ADVERTISEMENT

ಮಹಿಳೆಯರ ಸುರಕ್ಷತೆಗೆ 24x7 ಸಹಾಯ ವಾಣಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 10:12 IST
Last Updated 11 ಡಿಸೆಂಬರ್ 2019, 10:12 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕೆಎಸ್‌ಪಿ ಆ್ಯಪ್ ಕುರಿತು ಮಾಹಿತಿ ನೀಡಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕೆಎಸ್‌ಪಿ ಆ್ಯಪ್ ಕುರಿತು ಮಾಹಿತಿ ನೀಡಿದರು   

ದಾವಣಗೆರೆ: ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ಪೊಲೀಸ್ 24X7 ಸಹಾಯವಾಣಿ ಆರಂಭಿಸಿದ್ದು, ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಬೀಟ್ ವ್ಯವಸ್ಥೆ ಇದ್ದು, ಈ ಸಮಯದಲ್ಲಿ ಮಹಿಳೆಯರು ತೊಂದರೆಯಲ್ಲಿದ್ದಾಗ ಸಹಾಯವಾಣಿಗೆ ಕರೆ ಮಾಡಬಹುದು. ಈಗಾಗಲೇ ಜಿಲ್ಲಾ ನಿಸ್ತಂತು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್‌ ನಂಬರ್‌, ಸ್ಥಿರ ದೂರವಾಣಿ ಸಂಖ್ಯೆಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಮ್ ಸಿಬ್ಬಂದಿ ತಕ್ಷಣವೇ ಆ ಮಾಹಿತಿಯನ್ನು ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸುತ್ತಾರೆ. ತಕ್ಷಣ ಕಾರ್ಯಪ್ರವೃತ್ತರಾಗುವ ಪೊಲೀಸರು ವಾಹನದೊಂದಿಗೆ ಕೆಲವೇ ನಿಮಿಷಗಳಲ್ಲಿ ನಿರ್ದಿಷ್ಟ ಸ್ಥಳ ತಲುಪಿ ನೆರವು ನೀಡುತ್ತಾರೆ’ ಎಂದು ಹೇಳಿದರು.

ADVERTISEMENT

ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ

ಸಹಾಯವಾಣಿಗಳ ಜೊತೆಗೆ ತುರ್ತು ಪ್ರತಿಕ್ರಿಯೆ ವ್ಯವಸ್ಥೆ (ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ) 112 ಸಂಖ್ಯೆಯ ಮೂಲಕ ಜಾರಿಗೊಳಿಸಲಾಗಿದೆ. 7 ಪಿಸಿಆರ್, 14 ಚೀತಾ (ಮೋಟಾರ್ ಸೈಕಲ್), 7 ರಾಷ್ಟ್ರೀಯ ಹೆದ್ದಾರಿ ಗಸ್ತು ವಾಹನಗಳು ಇದ್ದು, ಒಂದು ವಾಹನದಲ್ಲಿ ಒಬ್ಬ ಅಧಿಕಾರಿ, ಚಾಲಕ, ವಾಹನಗಳಲ್ಲಿ ಸೌಕರ್ಯಗಳು ಇರುತ್ತವೆ’ ಎಂದು ಹೇಳಿದರು.

ದುರ್ಗಾ ಪಡೆ

‘ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ತರಬೇತಿ ಪಡೆದ ‘ದುರ್ಗಾ ಪಡೆ’ ರಚಿಸಿದ್ದು, ಈ ಪಡೆಗೆ ಪ್ರತ್ಯೇಕ ವಾಹನ ನೀಡಲಾಗಿದೆ. ನಗರದ ಶಾಲಾ, ಕಾಲೇಜು, ಬಸ್ ನಿಲ್ದಾಣ, ಶಾಪಿಂಗ್ ಮಾಲ್, ಚಿತ್ರಮಂದಿರಗಳು, ಮಹಿಳಾ ವಸತಿ ನಿಲಯಗಳು, ಮಹಿಳೆಯರ ಕಾರ್ಯಕ್ರಮಗಳು ಇರುವ ಕಡೆ ಇದು ಕಾರ್ಯ ನಿರ್ವಹಿಸುತ್ತವೆ. ಮಹಿಳೆಯರಿಗೆ ಕಿರುಕುಳ ನೀಡಿದರೆ ಇಲ್ಲಿನ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ’ ಎಂದರು.

ಆಟೊಗಳಿಗೆ ಮಾಹಿತಿ ಫಲಕ

‘ಆಟೊಗಳಿಗೆ ಚಾಲಕರು ಹಾಗೂ ಮಾಲೀಕರ ವಿವರವನ್ನೊಳಗೊಂಡ ಮಾಹಿತಿ ಫಲಕ (ಡಿಸ್‌ಪ್ಲೇ ಬೋರ್ಡ್) ಅಳವಡಿಸುವ ಸಂಬಂಧ ಜಿಲ್ಲಾಧಿಕಾರಿ, ಆರ್‌ಟಿಒ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ದಾವಣಗೆರೆ ಸ್ಮಾರ್ಟ್ ಸಿಟಿ ಆಗಿರುವುದರಿಂದ ಡೀಸೆಲ್ ಆಟೊಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಡೀಸೆಲ್‌ ಆಟೊ ಹೊಂದಿರುವ ಕೆಲವರು ಗ್ಯಾಸ್‌ಗೆ ಪರಿವರ್ತನೆ ಆಗಲು ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಈ ಪ್ರಕ್ರಿಯೆ ಮುಗಿದ ನಂತರ ಡಿಸ್‌ಪ್ಲೇ ಬೋರ್ಡ್‌ ಅಳವಡಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.