ADVERTISEMENT

17ಕ್ಕೆ ಭೂಸ್ವಾಧೀನ ವಿರೋಧಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:15 IST
Last Updated 10 ಅಕ್ಟೋಬರ್ 2011, 8:15 IST

ದಾವಣಗೆರೆ: ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಭೂಸ್ವಾಧೀನ ವಿರೋಧಿಸಿ ಅ.17ರಂದು ಗದಗ ನಗರದಲ್ಲಿ ಭೂಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ ರಾಜ್ಯಮಟ್ಟದ ಸಮಾವೇಶ ನಡೆಸಲಿದೆ ಎಂದು ಸಮಿತಿ ಸಂಚಾಲಕ ಬಸವರಾಜ ಸೂಳಿಬಾವಿ ಹೇಳಿದರು.

`ಭೂ ಬ್ಯಾಂಕ್~ ಅನ್ನು ಅಸ್ತಿತ್ವಕ್ಕೆ ತಂದಿರುವ ಸರ್ಕಾರ ರೈತರ ಭೂಮಿಯನ್ನು ವ್ಯವಸ್ಥಿತವಾಗಿ ಲಪಟಾಯಿಸುವ ಹುನ್ನಾರ ಹೊಂದಿದೆ. ಇದಕ್ಕೆ `ಭೂ ಬ್ಯಾಂಕ್~ ದಲ್ಲಾಳಿ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ರೈತರು ಇದರ ವಿರುದ್ಧ ತೀವ್ರ ಚಳವಳಿ ನಡೆಸಬೇಕಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಗದಗ ಜಿಲ್ಲೆಯಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾದ ಸಂದರ್ಭದಲ್ಲಿ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಅವರು ಹೋರಾಟದ ನೇತೃತ್ವ ವಹಿಸಿದ್ದರು. ಶ್ರೀಗಳ ಒತ್ತಡಕ್ಕೆ ಮಣಿದ ಸರ್ಕಾರ ಪೋಸ್ಕೋ ಕಂಪೆನಿಗೆ ಜಮೀನು ನೀಡದಿರಲು ನಿರ್ಧರಿಸಿತು. ಆದರೆ ಪೇಜಾವರ ಶ್ರೀಗಳಿಗೆ ಸರ್ಕಾರ, ಜಮೀನು ಭೂಸ್ವಾಧೀನ ಮಾಡದಿರುವಂತೆ ಆದೇಶ ಹೊರಡಿಸುವ ಮೂಲಕ ಭರವಸೆ ನೀಡಿತು. ಆದರೆ, ತೋಂಟದ ಶ್ರೀಗಳಿಗೆ ಕೇವಲ ಮೌಖಿಕ ಭರವಸೆ ನೀಡಲಾಗಿದೆ. ಅಂದರೆ ಮುಂದೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಲಿದೆ ಎಂಬುದು ಸೂಚ್ಯವಾಗಿ ಕಾಣಿಸುತ್ತಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ಸರ್ಕಾರ, ಯಾವುದೇ ಕಂಪೆನಿಗಳಿಗೆ ಜಮೀನು ನೀಡಿಲ್ಲ. ನೋಟಿಫಿಕೇಶನ್ ಅಡಿ ಭೂಹಗರಣ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಇದರ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಇದೆ ಎಂದ ಅವರು, ಗದುಗಿನಲ್ಲಿ ರೈತರು ಕೃಷಿ ಆಧಾರಿತ ಕೈಗಾರಿಕೆಗಳಿಗೆ ಭೂಮಿ ನೀಡುವುದಾಗಿ ಹೇಳಿದ್ದರು. ಇದೇ ವಿಷಯವನ್ನು ದಾಳವನ್ನಾಗಿಸಿಕೊಂಡಿರುವ ಸರ್ಕಾರ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವುದಾಗಿ ನೋಟಿಸ್ ಹೊರಡಿಸಿದೆ. ಆ ಕುರಿತು ಸರ್ಕಾರದ ಪ್ರಾಥಮಿಕ ಮಾಹಿತಿಯಲ್ಲಿ ಯಾವುದೇ ಸ್ಪಷ್ಟತೆ ಕಂಡುಬಂದಿಲ್ಲ ಎಂದರು.

ಪೀರ್‌ಬಾಷಾ ಮಾತನಾಡಿ, ಭೂಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ ಯಾವೊಬ್ಬ ನಾಯಕನ ನೇತೃತ್ವದಡಿ ಹೋರಾಟ ನಡೆಸುತ್ತಿಲ್ಲ. ರಾಜ್ಯದ ಸಮಸ್ತರ ಸಹಕಾರ ಹೊಂದಿರುವ ಸಮಿತಿ ನಾಗರಿಕರ ವೇದಿಕೆಯಾಗಿದೆ. ಆ ವೇದಿಕೆಗೆ ಶಕ್ತಿ ನೀಡುವ ಕಾರ್ಯಕ್ಕೆ ಜನರು ಮುಂದಾಗಬೇಕು. ಆ ಮೂಲಕ ನೇಪಥ್ಯಕ್ಕೆ ಸರಿದಿರುವ ಜನಪರ ಚಳವಳಿಯನ್ನು ಚುರುಕುಗೊಳಿಸಬೇಕು. ಜನಜಾಗೃತಿ ಮೂಡಿಸುವ ಜನಪರ ಚಳವಳಿ ಪುನರಾರಂಭಕ್ಕೆ ಗದುಗಿನಲ್ಲಿ ನಡೆಸಲಿರುವ ಸಮಾವೇಶ ನಾಂದಿಯಾಗಲಿದೆ ಎಂದರು.

ಅಖಿಲ ಭಾರತ ಕಿಸಾನ್‌ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಆವರಗೆರೆ ರುದ್ರಮುನಿ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಹೊಸಳ್ಳಿ ಮಲ್ಲೇಶ್, ವೀರೇಶ್ ಜೋಗಿಹಳ್ಳಿ, ಪಟೇಲ್ ಪಾಪನಾಯಕ, ಶಿವಕುಮಾರ್ ಕಂದಗಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.