ADVERTISEMENT

19ಕ್ಕೆ ಬರ ಅಧ್ಯಯನಕ್ಕೆ ಕಾಂಗ್ರೆಸ್ ತಂಡ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 6:00 IST
Last Updated 13 ಏಪ್ರಿಲ್ 2012, 6:00 IST

ದಾವಣಗೆರೆ: ಬರ ಪರಿಸ್ಥಿತಿ ಅಧ್ಯಯನಕ್ಕೆ ಕಾಂಗ್ರೆಸ್ ರಚಿಸಿರುವ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕಿ ಮೋಟಮ್ಮ ನೇತೃತ್ವದ ಒಂದು ತಂಡ ಏ. 19ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಕೆಪಿಸಿಸಿ ಸದಸ್ಯರೂ ಆದ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ತಿಳಿಸಿದರು.

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ತೀವ್ರತರವಾದ ಬರ ಕಾಡುತ್ತಿದೆ. ಹೀಗಾಗಿ, ಬರದ ಸಮೀಕ್ಷೆಗೆ ತಂಡ ಆಗಮಿಸಲಿದೆ ಎಂದ ಅವರು, ಜಿಲ್ಲಾ ಬಿಜೆಪಿಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ಎಂಬ ಬಣಗಳು ಸೃಷ್ಟಿಯಾಗಿವೆ. ಬರ ನಿರ್ವಹಣೆ ಬಿಟ್ಟು ಬಣ ರಾಜಕೀಯದಲ್ಲಿ ತೊಡಗಿ ಮುಖ್ಯಮಂತ್ರಿಯನ್ನು ಕುರ್ಚಿಯಲ್ಲಿ ಉಳಿಸುವ-ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆರೋಪಿಸಿದರು.

ಬರದ ಕಷ್ಟದಲ್ಲಿರುವಾಗ ಜಗಳೂರಿನಲ್ಲಿ  ಮಳೆಯಿಂದ ್ಙ 3  ಕೋಟಿ ಮೌಲ್ಯದ  ಬೆಳೆ ಹಾನಿಯಾಗಿದೆ.  ಸರ್ಕಾರ ನೀಡುವ  ಪರಿಹಾರ ಮೊತ್ತ  ಯಾವುದಕ್ಕೂ  ಸಾಲದು.  ಪರಿಹಾರದ ಮೊತ್ತ ಹೆಚ್ಚಿಸಬೇಕು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವೆಂಕಯ್ಯನಾಯ್ಡು ಬೆಂಗಳೂರಿಗೆ ಆಗಾಗ್ಗೆ ಆಗಮಿಸುತ್ತಿದ್ದರು. ಈಗ ರಾಜ್ಯದಲ್ಲಿ ಸಮಸ್ಯೆಗಳಿದ್ದರೂ ಇತ್ತ ಸುಳಿಯದಿರುವುದು ಏಕೆ ಎಂದು ಪ್ರಶ್ನಿಸಿದರು.

ಜಿಲ್ಲಾಡಳಿತ ಸಭೆ ಮಾಡುವುದು ಬಿಟ್ಟು ಬರದ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಗಂಜಿಕೇಂದ್ರ ಹಾಗೂ ಗೋಶಾಲೆ ತೆರೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಹಿಂದೆ ಉದ್ಭವಿಸಿದ ನೆರೆ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. 14 ಜಿಲ್ಲೆಗಳಲ್ಲಿ ನೆರೆ ಹಾವಳಿ ಬಂದಾಗ ಸಾಕಷ್ಟು ನೆರವು ಹರಿದು ಬಂತು. ್ಙ 7,759 ಕೋಟಿ ನಷ್ಟ ಉಂಟಾಗಿತ್ತು. ಕೇಂದ್ರ ಸರ್ಕಾರವೇ ್ಙ 2 ಸಾವಿರ ಕೋಟಿ ನೀಡಿತ್ತು. ಕೈಗಾರಿಕೋದ್ಯಮಿಗಳು, ಮಠಾಧೀಶರು ಸೇರಿದಂತೆ ಇತರೆ ಮೂಲಗಳಿಂದ ್ಙ  1 ಸಾವಿರ ಕೋಟಿಯಷ್ಟು ನೆರವು ಹರಿದುಬಂತು. 57 ಸಾವಿರ ಕುಟುಂಬಗಳು ಬೀದಿಪಾಲಾಗಿದ್ದವು. ಆದರೆ, ಸರ್ಕಾರ 27 ಸಾವಿರ ಮನೆ ಮಾತ್ರ ಕಟ್ಟಿಕೊಟ್ಟಿದೆ. ಉಳಿದವರಿಗೆ ಇನ್ನೂ ವಸತಿ ಭಾಗ್ಯ ಸಿಕ್ಕಿಲ್ಲ ಎಂದು ಆಪಾದಿಸಿದರು.

ಬರ ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ಕುಡಿಯುವ ನೀರು ಹಾಗೂ ಗಂಜಿಕೇಂದ್ರ ತೆಗೆಯುವ ವ್ಯವಸ್ಥೆ ಮಾಡಬೇಕು. ಈಗಾಗಲೇ, ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯಬೇಕಿತ್ತು. ಅದನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಎಸಿ ಕೊಠಡಿಯಲ್ಲಿ ಕುಳಿತು ವಿಡಿಯೊ ಕಾನ್ಫರೆನ್ಸ್ ಮಾಡುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಜಯಂತಿ: ಏ. 14ರಂದು ನಗರದ ಚಿಂದೋಡಿ ಕಲಾ ಕ್ಷೇತ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಹಮ್ಮಿಕೊಂಡಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಚ್. ಇಮ್ತಿಯಾಜ್ ಬೇಗಂ, ಕಾಳಾಚಾರ್, ಹಾಲೇಶ್, ಹನುಮಂತಪ್ಪ, ಅಜ್ಜಂಪುರಶೆಟ್ರು ಮುತ್ತಣ್ಣ, ಲಿಂಗಪ್ಪ, ನಲ್ಲೂರ್ ಎಸ್. ರಾಘವೇಂದ್ರ, ಅಯೂಬ್ ಪೈಲ್ವಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.