ADVERTISEMENT

₹ 48.70ಲಕ್ಷ ಉಳಿತಾಯ ಬಜೆಟ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:40 IST
Last Updated 8 ಮಾರ್ಚ್ 2017, 10:40 IST

ಹರಪನಹಳ್ಳಿ: ಆದಾಯ ಮೂಲಗಳನ್ನು ಕ್ರೋಡೀಕರಿಸುವ ಉದ್ದೇಶ ಇಟ್ಟುಕೊಂಡು 2017–18ನೇ ಸಾಲಿನ ₹ 48.7 ಲಕ್ಷ ಉಳಿತಾಯದ ಬಜೆಟ್ಟನ್ನು ಬಿಜೆಪಿ ಅಧ್ಯಕ್ಷ ಎಚ್‌.ಕೆ.ಹಾಲೇಶ್‌ ಮಂಡಿಸಿದರು. ಕುಡಿಯುವ ನೀರು ಸಂಸ್ಕರಣ ಘಟಕದ ಆವರಣದಲ್ಲಿ ಮಂಗಳವಾರ ಪುರಸಭೆ ಏರ್ಪಡಿಸಿದ್ದ  ಸಭೆಯಲ್ಲಿ ಬಜೆಟ್ ಮಂಡಿಸಿದ್ದು ವಿಶೇಷವಾಗಿತ್ತು.

ಬ್ಯಾಂಕ್‌ನ ಶಿಲ್ಕು ₹ 2.78 ಕೋಟಿ ಮತ್ತು  ₹ 49.61ಕೋಟಿ ನಿರೀಕ್ಷಿತ ಆದಾಯ ಒಟ್ಟು ₹ 52.39 ಕೋಟಿ. ನಿರೀಕ್ಷಿತ ವೆಚ್ಚ  ₹ 51.91 ಕೋಟಿಯನ್ನು ತೆಗೆದರೆ ₹ 48.70 ಲಕ್ಷ ಉಳಿತಾಯವಾಗಲಿದೆ ಎಂದು ಮಂಡನೆ ಮಾಡಿದರು.

ನಿರೀಕ್ಷಿತ ಆದಾಯಗಳು: ನಗರೋತ್ಥಾನ ಅನುದಾನ ₹ 5 ಕೋಟಿ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ₹ 2.18 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ ₹ 5 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕ ₹ 42.73 ಲಕ್ಷ, ನೀರಿನ ಶುಲ್ಕ ₹ 42 ಲಕ್ಷ, ಕುರಿಸಂತೆ, ವಾರದ ಸಂತೆಯಿಂದ ₹ 10 ಲಕ್ಷ, ಮನೆ ಕಂದಾಯದ ಮೂಲಕ ₹ 79.56 ಲಕ್ಷ, ಪರಿಶೀಷ್ಟ ಜಾತಿ,

ಪಂಗಡ ಕಲ್ಯಾಣ ಕಾರ್ಯಕ್ರಮದ ಅನುದಾನ ₹ 63.35 ಲಕ್ಷ, ಕೇಂದ್ರ ಸರ್ಕಾರದ ಅನುದಾನ ₹ 2 ಕೋಟಿ, ಸಂಸದರ ಮತ್ತು ಶಾಸಕರ ಅನುದಾನ ₹ 50 ಲಕ್ಷ, ಕುಡಿಯುವ ನೀರಿಗ ಸಮಸ್ಯೆ ನಿವಾರಣೆಗೆ ₹ 75 ಲಕ್ಷ, ಗುತ್ತಿಗೆದಾರರ ಭದ್ರತಾ ಠೇವಣಿ ₹ 94.19 ಲಕ್ಷ, ಗುತ್ತಿಗೆದಾರರ ಠೇವಣಿ ₹ 47.09ಲಕ್ಷ, ಗುತ್ತಿಗೆದಾರರ ವಾಣಿಜ್ಯ ತೆರಿಗೆ ಮುಂತಾದ ಅನುದಾನ ₹ 1.90 ಕೋಟಿ, ವಿವಿಧ ಕರಗಳು ₹ 16.46 ಕೋಟಿ, ಅಸಾಮಾನ್ಯ ಬಂಡವಾಳ ₹ 96.91ಲಕ್ಷ, ಅಕ್ರಮ ಸಕ್ರಮ ₹ 50 ಲಕ್ಷ ಪ್ರಮುಖ ನಿರೀಕ್ಷಿತ ಆದಾಯಗಳಾಗಿವೆ.

ನಿರೀಕ್ಷಿತ ವೆಚ್ಚಗಳು: ಸಿಬ್ಬಂದಿ ವೇತನ ₹ 3 ಕೋಟಿ, ಸೇವಾ ತೆರಿಗೆ ₹ 6.49 ಲಕ್ಷ, ಕಚೇರಿ ಪುಸ್ತಕಗಳು ಮತ್ತು ಇತರೆ ₹ 5 ಲಕ್ಷ, ಪುರಸಭೆ ಮುಖ್ಯಾಧಿಕಾರಿ ಬಾಡಿಗೆ ವಾಹನ ಮತ್ತು ವೆಚ್ಚ ₹ 3.80 ಲಕ್ಷ, ಕಾನೂನು ವೆಚ್ಚ ₹ 3 ಲಕ್ಷ, ಜಾಹೀರಾತು ಮತ್ತು ಪ್ರಚಾರ ₹ 5 ಲಕ್ಷ, ಹೊರಗುತ್ತಿಗೆ ಮತ್ತು ಬೀದಿದೀಪ ನಿರ್ವಹಣೆ ₹ 25 ಲಕ್ಷ, ಸಾರ್ವಜನಿಕ ಶೌಚಾಲಯಗಳಿಗೆ ವಿದ್ಯುತ್‌ ಪೂರೈಸಲು ₹ 3 ಲಕ್ಷ.

