ADVERTISEMENT

ಎರಡು ಅವಧಿಗೆ 16 ಮೇಯರ್‌ ಕಂಡ ಪಾಲಿಕೆ

ತಲಾ ಒಂದು ಬಾರಿ ಅಧಿಕಾರ ಹಿಡಿದ ಬಿಜೆಪಿ ಮತ್ತು ಕಾಂಗ್ರೆಸ್‌

ಬಾಲಕೃಷ್ಣ ಪಿ.ಎಚ್‌
Published 22 ಅಕ್ಟೋಬರ್ 2019, 7:00 IST
Last Updated 22 ಅಕ್ಟೋಬರ್ 2019, 7:00 IST

ದಾವಣಗೆರೆ: ನಗರಸಭೆಯಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ 13 ವರ್ಷಗಳಾದವು. ಅದರಲ್ಲಿ ತಲಾ ಐದು ವರ್ಷಗಳಂತೆ ಎರಡು ಅವಧಿಗೆ ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸಿದ್ದರು. ಈ 10 ವರ್ಷಗಳಲ್ಲಿ 16 ಮಂದಿ ಮೇಯರ್‌ ಹುದ್ದೆ ಅಲಂಕರಿಸಿದ್ದಾರೆ. 13 ಮಂದಿ ಉಪ ಮೇಯರ್‌ಗಳಾಗಿದ್ದಾರೆ.

2007ರ ಜನವರಿಯಲ್ಲಿಯೇ ಪಾಲಿಕೆಯಾಗಿ ಘೋಷಣೆಯಾಗಿತ್ತು. ಆದರೆ, ಪಾಲಿಕೆಯ ಮೊದಲ ಚುನಾವಣೆ ನಡೆಸಲು ಒಂದು ವರ್ಷ ಬೇಕಾಯಿತು. ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. 41 ಸ್ಥಾನಗಳಲ್ಲಿ 22 ಕಡೆ ಜಯಗಳಿಸಿತ್ತು. ವಿರೋಧ ಪಕ್ಷವಾದ ಕಾಂಗ್ರೆಸ್‌ 9ಕ್ಕೆ ಸೀಮಿತವಾಗಿತ್ತು. ಜೆಡಿಎಸ್‌ 6 ಮತ್ತು ಪಕ್ಷೇತರರು 4 ಸ್ಥಾನ ಗಳಿಸಿದ್ದರು. 2008ರ ಫೆ.28ರಂದು ಎಂ. ಮಾದಮ್ಮ ಮುನಿಸ್ವಾಮಿ ಪ್ರಥಮ ಮೇಯರ್‌ ಆದರು. ಪಿ.ಎಸ್‌. ಜಯಣ್ಣ ಪ್ರಥಮ ಉಪಮೇಯರ್‌ ಆದರು.

ಒಂದು ವರ್ಷ ಆಗುತ್ತಿದ್ದಂತೆ ಉಮಾಪ್ರಕಾಶ್‌ ಮೇಯರ್‌ ಆದರು. ಅವರೂ ಒಂದು ವರ್ಷ ಆಡಳಿತ ಮಾಡಿದರು. ಅಲ್ಲಿಂದ ಮುಂದೆ ಮೇಯರ್‌ ಹುದ್ದೆ ಅನ್ನುವುದು ಅನಿಶ್ಚಿತವಾಗಿ ಹೋಯಿತು. ಕೆ.ಆರ್‌. ವಸಂತಕುಮಾರ್‌ 8 ತಿಂಗಳು ಮೇಯರ್ ಆಗಿದ್ದರು. ಆಗ ಉಪ ಮೇಯರ್‌ ಆಗಿದ್ದ ಪುಷ್ಪಾ ದುರುಗೇಶಪ್ಪ 14 ದಿನಗಳ ಕಾಲ ಮೇಯರ್‌(ಪ್ರಭಾರ) ಆಗಿ ಕಾರ್ಯನಿರ್ವಹಿಸಿದರು. ನಂತರ ಎಂ.ಜಿ. ಬಕ್ಕೇಶ್‌ ನಾಲ್ಕು ತಿಂಗಳು, ಎಂ.ಎಸ್‌. ವಿಠಲ್‌ 10 ತಿಂಗಳು, ಜ್ಯೋತಿ ಎಸ್‌. ಪಾಟೀಲ್‌ 22 ದಿನ (ಪ್ರಭಾರ), ಬಳಿಕ ಎಚ್‌.ಎನ್‌. ಗುರುನಾಥ್‌ ಎರಡೂವರೆ ತಿಂಗಳು ಮೇಯರ್‌ಗಳಾದರು.

