯೂ­ರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಕುರಿತಂತೆ ರಾಜ್ಯ ಘಟಕದ ಒಪ್ಪಿಗೆಯನ್ನು ಈಗಾಗಲೇ ವರಿಷ್ಠರಿಗೆ ತಿಳಿಸಲಾಗಿದೆ. ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಡಿಸೆಂಬರ್‌ ಕೊನೆಯಲ್ಲಿ ಅಥವಾ ಜನವರಿ ಆರಂಭದಲ್ಲಿ ಮತ್ತೆ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ’ ಎಂದರು.

‘ಬಿದಾಯಿ ಯೋಜನೆಯನ್ನು ಎಲ್ಲ ವರ್ಗದವರಿಗೂ ವಿಸ್ತರಿಸುವಂತೆ ಆಗ್ರಹಿಸಿ ಕೆಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿಯೂ ಬೆಂಬಲ ಸೂಚಿಸಿದೆ’ ಎಂದ ಜೋಶಿ, ‘ಬೆಳಗಾವಿ ಸುವರ್ಣಸೌಧದ ಎದುರು ರೈತ ಸಾವನ್ನಪ್ಪಿರು­ವುದು ಆತ್ಮಹತ್ಯೆಯಿಂದ ಅಲ್ಲ. ಅದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ಕೊಲೆ’ ಎಂದು ಆರೋಪಿಸಿದರು.

‘ಕೃಷ್ಣಾ ನ್ಯಾಯಮಂಡಳಿ ನೀಡಿರುವ ತೀರ್ಪಿನ ಕುರಿತಂತೆ ಸರ್ಕಾರ ನೀರಾವರಿ ತಜ್ಞರು ಹಾಗೂ ಸರ್ವಪಕ್ಷಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ನಂತರ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಜೋಶಿ, ‘ಮುಸ್ಲಿಂ, ಕ್ರೈಸ್ತರನ್ನು ಬಿಜೆಪಿ ವೋಟ್‌ ಬ್ಯಾಂಕ್‌ ಆಗಿ ಪರಿಗಣಿಸಿಲ್ಲ. ಅವರೂ ಈ ದೇಶದ ನಾಗರಿಕರು, ಸಮಾನ ಹಕ್ಕುದಾರರು ಎಂದೇ ಭಾವಿಸಿದೆ. ಅಲ್ಪಸಂಖ್ಯಾತ ಸಮುದಾಯಗಳ ಮಧ್ಯೆ ವಿಷದ ಬೀಜ ಬಿತ್ತಿ ಕಂದಕ ನಿರ್ಮಿಸುತ್ತಿರುವ ಕಾಂಗ್ರೆಸ್‌, ಆರ್‌ಎಸ್‌ಎಸ್‌ ಮತ್ತು ಮೋದಿಯನ್ನು ಭೂತ ಎಂಬಂತೆ ಬಿಂಬಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಮುಸ್ಲಿಮರನ್ನೂ ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಭೀತಿ ಮೂಡಿಸುತ್ತಿದೆ’ ಎಂದು ಟೀಕಿಸಿದರು.

‘ಹಿಂದುಸ್ತಾನಿ ಮುಸ್ಲಿಮರು ಪಾಕಿಸ್ತಾನಿ­ಗಳಲ್ಲ. ಪಾಕಿಸ್ತಾನಿಗಳೊಂದಿಗೆ ಹಿಂದುಸ್ತಾನಿ­ಗ­ಳಾಗಿ ಹೋರಾಡುವವರು. ಆದರೆ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರನ್ನು  ಇತರ ಸಮುದಾ­ಯಗಳಿಂದ ಪ್ರತ್ಯೇಕಿಸುವ ಜೊತೆಗೆ ಕತ್ತಲೆಯ­ಲ್ಲಿಟ್ಟಿದೆ. ವೋಟ್‌ ಬ್ಯಾಂಕ್‌ ಆಗಿ ಮಾತ್ರ ಬಳಸಿ­ಕೊಂಡಿದೆ’ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟ­ಕದ ರಾಜ್ಯ ಅಧ್ಯಕ್ಷ ಡಾ.ಎನ್‌.ಎಫ್‌. ಮೊಹಸಿನ್‌ ಹೇಳಿದರು.

ಪಕ್ಷದ ಪ್ರಮುಖರಾದ ಎಂ. ನಾಗರಾಜ, ಗೋಪಿನಾಥ ರೆಡ್ಡಿ, ರಂಗಾಬದ್ದಿ, ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಖಲಂದರ್‌ ಮುಲ್ಲಾ ಮತ್ತಿತರರು ಇದ್ದರು. ವಿವಿಧ ಜಿಲ್ಲೆಗಳ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.