ADVERTISEMENT

10ಮಿಲಿಯನ್‌ ಡಾಲರ್ ಇಂಧನ ಉಳಿತಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 6:28 IST
Last Updated 14 ಮಾರ್ಚ್ 2014, 6:28 IST

ದಾವಣಗೆರೆ: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹಮ್ಮಿಕೊಂಡಿರುವ ‘ಗಗನ್’ ಯೋಜನೆಯಿಂದಾಗಿ ವೈಮಾನಿಕ ಸಾರಿಗೆ ಕ್ಷೇತ್ರದಲ್ಲಿನ ಜಾಗತಿಕ ಅಂತರ ಕಡಿಮೆಯಾಗಿದ್ದು, ವಾರ್ಷಿಕ 10ಮಿಲಿಯನ್‌ ಡಾಲರ್‌ನಷ್ಟು ಇಂಧನ ಉಳಿತಾಯವಾಗಲಿದೆ’ ಎಂದು ಭಾರತ ಪದ್ಮಶ್ರೀ ಪುರಸ್ಕೃತ ಬಾಹ್ಯಾಕಾಶ ವಿಜ್ಞಾನಿ ಮತ್ತು ಅಹಮದಾಬಾದ್‌ನ ಬಾಹ್ಯಾಕಾಶ ಅನ್ವಯ ಕೇಂದ್ರದ ನಿರ್ದೇಶಕ ಎ.ಎಸ್.ಕಿರಣ್‌ಕುಮಾರ್ ಹೇಳಿದರು.

ನಗರದ ಬಾಪೂಜಿ ಬಿ ಸ್ಕೂಲ್‌ ಸಭಾಂಗಣದಲ್ಲಿ ಗುರುವಾರ ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಸ್ರೋ ಇದುವರೆಗೂ 69 ಉಪಗ್ರಹ ಕಕ್ಷೆಗೆ ಯಶಸ್ವಿಯಾಗಿ ಉಡಾಯಿಸಿದ್ದು, ಭಾರತ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬಿ ಎಂಬುದನ್ನು ಸಾಧಿಸಿ ತೋರಿಸಿದೆ. ಇದರಿಂದಾಗಿ ಉಪಗ್ರಹ ಸೂಚಿತ ದೂರ್ದರ್ಶನ ಪ್ರಯೋಗದಲ್ಲಿ ದೇಶದ ಆರು ರಾಜ್ಯಗಳ 6400 ಗ್ರಾಮಗಳು ಉಪಗ್ರಹ ಮೂಲಕ ಕೃಷಿ, ಆರೋಗ್ಯ, ಶಿಕ್ಷಣ, ಕುಟುಂಬ ಕಲ್ಯಾಣ, ಮಾರುಕಟ್ಟೆ, ಹವಾಮಾನ ವೈಪರೀತ್ಯ ಇತ್ಯಾದಿ ಬಗ್ಗೆ ತಕ್ಷಣ ಮಾಹಿತಿ ಪಡೆಯುವಂತಾಗಿವೆ’ ಎಂದರು.

‘450 ಕೋಟಿ ವೆಚ್ಚದಲ್ಲಿ ಉಡಾವಣೆಯಾಗಿರುವ ‘ಮಂಗಳಯಾನ’ ಉಪಗ್ರಹಕ್ಕೆ 800 ಕೆಜಿ ಇಂಧನ ಬಳಸಿ ಉಡಾವಣೆ ಮಾಡಲಾಗಿದೆ. ಇಷ್ಟು ಕಡಿಮೆ ವೆಚ್ಚ ಮತ್ತು ಇಂಧನ ಬಳಸಿರುವುದು ಇದೇ ಮೊದಲು. ಸೆ. 24ರಂದು ಈ ಉಪಗ್ರಹ ಉಡಾವಣೆಯಾಗಿದ್ದು, ಮಂಗಳ ಗ್ರಹದ ಬಳಿ ತಲುಪಿದೆ. ಏಪ್ರಿಲ್‌ನಲ್ಲಿ ‘IRNSS-1B’ ಹಾಗೂ ಮೇ–ಜೂನ್‌ನಲ್ಲಿ ‘GSLV-- MARS2 ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಇದೆ. ಅಲ್ಲದೇ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಅವಶೇಷ ನಿರ್ವಹಣೆ ಕುರಿತಂತೆ ಏಜೆನ್ಸಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ ’ ಎಂದು ಹೇಳಿದರು.