ADVERTISEMENT

ಬಿಜೆಪಿ ಆಡಳಿತಾವಧಿಯ ಕೊನೇ ಮೇಯರ್‌ ಟಿ.ಜಿ. ಸುಧಾ ಜಯರುದ್ರೇಶ್‌ಗೆ ಮತ್ತೆ ಒಂದು ವರ್ಷ ಪೂರೈಸಲು ಅವಕಾಶ ಸಿಕ್ಕಿತು. ಅಲ್ಲಿಗೆ 5 ವರ್ಷಗಳ ಅವಧಿ ಮುಗಿಯಿತು.

ಐದು ವರ್ಷಗಳ ಅವಧಿಯಲ್ಲಿ 9 ಮೇಯರ್‌ಗಳನ್ನು ನೀಡಿದ ಬಿಜೆಪಿಯು 2013ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ 1 ಸ್ಥಾನಕ್ಕೆ ಇಳಿಯಿತು. 36 ಸ್ಥಾನಗಳನ್ನು ಪಡೆದ ಕಾಂಗ್ರೆಸ್‌ ಭಾರಿ ಬಹುಮತ ಪಡೆಯಿತು. ಒಂದು ಕಮ್ಯುನಿಸ್ಟ್‌, ಮೂರು ಸ್ಥಾನ ಪಕ್ಷೇತರರ ಪಾಲಾಯಿತು.

ಮೇಯರ್‌, ಉಪ ಮೇಯರ್‌ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲು ಸರ್ಕಾರ ಒಂದು ವರ್ಷ ತೆಗೆದುಕೊಂಡಿದ್ದರಿಂದ ಅಷ್ಟು ಸಮಯ ಆಡಳಿತಾಧಿಕಾರಿಗಳೇ ಪಾಲಿಕೆ ನಿರ್ವಹಿಸಿದರು. 2014ರ ಮಾರ್ಚ್‌ 12ರಂದು ರೇಣುಕಾಬಾಯಿ ವೆಂಕಟೇಶ ನಾಯ್ಕ ಮೇಯರ್‌ ಆಗಿ ಕಾಂಗ್ರೆಸ್‌ನ ಆಡಳಿತ ಪರ್ವ ಆರಂಭಿಸಿದರು. ಒಂದು ವರ್ಷ ಒಂದು ತಿಂಗಳ ಬಳಿಕ ಎಚ್‌.ಬಿ. ಗೋಣೆಪ್ಪ ಮೇಯರ್‌ ಆಗಿ ಒಂದು ವರ್ಷ ಪೂರೈಸಿದರು. ಆಗ ಮೇಯರ್‌ ಆದ ಅಶ್ವಿನಿ ವೇದಮೂರ್ತಿ 5 ತಿಂಗಳು ಅಧಿಕಾರದಲ್ಲಿದ್ದರು. ಗೌಡ್ರು ರಾಜಶೇಖರಪ್ಪ (ರಾಜಣ್ಣ) ಪ್ರಭಾರವಾಗಿ 18 ದಿನ ಆಡಳಿತ ನಡೆಸಿದರು. ನಂತರ ರೇಖಾ ನಾಗರಾಜ್‌ ಐದು ತಿಂಗಳು, ಅನಿತಾಬಾಯಿ ಮಾಲತೇಶ್‌ ಒಂದು ವರ್ಷ, ಶೋಭಾ ಪಲ್ಲಾಗಟ್ಟೆ 11 ತಿಂಗಳು ಮೇಯರ್‌ಗಳಾದರು. ಅಲ್ಲಿಗೆ ಅವಧಿ ಮುಕ್ತಾಯಗೊಂಡಿತು.

ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಒಂದು ಬಾರಿ ಅಧಿಕಾರಕ್ಕೆ ಏರಿದ್ದು, ಈ ಬಾರಿ ಜನಮನ್ನಣೆ ಯಾರಿಗೆ ದೊರೆಯಲಿದೆ ಎಂಬುದು ಇನ್ನು ನಾಲ್ಕು ವಾರಗಳಲ್ಲಿ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.