ADVERTISEMENT

‘ಸೈನಿಕರ ತರಬೇತಿ ಶಾಲೆಗೆ 2 ಎಕರೆ ಜಾಗ’-ಜಿ.ಎಂ.ಸಿದ್ದೇಶ್ವರ

ನಿಜಲಿಂಗಪ್ಪ ಬಡಾವಣೆಯಲ್ಲಿ ‘ಅಮರ್ ಜವಾನ್’ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 6:32 IST
Last Updated 22 ಫೆಬ್ರುವರಿ 2021, 6:32 IST
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ಧೂಡಾದಿಂದ ನಿರ್ಮಿಸುತ್ತಿರುವ ‘ಅಮರ್ ಜವಾನ್’ ಸ್ಮಾರಕ ಉದ್ಯಾನಕ್ಕೆ ಸಂಸ‌ದ ಜಿ.ಎಂ. ಸಿದ್ದೇಶ್ವರ ಭೂಮಿಪೂಜೆ ನೆರವೇರಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಇದ್ದರು.        –ಪ್ರಜಾವಾಣಿ ಚಿತ್ರ
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ಧೂಡಾದಿಂದ ನಿರ್ಮಿಸುತ್ತಿರುವ ‘ಅಮರ್ ಜವಾನ್’ ಸ್ಮಾರಕ ಉದ್ಯಾನಕ್ಕೆ ಸಂಸ‌ದ ಜಿ.ಎಂ. ಸಿದ್ದೇಶ್ವರ ಭೂಮಿಪೂಜೆ ನೆರವೇರಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಇದ್ದರು.        –ಪ್ರಜಾವಾಣಿ ಚಿತ್ರ   

ದಾವಣಗೆರೆ: ನಗರದ ಹೊರವಲಯದ ಕುಂದವಾಡದಲ್ಲಿ ಧೂಡಾದಿಂದ ಹೊಸದಾಗಿ ಲೇಔಟ್ ನಿರ್ಮಾಣ ಮಾಡುತ್ತಿದ್ದು, ಮಾಜಿ ಸೈನಿಕರಿಗೆ ಸಮುದಾಯ ಭವನ ಹಾಗೂ ವೈದ್ಯಕೀಯ ತಪಾಸಣಾ ಕೇಂದ್ರ ನಿರ್ಮಿಸಿಕೊಳ್ಳಲು ಎರಡು ಎಕರೆ ಜಾಗ ನೀಡುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.

ಮಾಜಿ ಸೈನಿಕರ ಸಂಘದಿಂದ ಇಲ್ಲಿನ ನಿಜಲಿಂಗಪ್ಪ ಲೇಔಟ್‌ನ ಸರ್ಕಾರಿ ನೌಕರರ ಎದುರಿನ ನಿವೇಶನದಲ್ಲಿ ಧೂಡಾದಿಂದ ನಿರ್ಮಿಸಲು ಉದ್ದೇಶಿಸಿರುವ ಅಮರ್ ಜವಾನ್ ಸ್ಮಾರಕ ಉದ್ಯಾನಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ದೇಶಕ್ಕೆ ಸೈನಿಕರು ಹಾಗೂ ರೈತರು ಮುಖ್ಯ. ಸೈನಿಕರಿಂದ ಮಾತ್ರ ನಾವೆಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ. ದೇಶದ ಗಡಿ, ಪುಲ್ವಾಮಾ ದಾಳಿ ಹಾಗೂ ಭಯೋತ್ಪಾದಕ ಚಟುವಟಿಕೆಯಿಂದ ಎಷ್ಟೋ ಸೈನಿಕರು ಹುತಾತ್ಮರಾಗಿದ್ದಾರೆ. ಸೈನಿಕರ ಹಿತಚಿಂತನೆ ನಮಗೆ ಮುಖ್ಯ. ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರ ಜೊತೆ ಹಬ್ಬಗಳನ್ನು ಆಚರಿಸಿ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ನಾವು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸೈನಿಕರ ಸಂಘದ ನಿರ್ದೇಶಕ ಪ್ರಮೋದ ಕುಮಾರ್, ‘ಸಂಘದ ಪ್ರಮುಖ ನಾಲ್ಕು ಬೇಡಿಕೆಗಳಲ್ಲಿ ಮಾಜಿ ಸೈನಿಕರಿಗೆ ಕಚೇರಿ ಹಾಗೂ ಸ್ಮಾರಕ ಉದ್ಯಾನದ ಭರವಸೆಗಳು ಈಡೇರಿವೆ. ಸೈನಿಕರಿಗೆ ತರಬೇತಿ ಶಾಲೆ ಹಾಗೂ ಮೆಡಿಕಲ್ ತಪಾಸಣಾ ಕೇಂದ್ರಗಳಿಗೆ ಜಾಗ ಬೇಕಾಗಿದ್ದು, ಅದನ್ನು ಈಡೇರಿಸಬೇಕು’ ಎಂದು ಸಂಸದರನ್ನು ಆಗ್ರಹಿಸಿದರು.

ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ‘₹ 1ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲು ಉದ್ದೇಶಿಸಿದ್ದು, ಕಾಂಪೌಂಡ್, ಅಮರ್ ಜವಾನ್ ಸ್ಮಾರಕ ಹಾಗೂ ವಾಕಿಂಗ್ ಪಾಥ್ ನಿರ್ಮಾಣ ಮಾಡಲು ₹ 62 ಲಕ್ಷದಲ್ಲಿ ಟೆಂಡರ್ ಕರೆಯಲಾಗಿದೆ. ದೇಶದ ವಿವಿಧೆಡೆ ಇರುವ ಪಾರ್ಕ್‌ಗಳನ್ನು ವೀಕ್ಷಿಸಿ ಮಾಜಿ ಸೈನಿಕರ ಸಲಹೆ ಪಡೆದು ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

‘ಮಾಜಿ ಸೈನಿಕರಿಗೆ ಆಸ್ಪತ್ರೆ ಹಾಗೂ ಪಡಿತರ ವ್ಯವಸ್ಥೆಗೆ ಬಸಾಪುರದ ಬಳಿ 10 ಗುಂಟೆ ಜಾಗವಿದ್ದು, ಅದನ್ನು ಒಪ್ಪಿದರೆ ನೀಡಲಾಗುವುದು. ಇಲ್ಲವಾದರೆ ಕುಂದವಾಡದಲ್ಲಿ 52 ಎಕರೆಯಲ್ಲಿ ಬಡಾವಣೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆಯಾದ ನಂತರ ಅಲ್ಲಿ ಎರಡು ಎಕರೆ ಜಾಗವನ್ನು ಸೈನಿಕರ ತರಬೇತಿ ಶಾಲೆಗೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ‘ಸೈನಿಕರು ದೇಶ ಕಾಯದಿದ್ದರೆ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸೈನಿಕರ ಸಲಹೆ ಪಡೆದು ದಾವಣಗೆರೆಯಲ್ಲಿ ಒಂದು ಉತ್ತಮ ಉದ್ಯಾನ ನಿರ್ಮಾಣ ಮಾಡಿ’ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ ಮಾತನಾಡಿ, ‘1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹುತಾತ್ಮರಾದ ದಾವಣಗೆರೆ ಜಿಲ್ಲೆಯ 6 ಮಂದಿಯ ಮೂರ್ತಿಗಳನ್ನು ‘ಅಮರ್ ಜವಾನ್’ ಉದ್ಯಾನದಲ್ಲಿ ನಿರ್ಮಿಸಿ ಫಲಕವನ್ನು ಹಾಕಿದರೆ ಅರ್ಥಪೂರ್ಣವಾಗುತ್ತದೆ’ ಎಂದು ಸಲಹೆ ನೀಡಿದರು.

ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಸದಸ್ಯರಾದ ದೇವಿರಮ್ಮ, ಸೌಭಾಗ್ಯಮ್ಮ, ಜಯರುದ್ರೇಶ್, ಪಾಲಿಕೆ ನಾಮನಿರ್ದೇಶಿತ ಸದಸ್ಯೆ ಎಚ್.ಸಿ.ಜಯಮ್ಮ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.