ADVERTISEMENT

ಐದು ವರ್ಷದಲ್ಲಿ 22 ಸಾವಿರ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 14:14 IST
Last Updated 16 ನವೆಂಬರ್ 2019, 14:14 IST
ಹರಪನಹಳ್ಳಿಯಲ್ಲಿ ಶಿಥಿಲಗೊಂಡ ಪೊಲೀಸ್ ಠಾಣೆ ಕಟ್ಟಡವನ್ನು ಪೊಲೀಸ್ ಗೃಹಮಂಡಳಿ ಅಧ್ಯಕ್ಷ ರಾಘವೇಂದ್ರ ಔರಾದ್ಕರ್ ವೀಕ್ಷಿಸಿ ಕಡತಗಳನ್ನು ಪರಿಶೀಲಿಸಿದರು
ಹರಪನಹಳ್ಳಿಯಲ್ಲಿ ಶಿಥಿಲಗೊಂಡ ಪೊಲೀಸ್ ಠಾಣೆ ಕಟ್ಟಡವನ್ನು ಪೊಲೀಸ್ ಗೃಹಮಂಡಳಿ ಅಧ್ಯಕ್ಷ ರಾಘವೇಂದ್ರ ಔರಾದ್ಕರ್ ವೀಕ್ಷಿಸಿ ಕಡತಗಳನ್ನು ಪರಿಶೀಲಿಸಿದರು   

ಹರಪನಹಳ್ಳಿ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮುಂದಿನ ಐದು ವರ್ಷದಲ್ಲಿ 22 ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕಾರ್ ತಿಳಿಸಿದ್ದಾರೆ.

ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿ ಪೊಲೀಸ್ ಠಾಣೆ ಶಿಥಿಲ ಕಟ್ಟಡವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಲಾಖೆಗೆ ಸಂಬಂಧಪಟ್ಟ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದು ಡಿಜಿ, ಐಜಿಪಿ ಹಂತದಲ್ಲಿ ನಡೆಯುತ್ತಿದೆ. ಪ್ರತಿ ಸಭೆಯಲ್ಲೂ ವರದಿ ಅನುಷ್ಠಾನಕ್ಕೆ ಮನವಿ ಮಾಡುತ್ತಿದ್ದೇನೆ. ಆದರೆ ಅದು ಎಲ್ಲಿ ವಿಳಂಬವಾಗುತ್ತಿದೆ ಎಂಬುದು ನನಗೂ ತಿಳಿಯುತ್ತಿಲ್ಲ’ ಎಂದು ಹೇಳಿದರು.

ADVERTISEMENT

ರಾಜ್ಯದ ಪೊಲೀಸರಿಗೆ ಶೇ 47 ವಸತಿಗೃಹಗಳ ಕೊರತೆಯಿದೆ. 2015ರಲ್ಲಿ 11 ಸಾವಿರ ಮನೆ ನಿರ್ಮಾಣದ ಯೋಜನೆ ತಂದಿದ್ದರು. ಅದರಲ್ಲಿ 8 ಸಾವಿರ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. 3 ಸಾವಿರ ಮನೆ ನಿರ್ಮಾಣ ಪ್ರಗತಿಯಲ್ಲಿದ್ದು, 2020ರ ವೇಳೆಗೆ ಪೂರ್ಣಗೊಳ್ಳುತ್ತವೆ. ಮುಂದಿನ ಐದು ವರ್ಷದಲ್ಲಿ ನಿರ್ಮಿಸಿಲು ತಯಾರಿಸಿದ ಕ್ರಿಯಾಯೋಜನೆಯಲ್ಲಿ ದುರಸ್ತಿ ಮಾಡುವ ಕಟ್ಟಡಗಳು ಸೇರಿವೆ. ದುರಸ್ತಿ ಕಟ್ಟಡಗಳಿಗೆ ಅನುದಾನ ನಿಗದಿಯಾಗಿದೆ. ಇನ್ನೂ ಮುಂಜೂರಾಗಿಲ್ಲ ಎಂದು ಮಾಹಿತಿ ನೀಡಿದರು.

ಬಹಳ‌‌ ಕಡೆಗೆ ಪೊಲೀಸ್ ವಸತಿ ಗೃಹಗಳು, ಠಾಣಾ ಕಟ್ಟಡಗಳು ದುರಸ್ತಿಯಲ್ಲಿವೆ. ಈ ಬಗ್ಗೆ ಎಸ್ಪಿಗಳಿಂದ ವರದಿ ಪಡೆಯಲಾಗಿದೆ. ಪರಿಶೀಲನೆ ಬಳಿಕ ದುರಸ್ತಿ ಮಾಡಬೇಕಾ ಅಥವಾ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕಾ ಎಂಬುದನ್ನು ನಿರ್ಧರಿಸಲಾಗುವುದು. ಹರಪನಹಳ್ಳಿ ಠಾಣೆಯ ಬಗ್ಗೆ ಪ್ರಸ್ತಾವನೆ ತರಿಸಿಕೊಂಡು ಹೊಸಕಟ್ಟಡ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಮುನಿರಾಬಾದ್, ಹಗರಿಬೊಮ್ಮನಹಳ್ಳಿ ಠಾಣೆಗಳಿಗೂ ಭೇಟಿ ನೀಡಿ ಪರಿಶೀಲಿಸಿರುವುದಾಗಿ ಹೇಳಿದರು.

ಹರಪನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗೌರವ‌ರಕ್ಷೆ ಸಲ್ಲಿಸಿದರು. ಡಿವೈಎಸ್ಪಿ ಡಿ. ಮಲ್ಲೇಶ್, ಸಿಪಿಐ ಕೆ. ಕುಮಾರ, ಪಿಎಸ್ಐ ಶ್ರೀಧರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.