ADVERTISEMENT

‘ಕೆರೆ ಕಟ್ಟಿ ಜನರ ಮನದಲ್ಲಿ ಹಸಿರಾದ ಸಿದ್ಧರಾಮರು’

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 9:12 IST
Last Updated 16 ಜನವರಿ 2018, 9:12 IST

ಬಸವಾಪಟ್ಟಣ: ‘12ನೇ ಶತಮಾನದ ತತ್ವಜ್ಞಾನಿಗಳೆನಿಸಿದ ಸಿದ್ಧರಾಮರು ಸೊನ್ನಲಿಗೆ ಪ್ರದೇಶದಲ್ಲಿ ಕೆರೆಗಳನ್ನು ಕಟ್ಟಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಬೋವಿ ಸಮಾಜದ ಅಧ್ಯಕ್ಷ ಎಚ್‌.ಆನಂದಪ್ಪ ಹೇಳಿದರು. ಕಣಿವೆಬಿಳಚಿಯಲ್ಲಿ ಬೋವಿ ಸಮಾಜದಿಂದ ಸೋಮವಾರ ಏರ್ಪಡಿಸಿದ್ದ ಸಿದ್ಧರಾಮೇಶ್ವರ ಅವರ 846 ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೋವಿ ಜನಾಂಗದವರು ಪ್ರಾಚೀನ ಕಾಲದಿಂದ ಅರಮನೆ, ಕೋಟೆ, ದೇಗುಲ ಹಾಗೂ ಕೆರೆಗಳನ್ನು ನಿರ್ಮಿಸಿದ ನಿಜವಾದ ವಾಸ್ತು ಶಿಲ್ಪಿಗಳು. ಸಿದ್ಧರಾಮರು ಸೊನ್ನಲಿಗೆಯ ಸುಂದರ ಕೆರೆಯ ಶ್ರೇಷ್ಠ ವಾಸ್ತು ಶಿಲ್ಪಿ. ಯುವಕರು ದುಶ್ಚಟಗಳಿಂದ ದೂರವಾಗಿ ಅವರ ಆದರ್ಶಗಳನ್ನು ಪಾಲಿಸಿದಾಗ ಜಯಂತ್ಯುತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಆನಂದಪ್ಪ ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ಸಿದ್ಧರಾಮರು ಜಾತ್ಯಾತೀತ ಸಮಾಜವನ್ನು ನಿರ್ಮಿಸಿ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿದವರು ಎಂದರು.

ADVERTISEMENT

ತಾಲ್ಲೂಕು ಬೋವಿ ಸಮಾಜದ ಅಧ್ಯಕ್ಷ ರಾಜು, ಎಪಿಎಂಸಿ ನಿರ್ದೇಶಕ ಎಸ್‌.ಅಣ್ಣೋಜಿರಾವ್‌, ಗ್ರಾಮ ಪಂಚಾಯ್ತಿ ಸದಸ್ಯ ಗಿರಿಯಾಬೋವಿ ಎಂ.ಸಿ.ನಾರಾಯಣರಾವ್‌, ಡಿ.ಮಂಜುನಾಥ ಜಾಧವ್‌, ಕೆ.ಬಾಬುರಾವ್‌ ಮಾತನಾಡಿದರು. ಬೋವಿ ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಶಿವಮೂರ್ತಿನಾಯ್ಕ ಸ್ವಾಗತಿಸಿದರು. ಬಣಕಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.