ಹೊರಗುತ್ತಿಗೆ ನೌಕರರ ವೇತನ ₹ 82.26 ಲಕ್ಷ, ರಾಸಾಯನಿಕ ವಸ್ತು ಖರೀದಿ ₹ 25 ಲಕ್ಷ, ನೀರು ಸರಬರಾಜು ಬಿಡಿ ಭಾಗಗಳು ₹ 25 ಲಕ್ಷ, ಕೇಂದ್ರ ಸರ್ಕಾರದ ಅನುದಾನ ₹ 2.01 ಕೋಟಿ, ಸಂಸದರ ಅನುದಾನ ₹ 50 ಲಕ್ಷ, ನಾಮ ಫಲಕಗಳ ಅಳವಡಿಸುವಿಕೆ ₹ 35 ಲಕ್ಷ, ಸ್ವಚ್ಛ ಭಾರತ್‌ ಅಭಿಯಾನಕ್ಕೆ ₹ 25 ಲಕ್ಷ, ನೀರಿನ ಸಮಸ್ಯೆ ನಿವಾರಣೆಗೆ ₹ 75 ಲಕ್ಷ ನಿರೀಕ್ಷಿತ ವೆಚ್ಚಗಳನ್ನು ಮಾಡಲಾಗುವುದು ಎಂದರು.

ಹೊಸ ಕಾಮಗಾರಿಗಳು: ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಿಂದ ಉಪ ನೋಂದಣಿ ಕಚೇರಿಯವರೆಗೆ ಪಾದಚಾರಿಗಳಿಗೆ ರಸ್ತೆ ಮತ್ತು  ಡಿವೈಡರ್‌ಗಳಿಗೆ ಗ್ರಿಲ್‌ ಅಳವಡಿಸಲು ₹ 40 ಲಕ್ಷ. 27 ವಾರ್ಡ್‌ಗಳಲ್ಲಿ ರಸ್ತೆಗಳಿಗೆ ನಾಮಫಲಕ ಹಾಕಲು ₹ 35 ಲಕ್ಷ, ಉದ್ಯಾನವನ ಅಭಿವೃದ್ಧಿ ಮತ್ತು ನಗರ ಹಸಿರೀಕರಣಕ್ಕೆ  ₹ 50 ಲಕ್ಷ, ಹರಿಹರ ರಸ್ತೆ ಆಶ್ರಯ ಕಾಲೋನಿ ಮತ್ತು ಬಾಪೂಜಿ ನಗರದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ₹ 1.50 ಕೋಟಿ.

ಅಧ್ಯಕ್ಷ ಎಚ್‌.ಕೆ. ಹಾಲೇಶ್‌ ಪುರಸಭೆ ಕಚೇರಿಯಲ್ಲಿ ಬಜೆಟ್ ಮಂಡಿಸದೇ ನಾಲ್ಕು ಕಿ.ಮೀ ದೂರದ ಕುಡಿಯುವ ನೀರು ಸಂಸ್ಕರಣ ಘಟಕ ಆವರಣದಲ್ಲಿ ಸಭೆ ನಡೆಸಿ ವಿಶೇಷ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸದಸ್ಯರಿಗೆ ಬಿಳಿ ಬಣ್ಣದ ಅಂಗಿ ಮತ್ತು ಲುಂಗಿ, ಶಾಲು, ಸದಸ್ಯೆಯರಿಗೆ ಕೆನೆ ಬಣ್ಣದ ಸೀರೆ–ಕುಪ್ಪಸ ಸಮವಸ್ತ್ರ ಧರಿಸಿ ಸದಸ್ಯರು ಸಭೆಗೆ ವಿಶೇಷ ಶೋಭೆ ತಂದಿದ್ದರು.

ಜನತಾದಳದ ಸದಸ್ಯ ಡಂಕಿ ಇಮ್ರಾನ್‌ ನಾಲ್ಕು ಕಿ.ಮೀ. ದೂರದಿಂದ ಕುದುರೆ ಸವಾರಿ ಮಾಡುತ್ತಾ ಬಂದು, ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸದಸ್ಯರ ಒಗ್ಗಟ್ಟು ಮತ್ತು ಸಕಾರಾತ್ಮಕ ಬೆಳವಣಿಗೆಯಿಂದ ಈ ವಿಶೇಷ ಸಭೆಯನ್ನು ಏರ್ಪಡಿಸ ಲಾಗಿತ್ತು ಎಂದು ಎಚ್‌.ಕೆ.ಹಾಲೇಶ್‌ ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಕ್ಷಗಳ ಸದಸ್ಯರು 2017–18ನೇ ಸಾಲಿನ  ಬಜೆಟ್ಟನ್ನು ಸ್ವಾಗತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಐ.ಬಸವರಾಜ್‌ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT