ADVERTISEMENT

ಬಯಲು ಶೌಚಮುಕ್ತ: ಸಿಇಒ ವಿರುದ್ಧ ತಿರುಗಿಬಿದ್ದ ಸಭೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 9:38 IST
Last Updated 5 ಜನವರಿ 2018, 9:38 IST
ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಅಧ್ಯಕ್ಷತೆಯಲ್ಲಿ ನಡೆಯಿತು
ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಅಧ್ಯಕ್ಷತೆಯಲ್ಲಿ ನಡೆಯಿತು   

ದಾವಣಗೆರೆ: ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿಯಲ್ಲಿ ಕೈಗೊಂಡ ಬಯಲು ಶೌಚ ಮುಕ್ತ ಆಂದೋಲನದ ಅನುಷ್ಠಾನದಲ್ಲಿ ಸಿಇಒ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಪಕ್ಷಾತೀತವಾಗಿ ಅವರ ಮೇಲೆ ಮುಗಿಬಿದ್ದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಯಲು ಶೌಚ ಮುಕ್ತ ಯೋಜನೆ ಅನುಷ್ಠಾನದಲ್ಲಿ ಆದ ಲೋಪಗಳ ಪಟ್ಟಿ ಮಾಡಿ ಸಿಇಒ ಎಸ್‌.ಅಶ್ವತಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಯೋಜನೆ ಅನುಷ್ಠಾನಕ್ಕೆ ಫಲಾನುಭವಿಗಳ ಮೇಲೆ ಒತ್ತಡ ಹೇರಿದ್ದೀರಿ, ಪ್ರಚಾರದ ಆಸೆಯಿಂದ ಆಂದೋಲನ ಮಾಡಿದ್ದೀರಿ, ಅನುದಾನ ಮೀಸಲಿಡದೆ ಅನುಷ್ಠಾನ ಮುಂದಾಗಿದ್ದೀರಿ’ ಎಂದು ಅಧ್ಯಕ್ಷರೂ ಒಳಗೊಂಡಂತೆ ಸದಸ್ಯರು ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು.

ADVERTISEMENT

ಯೋಜನೆಯಡಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಆಗದಿರುವುದು, ಬಿಡುಗಡೆಯಾದವರಿಗೆ ಪದೇ ಪದೇ ಅನುದಾನ ನೀಡಿರುವ ಪ್ರಕರಣಗಳ ದಾಖಲೆಗಳನ್ನೂ ಪ್ರದರ್ಶಿಸಿದರು. ಈ ಅಕ್ರಮಗಳು ಗೊತ್ತಿದ್ದೂ ನೀವು ನಿರ್ಲಕ್ಷಿಸಿದ್ದೀರಿ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. 

ಸಭೆಯ ಆರಂಭದಲ್ಲಿ ಸದಸ್ಯ ಬಿ.ಎಂ.ವಾಗೀಶಸ್ವಾಮಿ, ‘ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮದಲ್ಲಿ ಸ್ಥಳೀಯ ಶಾಸಕರ ಸಂಬಂಧಿಯೊಬ್ಬರು ಬಯಲು ಶೌಚ ಮುಕ್ತ ಯೋಜನೆಯ ಅನುದಾನವನ್ನು ಮೂರು ಬಾರಿ ಪಡೆದಿದ್ದಾರೆ. ಈ ಸಂಬಂಧ ದಾಖಲೆಗಳನ್ನು ನೀಡಿದರೂ ಸಿಇಒ ಹಾಗೂ ಇಒ ಇಬ್ಬರೂ ಕ್ರಮ ಕೈಗೊಂಡಿಲ್ಲ’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ವಾಗೀಶಸ್ವಾಮಿ ಅವರ ಮಾತನ್ನು ಸದಸ್ಯರಾದ ಲೋಕೇಶ್ವರ, ಜಿ.ರಶ್ಮಿ, ಶೈಲಜಾ ಬಸವರಾಜ್, ಆರುಂಡಿ ಸುವರ್ಣ ನಾಗರಾಜ, ಕೆ.ಎಸ್‌.ಬಸವಂತಪ್ಪ, ಕೆ.ಎಚ್‌.ಓಬಳಪ್ಪ ಅವರೂ ಬೆಂಬಲಿಸಿದರು. ‘ಬಯಲು ಶೌಚಮುಕ್ತ ಯೋಜನೆಯನ್ನು ಪ್ರಚಾರ ಕ್ಕಾಗಿ ಮಾಡಿದ್ದೀರಿ. ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ಅಲಕ್ಷಿಸಿದ್ದೀರಿ’ ಎಂದು ಸಿಇಒ ಅವರನ್ನು ಉದ್ದೇಶಿಸಿ ಲೋಕೇಶ್ವರ, ರಶ್ಮಿ ವಾಗ್ದಾಳಿ ನಡೆಸಿದರು.