‘ದೇಶದಲ್ಲಿ 56 ಸಾವಿರ ಟೆಲಿಕ್ಲಾಸ್‌ರೂಂಗಳಿವೆ. 3875 ಇಂಟರ್‍್ಯಾಕ್ಟಿವ್ ತರಗತಿಗಳು, 71ಅಂತರ್ಜಾಲಗಳ ಮೂಲಕ 22 ರಾಜ್ಯಗಳು ‘ಎಜುಸ್ಯಾಟ್’ ಸೌಲಭ್ಯ ಪಡೆದಿವೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಯೋಗವಾಗಿದೆ.

ಎನ್‌ರೂಟ್‌ ಸೇವೆ ಶೀಘ್ರ ಆರಂಭವಾಗಲಿದ್ದು, ಪ್ರತಿಕೂಲ ಹವಾಮಾನದಲ್ಲೂ ಸುರಕ್ಷಿತ ವಿಮಾನಯಾನ ಸಾಧ್ಯವಾಗಲಿದೆ. ರಿಮೋಟ್‌ ಸೆನ್ಸಿಂಗ್‌ ಸೆಟಲೈಟ್‌ ‘ಭಾಸ್ಕರ’ ಹಾಗೂ ಗ್ರಾಮಾಂತರ ಸಂಪನ್ಮೂಲ ಕೇಂದ್ರ ಪ್ರಯೋಗಗಳ ಮೂಲಕ ಪ್ರಕೃತಿ ವಿಕೋಪಗಳ ಮುನ್ಸೂಚನೆ, ನೈಸರ್ಗಿಕ ಜಲ, ಖನಿಜ ಸಂಪನ್ಮೂಲಗಳ ಶೋಧ, ಸಂರಕ್ಷಣೆ ಸಾಧ್ಯವಾಗಲಿದೆ. ‘ಓಶನ್‌ ಸ್ಯಾಟ್–2’, ಚಂದ್ರಯಾನ, ಮಂಗಳಯಾನ, ಆದಿತ್ಯ ಉಡಾವಣೆ ಯಶಸ್ವಿಯಾಗಿರುವುದು ಜಗತ್ತೇ ಭಾರತದ ಶಕ್ತಿ ಕಂಡು ವಿಸ್ಮಯಗೊಂಡಿದೆ’ ಎಂದು ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ,‘ ಈಚೆಗೆ ಬಿದ್ದ ಅಕಾಲಿಕ ಮಳೆಗೆ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಪ್ರಕೃತಿ ವಿಕೋಪದಂತಹ ಘಟನೆಗಳ ಬಗ್ಗೆ ವಿಜ್ಞಾನಿಗಳು ರೈತರಿಗೆ ಮುನ್ಸೂಚನೆ ನೀಡುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿದರೆ ಉತ್ತಮ. ದೇಶವೇ ಬೆರಗಾಗುವಂತೆ ವಿಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಾದ ಕಿರಣ್‌ಕುಮಾರ್ ಮತ್ತು ಸಿಎನ್ಆರ್ ರಾವ್‌ ಸಾಧನೆ ಮಾಡಿದ್ದಾರೆ. ಅವರನ್ನು ನಮ್ಮ ವಿದ್ಯಾರ್ಥಿಗಳು ಅನುಸರಿಸುವ ಮೂಲಕ ಸಾಧನೆ ಮಾಡಿ ತೋರಿಸಬೇಕು. ’ ಎಂದು ಸಲಹೆ ನೀಡಿದರು.

ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಕಾಸಲ್‌ ಎಸ್.ವಿಠ್ಠಲ್, ಖಜಾಂಚಿ ಎ.ಸಿ.ಜಯಣ್ಣ, ಆರ್.ರಮಾನಂದ್, ಡಾ.ಎಂ.ಜಿ.ಈಶ್ವರಪ್ಪ, ಪ್ರೊ.ವೈ.ವೃಷಭೇಂದ್ರಪ್ಪ, ಡಾ.ಬಿ.ಇ.ರಂಗಸ್ವಾಮಿ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.