ADVERTISEMENT

‘ಸುಖ ಜೀವನಕ್ಕೆ ನಗು ಟಾನಿಕ್‌ ಇದ್ದಂತೆ...’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:58 IST
Last Updated 3 ಮಾರ್ಚ್ 2014, 9:58 IST

ಚನ್ನಗಿರಿ: ಸಂಘ–ಸಂಸ್ಥೆಗಳನ್ನು ಸ್ಥಾಪಿಸುವುದು ತುಂಬಾ ಸುಲಭ. ಆದರೆ, ನಿರ್ವಹಣೆ ಮಾಡುವುದು ಕಷ್ಟ. ಜನಪರವಾದ ಕಾರ್ಯಗಳನ್ನು ಮಾಡುವ ಮೂಲಕ ಜನರ ಪ್ರೀತಿಯನ್ನು ಗಳಿಸುವುದು ಸಂಘ–ಸಂಸ್ಥೆಗಳ ಧ್ಯೇಯವಾಗಿರಬೇಕು ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಸ್ರಾ ಅಸೋಸಿಯೇಷನ್‌ ವತಿಯಿಂದ ಭಾನುವಾರ ನಡೆದ ಹಿರಿಯ ನಾಗರಿಕರ ಬಸ್‌ಪಾಸ್‌ ವಿತರಣೆ ಹಾಗೂ ನಗೆಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ‘ನಗು ಆರೋಗ್ಯದ ಲಕ್ಷಣವಾಗಿದೆ. ನಗುವಿನಲ್ಲಿ ವಿಶೇಷ ಔಷಧಿ ಗುಣ ಇದೆ. ನಗು ಒಂದು ಟಾನಿಕ್‌ ಇದ್ದಂತೆ. ಮನುಷ್ಯನ ಸುಖ ಜೀವನಕ್ಕೆ ನಗು ಮುಖ್ಯ. ಹಾಸ್ಯದ ಮಾತುಗಳನ್ನು ಕೇಳಿ ಬಾಯಿ ತುಂಬಾ ನಕ್ಕು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಸಿ.ಎಸ್‌.ರಮೇಶ್‌, ಎಂ.ಯೋಗೇಶ್‌, ಅಸ್ಲಾಂ ಬೇಗ್‌, ವರ್ತಕರಾದ ಕೆ.ಸಿರಾಜ್‌ ಅಹಮದ್‌, ನಟರಾಜ್‌ ರಾಯ್ಕರ್‌, ಕಾಂಗ್ರೆಸ್‌ ಮುಖಂಡರಾದ ಎಸ್‌.ಬಿ. ಶಿವಕುಮಾರ್, ಯಾಹ್ಯಾಖಾನ್‌, ಸೈಫುಲ್ಲಾ, ಜಿ.ಎನ್‌. ಹಾಲೇಶ್‌ ಉಪಸ್ಥಿತರಿದ್ದರು.

ಆಸ್ರಾ ಅಸೋಸಿಯೇಷನ್‌ ವತಿಯಿಂದ 400 ಹಿರಿಯ ನಾಗರಕರಿಗೆ ಉಚಿತವಾಗಿ ಬಸ್‌ಪಾಸ್‌ ವಿತರಿಸಲಾಯಿತು. ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಮಹಾಮನಿ, ನರಸಿಂಹ ಜೋಷಿ ಸೇರಿದ್ದವರನ್ನು ಹಾಸ್ಯ ಮಾತುಗಳಿಂದ ರಂಜಿಸಿದರು.

ಸಂಘದ ಅಧ್ಯಕ್ಷ ಜಿಯಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಚೈತ್ರಾ ಪ್ರಾರ್ಥಿಸಿದರು. ಎಂ.ಬಿ.ನಾಗರಾಜ್‌ ಸ್ವಾಗತಿಸಿದರು. ಅಣ್ಣೋಜಿರಾವ್‌ ಪವಾರ್‌ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.