ADVERTISEMENT

126 ಮಂದಿ, 159 ನಾಮಪತ್ರ

8 ವಿಧಾನಸಭಾ ಕ್ಷೇತ್ರದಿಂದ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 11:16 IST
Last Updated 18 ಏಪ್ರಿಲ್ 2013, 11:16 IST

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ 126 ಮಂದಿ 159 ನಾಮಪತ್ರ ಸಲ್ಲಿಸಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದಿಂದ 20 ಮಂದಿ 24 ನಾಮಪತ್ರ ಸಲ್ಲಿಸಿದ್ದಾರೆ. ದಕ್ಷಿಣದಿಂದ 17 ಮಂದಿ 20 ನಾಮಪತ್ರ ಸಲ್ಲಿಸಿದ್ದಾರೆ. ಹರಿಹರದಲ್ಲಿ 8, ಜಗಳೂರಿನಲ್ಲಿ 17, ಹರಪನಹಳ್ಳಿಯಲ್ಲಿ 17 ಮಂದಿ 20 ನಾಮಪತ್ರ, ಮಾಯಕೊಂಡದಿಂದ 28 ಮಂದಿ 52 ನಾಮಪತ್ರ, ಚನ್ನಗಿರಿಯಲ್ಲಿ 9, ಹೊನ್ನಾಳಿಯಲ್ಲಿ 12 ನಾಮಪತ್ರ ಸಲ್ಲಿಕೆಯಾಗಿವೆ.

ಕಾಂಗ್ರೆಸ್‌ನಿಂದ 10, ಬಿಜೆಪಿಯಿಂದ 6, ಸಿಪಿಐನಿಂದ 1, ಜೆಡಿಎಸ್‌ನಿಂದ 6, ಸಂಯುಕ್ತ ಜನತಾದಳದಿಂದ 8, ಬಹುಜನ ಸಮಾಜ ಪಕ್ಷದಿಂದ 10, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 5, ಕೆಜೆಪಿಯಿಂದ 9, ಬಿಎಸ್‌ಆರ್ ಕಾಂಗ್ರೆಸ್‌ನಿಂದ 4, ಹಿಂದೂಸ್ತಾನ್ ಜನತಾ ಪಕ್ಷದಿಂದ 2, ಸರ್ವ ಜನತಾ ಪಕ್ಷದಿಂದ 1, ಸಮಾಜವಾದಿ ಪಕ್ಷದಿಂದ 2, ಸಿಪಿಐ (ಎಂಎಲ್), ಲೋಕ ಜನಶಕ್ತಿ, ಮುಸ್ಲಿಂ ಲೀಗ್, ವಿಚಾರ ಜಾಗೃತಿ ಪಕ್ಷ, ಕನ್ನಡ ಚಳವಳಿ ವಾಟಾಳ್ ಪಕ್ಷ, ಅಂಬೇಡ್ಕರ್ ಪಕ್ಷ, ಹಿಂದೂಸ್ತಾನ್ ನಿರ್ಮಾಣ್ ದಳದಿಂದ ತಲಾ 1, ನ್ಯಾಷನಲ್ ಪೀಪಲ್ಸ್ ಪಾರ್ಟಿಯಿಂದ 3 ಹಾಗೂ ಪಕ್ಷೇತರರಾಗಿ 86 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಅತ್ಯಂತ ಕುತೂಹಲದ ಜಿದ್ದಾಜಿದ್ದಿಯ ಕ್ಷೇತ್ರವಾದ ಮಾಯಕೊಂಡದಲ್ಲಿ 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹಲವರು ಕಾಂಗ್ರೆಸ್, ಕೆಜೆಪಿಯಿಂದ ಟಿಕೆಟ್ ವಂಚಿತರಾಗಿ ಸಿಡಿದೆದ್ದು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ರೇಣುಕಾಚಾರ್ಯ ಸಹೋದರ ನಾಮಪತ್ರ: ಮಾಯಕೊಂಡ ಕ್ಷೇತ್ರದಿಂದ ಹೊನ್ನಾಳಿಯ ಕೆಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಅವರ ಹಿರಿಯ ಸಹೋದರ ಡಾ.ಎಂ.ಪಿ. ದಾರಕೇಶ್ವರಯ್ಯ ಅವರು ಅಂಬೇಡ್ಕರ್ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದರು. ಬೇಡಜಂಗಮ ಜಾತಿಯ ಆಧಾರದಲ್ಲಿ ಅವರು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೆಮನೆ ಪ್ರಚಾರ
ಮಲೇಬೆನ್ನೂರು: ಪ್ರಸಕ್ತ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದು ಬುಧವಾರ ಕಾಂಗ್ರೆಸ್ ಪಕ್ಷದ ಬೆಂಬಲಿಗರು `ಆಟೋರಿಕ್ಷಾ ರ‌್ಯಾಲಿ' ನಡೆಸಿದರು.

ಕೆಜೆಪಿ ಅಭ್ಯರ್ಥಿ ಮಾಜಿ ಶಾಸಕ  ಬಿ.ಪಿ. ಹರೀಶ್ ಜಿ. ಬೇವಿನಹಳ್ಳಿ  ಹಾಗೂ ಕೊಕ್ಕನೂರು ಭಾಗದ ಗ್ರಾಮಗಳ ಮನೆಮನೆಗಳಿಗೆ ಭೇಟಿ ನೀಟಿ ಮತ ಯಾಚಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕೂಡ ತಮ್ಮ ಬೆಂಬಲಿಗರೊಂದಿಗೆ ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಬಿರುಸಿನ ಪ್ರಚಾರ ಮಾಡಿದರು.

ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಹಾಲುಮತ ಸಮಾಜದ ಪೂಜಾರ್‌ಬೀರೇಶ್ ತಮ್ಮ ಬೆಂಬಲಿಗರೊಡನೆ ಇಂದು ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದರು.

ಅಬ್ಬರದ ಬ್ಯಾನರ್, ಬಂಟಿಂಗ್, ಫ್ಲೆಕ್ಸ್, ಭಿತ್ತಿಪತ್ರಗಳು, ಬನಿಯನ್, ಅಂಗಿ ಮೇಲೆ ರಾಜಕೀಯ ನಾಯಕರ ಚಿತ್ರ ಮಾಯವಾಗಿರುವುದು ಈ ಚುನಾವಣೆ ವಿಶೇಷ.

ಹೋಟೆಲ್‌ಗಳು ಹಾಗೂ ಅಲ್ಲಲ್ಲಿ ಜನರ ಗುಂಪು ಮಾತ್ರ ಜಾತಿವಾರು ಮತದಾರರ ಸಂಖ್ಯಾಬಲದ ಲೆಕ್ಕಾಚಾರದೊಂದಿಗೆ ಚುನಾವಣೆ ವಿಷಯ ಚರ್ಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.