ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಸಹಿತ 132 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ.
ಗಂಟಲುದ್ರವ ಮಾದರಿ ನೀಡಿದ ಬಳಿಕ ಶಾಸಕರು ಬೆಂಗಳೂರಿಗೆ ತೆರಳಿದ್ದರು. ಈಗ ಸೋಂಕು ಇರುವುದು ಖಚಿತವಾಗಿರುವುದರಿಂದ ಅವರ ಅಳಿಯನ ಆಸ್ಪತ್ರೆಗೆ ದಾಖಲಾಗಿದ್ದಾರೆ.
60 ವರ್ಷಕ್ಕಿಂತ ಮೇಲಿನ 25 ವೃದ್ಧರಿಗೆ, 8 ವೃದ್ಧೆಯರಿಗೆ ವೈರಸ್ ತಗುಲಿದೆ. ಇಬ್ಬರು ಬಾಲಕರು, ಐವರು ಬಾಲಕಿಯರೂ ಇದ್ದಾರೆ. 18ರಿಂದ 59 ವರ್ಷದೊಳಗಿನ 57 ಪುರುಷರಿಗೆ, 35 ಮಹಿಳೆಯರಿಗೆ ಕೊರೊನಾ ಇರುವುದು ಖಚಿತವಾಗಿದೆ.
ಪಿ.ಜೆ. ಬಡಾವಣೆಯ 70 ವರ್ಷದ ವೃದ್ಧೆ ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ ಉಸಿರಾಟದ ಸಮಸ್ಯೆ, ರಕ್ತದೊತ್ತಡ, ಮಧುಮೇಹ ಇದ್ದಿದ್ದರಿಂದ ಆ. 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಇದ್ದ ಆವರಗೆರೆಯ 70 ವರ್ಷದ ವೃದ್ಧ ಆ.1ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆ.7ರಂದು ನಿಧನರಾಗಿದ್ದಾರೆ.
132 ಪ್ರಕರಣಗಳಲ್ಲಿ 99 ಮಂದಿ ದಾವಣಗೆರೆ ತಾಲ್ಲೂಕಿನವರೇ ಆಗಿದ್ದಾರೆ. ಬಾಡ, ಎಲೆಬೇತೂರು, ಬನ್ನಿಕೋಡು, ಕಕ್ಕರಗೊಳ್ಳ, ದೊಡ್ಡಬಾತಿ ಹೀಗೆ ಐದು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದೆಲ್ಲ 94 ಪ್ರಕರಣಗಳು ಪಾಲಿಕೆ ವ್ಯಾಪ್ತಿಯಲ್ಲೇ ಕಂಡು ಬಂದಿವೆ. ಕೆಟಿಜೆ ನಗರ, ಎಸ್‌ಎಸ್ ಬಡಾವಣೆ, ಕೆ.ಬಿ. ಬಡಾವಣೆ, ವಿನೋಬನಗರ, ಶಿವಾಜಿನಗರ, ಪಿ.ಜೆ. ಬಡಾವಣೆಗಳಲ್ಲಿ ನಾಲ್ಕಕ್ಕಿಂತ ಅಧಿಕ ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್‌ನಲ್ಲಿರುವ 6 ಮಂದಿಗೆ ಕೊರೊನಾ ಬಂದಿದೆ. ಬಿಸಿಎಚ್‌ಐಯ ಸಿಬ್ಬಂದಿಗೂ ಬಂದಿದೆ.
ಹರಿಹರ ತಾಲ್ಲೂಕಿನಲ್ಲಿ 12, ಹೊನ್ನಾಳಿ ಮತ್ತು ನ್ಯಾಮತಿ ಸೇರಿ ಎರಡು ತಾಲ್ಲೂಕುಗಳಲ್ಲಿ 7, ಚನ್ನಗಿರಿ ತಾಲ್ಲೂಕಿನಲ್ಲಿ 5, ಜಗಳೂರು ತಾಲ್ಲೂಕಿನಲ್ಲಿ 4 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮೂವರಲ್ಲಿ, ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಶನಿವಾರ ಆಸ್ಪತ್ರೆಯಿಂದ 61 ಮಂದಿ ಬಿಡುಗಡೆಗೊಂಡಿದ್ದಾರೆ. 60 ವರ್ಷದ ನಾಲ್ವರು, 64, 71, 76, 85 ವರ್ಷದವರು ಸೇರಿ ಎಂಟು ವೃದ್ಧರು, 60 ವರ್ಷದ ಇಬ್ಬರು, 63, 65, 76, 78 ವರ್ಷದವರು ಸೇರಿ ಆರು ವೃದ್ಧೆಯರು ಗುಣಮುಖರಾಗಿದ್ದಾರೆ. 3 ಮತ್ತು 13 ವರ್ಷದ ಇಬ್ಬರು ಬಾಲಕರು, 12 ವರ್ಷದ ಇಬ್ಬರು ಬಾಲಕಿಯರೂ ಬಿಡುಗಡೆಗೊಂಡವರಲ್ಲಿ ಸೇರಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 3278 ಮಂದಿಗೆ ಸೋಂಕು ತಗುಲಿದೆ. 2109 ಮಂದಿ ಗುಣಮುಖರಾಗಿದ್ದಾರೆ. 80 ಮಂದಿ ಮೃತಪಟ್ಟಿದ್ದಾರೆ. 1089 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.