ದಾವಣಗೆರೆ: ಭೋವಿ ಸಮಾಜದ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ದೇವರ ಸುವರ್ಣ ರಥೋತ್ಸವ, ಸಿದ್ದರಾಮೇಶ್ವರ ಸ್ವಾಮೀಜಿಯ ಸಂಸ್ಮರಣ ದಶಮಾನೋತ್ಸವ ಜುಲೈ 23ರಂದು ಬೆಳಿಗ್ಗೆ 9ರಿಂದ ನಗರದ ವೆಂಕಾಭೋವಿ ಕಾಲೊನಿಯ ಸಿದ್ದರಾಮೇಶ್ವರ ಸಂಸ್ಥಾನ ಮಠದಲ್ಲಿ ನಡೆಯಲಿದೆ.
ಬಸವಾದಿ ಶರಣರ ಸಮಕಾಲೀನರಾದ ಸಿದ್ದರಾಮೇಶ್ವರರು ಸಿದ್ದಿ ಪುರುಷನಾಗಿ ಖ್ಯಾತಿ ಗಳಿಸಿದರು. ದಾವಣಗೆರೆಯಲ್ಲಿ 1960ರಲ್ಲಿ ನಗರದ ವೆಂಕಾಭೋವಿ ಕಾಲೊನಿಯಲ್ಲಿ ಮಠ ಸ್ಥಾಪಿಸಿದರು. ಸೊಲ್ಲಾಪುರದಲ್ಲಿ ಹೊರತುಪಡಿಸಿದರೆ ಸಿದ್ದರಾಮೇಶ್ವರರ ಮಠ ಇರುವುದು ದಾವಣಗೆರೆಯಲ್ಲಿಯೇ. 1962ರಿಂದ ಸಿದ್ದರಾಮೇಶ್ವರ ರಥೋತ್ಸವ ಆರಂಭವಾಯಿತು. ಇದೀಗ ರಥೋತ್ಸವದ 50ನೇ ವರ್ಷಾಚರಣೆ ನಡೆಯುತ್ತಿದೆ.
ಆದ್ದರಿಂದ ರಾಜ್ಯದಾದ್ಯಂತ ಬೇರೆ ಬೇರೆ ಭಾಗಗಳಲ್ಲಿಯೂ ಅದ್ದೂರಿಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಮಾಜದ ಕುಲಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 9ಕ್ಕೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ವೆಂಕಾಭೋವಿ ಕಾಲೊನಿಯ ಮಠದಲ್ಲಿ ರಥೋತ್ಸವ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಸತ್ ಸದಸ್ಯರಾದ ಜಿ.ಎಂ. ಸಿದ್ದೇಶ್ವರ, ಜನಾರ್ದನ ಸ್ವಾಮಿ, ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಎ. ನಾರಾಯಣಸ್ವಾಮಿ, ಶಿವರಾಜ್ ತಂಗಡಗಿ, ಸುನಿಲ್ ವಲ್ಲೇಪುರ ಶಾಸಕ ಶಾಮ ನೂರು ಶಿವಶಂಕರಪ್ಪ, ಚಂದ್ರಪ್ಪ ಸೇರಿದಂತೆ ಭೋವಿ ಸಮಾಜದ ಪ್ರಮುಖ ಸಚಿವರು ಶಾಸಕರು ಹಾಗೂ ಜನಪ್ರತಿನಿಧಿಗಳು, ಎಲ್ಲ ಸಮಾಜದ ಸ್ವಾಮೀಜಿಗಳು, ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ರಥೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ವೈ. ರಾಮಪ್ಪ ತಿಳಿಸಿದರು.
ಬೃಹತ್ ಸಮಾವೇಶ
ರಥಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 1ರ ವೇಳೆಗೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪ ತಲುಪಲಿದೆ. ಅಲ್ಲಿ ಮಧ್ಯಾಹ್ನ 3ರಿಂದ ಬೃಹತ್ ಸಮಾವೇಶ ನಡೆಯಲಿದೆ. ಇದೇ ವೇಳೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಮಾವೇಶದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಬಗ್ಗೆ ಸಾಹಿತಿ ಗೊ.ರು. ಚನ್ನಬಸಪ್ಪ ಅಥವಾ ಸಾ.ಶಿ. ಮರುಳಯ್ಯ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸ್ವಯಂ ಪ್ರೇರಿತರಾಗಿ ಸಾವಿರಾರು ಕಾರ್ಯಕರ್ತರು, ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಚ್. ಶಿವಣ್ಣ, ಸಿ.ಎನ್. ವೀರಭದ್ರಪ್ಪ, ಜಯಣ್ಣ, ರುದ್ರಪ್ಪ, ಹೇಮರಾಜ್, ದ್ಯಾಮಣ್ಣ, ವಿ. ಗೋಪಾಲ್, ನೀರ್ಥಡಿ ಗುರುಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.