‘ವೈಯಕ್ತಿಕ ಹಿತಾಸಕ್ತಿ ಇಲ್ಲ’: ಪ್ರತಿಕ್ರಿಯಿಸಿದ ಸಿಇಒ ಎಸ್‌.ಅಶ್ವತಿ, ‘ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ಜಿಲ್ಲೆಯ ಎಲ್ಲೆಲ್ಲಿ ಈ ರೀತಿಯ ದೂರುಗಳು ಕೇಳಿಬಂದಿವೆ ಅವುಗಳನ್ನೂ ತನಿಖೆ ಮಾಡಿ ವರದಿ ನೀಡುವಂತೆ ಆಯಾ ತಾಲ್ಲೂಕು ಇಒಗಳಿಗೆ ಸೂಚನೆ ನೀಡಿದ್ದಾನೆ’ ಎಂದು ತಿರುಗೇಟು ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಅನುದಾನ ಜಗಳೂರು ಪಾಲಾಗುತ್ತಿದೆ. ಎಲ್ಲಾ ತಾಲ್ಲೂಕುಗಳಿಗೂ ಸಮಾನ ಹಂಚಿಕೆಯಾಗಬೇಕು ಎಂದು ಸದಸ್ಯರಾದ ಪಿ.ವಾಗೀಶ್, ಆರುಂಡಿ ಸುವರ್ಣ ನಾಗರಾಜ, ಜೆ.ಸವಿತಾ, ಬಸವಂತಪ್ಪ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಸಿಇಒ, ‘ಖಾತ್ರಿ ಅನುದಾನ ರಾಜ್ಯ ಮಟ್ಟದಲ್ಲಿ ಬಿಡುಗಡೆಯಾಗುತ್ತದೆ. ಇದಕ್ಕೆ ಜಿಲ್ಲಾ ಮಟ್ಟದಲ್ಲಿ ತಡೆಹಿಡಿಯಲು ಬರುವುದಿಲ್ಲ. ಅಷ್ಟಕ್ಕೂ ಜಿಲ್ಲೆಯಲ್ಲಿ ಮಾನವ ಹಾಗೂ ಯಂತ್ರ ಕೆಲಸದ ಅನುಪಾತ ಹೊಂದಾಣಿಕೆ ಆಗದಿರುವುದರಿಂದ ದಾವಣಗೆರೆ ಜಿಲ್ಲೆಗೆ ಸಕಾಲಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ’ ಎಂದರು.

ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ, ಬೆಲೆ ಇಲ್ಲ. ಕೇಂದ್ರ ಸರ್ಕಾರ ತುರ್ತಾಗಿ ಖರೀದಿ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಬೇಕು. ಈ ಸಂಬಂಧ ಜಿಲ್ಲಾ ಪಂಚಾಯ್ತಿ ನಿರ್ಣಯ ಕೈಗೊಳ್ಳಬೇಕು ಎಂದು ಬಸವಂತಪ್ಪ ಆಗ್ರಹಿಸಿದರು. ಇದಕ್ಕೆ ಡಿ.ಜಿ.ವಿಶ್ವನಾಥ್‌, ಓಬಳಪ್ಪ, ಲೋಕೇಶ್ವರ‍ ಧ್ವನಿಗೂಡಿಸಿದರು.

ರಾಜ್ಯ ಸರ್ಕಾರವೂ ಖರೀದಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕು ಎಂದು ಬಿ.ಎಂ.ವಾಗೀಶಸ್ವಾಮಿ ಒತ್ತಾಯಿಸಿದರು. ‘ರಾಜ್ಯ ಸರ್ಕಾರದಿಂದ ಕೃಷಿ ಸಚಿವ ಬೈರೇಗೌಡ ಎರಡೆರಡು ಬಾರಿ ಮನವಿ ಮಾಡಿದ್ದಾರೆ. ಅದು ಪಡಿತರ ಧಾನ್ಯ ಅಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಅದಕ್ಕಾಗಿ ತಡವಾಗುತ್ತಿದೆ ಎನ್ನಲಾಗಿದೆ’ ಎಂದು ಬಸವಂತಪ್ಪ ಪ್ರತಿಕ್ರಿಯಿಸಿದರು. 

ತಾಡಪಾಲು ವಿತರಣೆಯನ್ನು ಕೃಷಿ ಇಲಾಖೆ ಸಮಪರ್ಕವಾಗಿ ಮಾಡುತ್ತಿಲ್ಲ ಎಂದು ರಶ್ಮಿ, ಕೆ.ಆರ್‌.ಜಯಶೀಲಾ, ಬಿ.ಎಸ್.ಸಾಕಮ್ಮ ಆರೋಪಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ ಉಪಸ್ಥಿತರಿದ್ದರು.

