ADVERTISEMENT

157 ಮಂದಿಗೆ ಸೋಂಕು: 9 ಸಾವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:34 IST
Last Updated 9 ಆಗಸ್ಟ್ 2020, 16:34 IST
ದಾವಣಗೆರೆಯ ಪಿಜೆ ಬಡಾವಣೆಯ ಈಶ್ವರಮ್ಮಶಾಲೆ ರಸ್ತೆಯ ಮನೆಯೊಂದನ್ನು ಸೀಲ್‌ಡೌನ್‌ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಪಿಜೆ ಬಡಾವಣೆಯ ಈಶ್ವರಮ್ಮಶಾಲೆ ರಸ್ತೆಯ ಮನೆಯೊಂದನ್ನು ಸೀಲ್‌ಡೌನ್‌ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲೆಯಲ್ಲಿ 157 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. 9 ಮಂದಿ ಮೃತಪಟ್ಟಿದ್ದಾರೆ.

ಕುಕ್ಕವಾಡದ 54 ವರ್ಷದ ಪುರುಷ ಉಸಿರಾಟದ ಸಮಸ್ಯೆ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಮಧುಮೇಹದಿಂದ ಬಳಲುತ್ತಿದ್ದು, ಆ.7ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಮೃತಪ್ಟಟಿದ್ದಾರೆ. ಉಸಿರಾಟದ ಸಮಸ್ಯೆ ಇದ್ದ ಆಜಾದ್‌ನಗರ 75 ವರ್ಷದ ವೃದ್ಧ ಆ.5ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಮೃತಪಟ್ಟಿದ್ದಾರೆ.

ಎಸ್‌ಪಿಎಸ್‌ ನಗರದ 55 ವರ್ಷದ ಮಹಿಳೆಗೆ ಉಸಿರಾಟದ ಸಮಸ್ಯೆ ಇತ್ತು. ಆ.6ರಂದು ನಿಧನರಾದರು. ರೇಣುಕಾ ಬಡಾವಣೆಯ 63 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಎಂದು ಆ.4ರಂದು ಆಸ್ಪತ್ರೆಗೆ ದಾಖಲಾದರು. ಆ.7ರಂದು ಅಸುನೀಗಿದರು. ಉಸಿರಾಟದ ಸಮಸ್ಯೆ ಇದ್ದ ವಿನಾಯಕನಗರದ 49 ವರ್ಷದ ವ್ಯಕ್ತಿ ಆ.2ರಂದು ದಾಖಲಾಗಿದ್ದು, ಆ.8ರಂದು ಮೃತಪಟ್ಟಿದ್ದಾರೆ.

ADVERTISEMENT

ಜಾಲಿನಗರದ 38 ವರ್ಷದ ಪುರುಷ ಜುಲೈ 27ರಂದು ಆಸ್ಪತ್ರೆಗೆ ದಾಖಲಾಗಿ, ಉಸಿರಾಟದ ಸಮಸ್ಯೆಯಿಂದ ಆ.1ರಂದು ನಿಧನರಾದರು. ಜೈನ್‌ ಬಡಾವಣೆಯ 65 ವರ್ಷದ ಮಹಿಳೆಗೆ ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದು, ಜುಲೈ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆ.1ರಂದು ಅಸುನೀಗಿದರು.

ಹರಿಹರದ ಕಾಳಿಕಾದೇವಿ ರಸ್ತೆಯ 48 ವರ್ಷದ ಪುರುಷ ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳಿದ್ದ ಕಾರಣದಿಂದ ಆ.2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆ.ರಂದು ಮೃತಪಟ್ಟರು. ಹರಿಹರ ಜೆ.ಸಿ. ಬಡಾವಣೆಯ 75 ವರ್ಷದ ವೃದ್ಧೆ ಆ.1ರಂದು ದಾಖಲಾಗಿ, ಆ.7ರಂದು ಮೃತಪಟ್ಟರು. ಅವರಿಗೆ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇತ್ತು. ಈ ಎಲ್ಲ 9 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.

60 ವರ್ಷ ದಾಟಿದ 19 ವೃದ್ಧರು, 10 ವೃದ್ಧೆಯರಿಗೆ ಸೋಂಕು ತಗುಲಿದೆ. 11 ಬಾಲಕರು, ಏಳು ಬಾಲಕಿಯರೂ ಇದ್ದಾರೆ. 18ರಿಂದ 59 ವರ್ಷದೊಳಗಿನ 50 ಪುರುಷರು, 60 ಮಹಿಳೆಯರು ಸೋಂಕಿಗೊಳಗಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 106 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ ಗ್ರಾಮೀಣ ಪ್ರದೇಶಗಳಾದ ಒಡ್ಡಿನಹಳ್ಳಿಯ ನಾಲ್ವರು, ಕೋಲ್ಕುಂಟೆಯ ಇಬ್ಬರು, ಕಕ್ಕರಗೊಳ್ಳ, ಆನಗೋಡು, ಬಾತಿ, ಮಾಯಕೊಂಡ, ದೊಡ್ಡ ಓಬಜಿಹಳ್ಳಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಉಳಿದ 95 ಮಂದಿ ದಾವಣಗೆರೆ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ. ನಿಟುವಳ್ಳಿಯಲ್ಲಿ ಏಳು ಮಂದಿಗೆ, ರಂಗನಾಥ ಬಡಾವಣೆಯ ನಾಲ್ವರಿಗೆ, ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ ನಾಲ್ವರಿಗೆ ಸೋಂಕು ಬಂದಿದೆ.

ಜಗಳೂರು ತಾಲ್ಲೂಕಿನ 17, ಚನ್ನಗಿರಿ ತಾಲ್ಲೂಕಿನ 15, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 7, ಹರಿಹರ ತಾಲ್ಲೂಕಿನ 9 ಮಂದಿಗೆ ಕೊರೊನಾ ದೃಢಪಟ್ಟಿದೆ. ಹೊರ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ದಾವಣಗೆರೆಗೆ ಬಂದಿರುವ ಮೂವರಲ್ಲೂ ಕೊರೊನಾ ಕಾಣಿಸಿಕೊಂಡಿದೆ.

ಭಾನುವಾರ 118 ಮಂದಿ ಬಿಡುಗಡೆಗೊಂಡಿದ್ದಾರೆ. 65 ವರ್ಷದ ಮೂವರು, 60 ವರ್ಷದ ಇಬ್ಬರು, 66, 70, 74, 75 ವರ್ಷದ ವೃದ್ಧರು, 75 ವರ್ಷದ ಇಬ್ಬರಲ್ಲದೇ 62, 63, 65, 70, 80 ವರ್ಷದ ವೃದ್ಧೆಯರು ಸೇರಿದ್ದಾರೆ. 11 ವರ್ಷದ ಬಾಲಕ, 2, 13, 16 ವರ್ಷದ ಬಾಲಕಿಯರೂ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 3425 ಮಂದಿಗೆ ಸೋಂಕು ತಗುಲಿದೆ. 2227 ಮಂದಿ ಗುಣಮುಖರಾಗಿದ್ದಾರೆ. 89 ಮಂದಿ ಮೃತಪಟ್ಟಿದ್ದಾರೆ. 1119 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.