ನೀವೇನ್‌ ಮಾತಾಡುತ್ತಿದ್ದೀರಿ ಮೇಡಂ...

‘ಯೋಜನೆ ಅನುಷ್ಠಾನಕ್ಕೂ ಮೊದಲು ಪ್ರಸ್ತಾವನೆ ಸಿದ್ಧಪಡಿಸಿಕೊಳ್ಳಬೇಕಿತ್ತು. ಅನುದಾನ ಮೀಸಲಿಟ್ಟೇ ಅನುಷ್ಠಾನಕ್ಕೆ ಮುಂದಾಗಬೇಕಿತ್ತು’ ಎಂದು ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಮಾತಿನಿಂದ ವಿಚಲಿತರಾದ ಸಿಇಒ ಎಸ್‌.ಅಶ್ವತಿ, ‘ನೀವೇನ್‌ ಮಾತಾಡುತ್ತಿದ್ದೀರಿ ಮೇಡಂ... ಸ್ವಚ್ಛ ಭಾರತ ವಿಷನ್‌ ಕೇಂದ್ರ ಸರ್ಕಾರದ ಯೋಜನೆ. ಯಾವಾಗ ಅನುದಾನ ಬಿಡುಗಡೆಯಾಗುತ್ತದೆಂದು ಹೇಳಲು ಆಗುವುದಿಲ್ಲ. ಅನುದಾನ ಮೊದಲೇ ಮೀಸಲಿಡಲು ಬರುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ನನಗೆ ಈ ಯೋಜನೆ ಅನುಷ್ಠಾನಗೊಳಿಸಿದರೆ ವೈಯಕ್ತಿಕ ಲಾಭ ಇಲ್ಲ. ನಾನು ಅಧಿಕಾರಿ. ನೀವು ಜನಪ್ರತಿನಿಧಿಗಳು. ನೀವೇ ಪವರ್‌ಫುಲ್. ಬಯಲು ಶೌಚ ಮುಕ್ತ ಯೋಜನೆಗೆ ಜಿಲ್ಲೆಗೆ ₹10 ಕೋಟಿ ಬಿಡುಗಡೆ ಬಾಕಿ ಇದೆ. ನೀವೇ ಮಾತಾಡಿ, ಅನುದಾನ ಬಿಡುಗಡೆ ಮಾಡಿಸಿ’ ಎಂದು ತೀಕ್ಷ್ಣವಾಗಿ ನುಡಿದರು.

ಮೊದಲ ಬಾರಿಗೆ ಕೇಸರಿ ಶಾಲು ತೊಟ್ಟು ತಡವಾಗಿ ಸಭೆಗೆ ಬಂದ ಸದಸ್ಯ ಎಂ.ಆರ್‌.ಮಹೇಶ್, ಮಧ್ಯೆದಲ್ಲಿ ಎದ್ದು ನಿಂತು, ‘ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯೇ ಕಾರಣ’ ಎಂದು ಆರೋಪಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಾದ ಜಿ.ಸಿ.ನಿಂಗಪ್ಪ, ಕೆ.ಎಚ್‌.ಓಬಳಪ್ಪ, ಕೆ.ಎಸ್.ಬಸವಂತಪ್ಪ ತೀವ್ರ ಆಕ್ಷೇಪಿಸಿದರು. ನಂತರ ಮಾತು ಬದಲಿಸಿದ ಮಹೇಶ್, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್‌ ಪ್ರದೇಶದ ಮೆಕ್ಕೆಜೋಳ ಸೈನಿಕ ಹುಳು ಬಾಧೆಗೆ ತುತ್ತಾಗಿದ್ದು, ₹ 45 ಕೋಟಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಮಾಹಿತಿ ನೀಡಿದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌.ಜಿ.ನಟರಾಜ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಜಿಲ್ಲೆಯಲ್ಲಿ 78 ಸಾವಿರ ರೈತರು ಫಸಲ್‌ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ್ದಾರೆ. ಕಳೆದ ಬಾರಿ ವಿಮೆ ಮಾಡಿಸಿದ್ದ 25 ಸಾವಿರ ರೈತರಲ್ಲಿ 17 ಸಾವಿರ ರೈತರಿಗೆ ವಿಮಾ ಹಣ ಬಂದಿದೆ. ಹತ್ತಿ, ಭತ್ತದ ಬೆಳೆಗಳಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಚರ್ಚೆ ನಡೆದಿರುವುದರಿಂದ ಇನ್ನೂ 8 ಸಾವಿರ ರೈತರಿಗೆ ಬಾಕಿ ಉಳಿದಿದೆ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.