ADVERTISEMENT

ತೇಪೆ ರಾಜಕಾರಣ ಬೇಕಿಲ್ಲ; ಭರವಸೆ ಈಡೇರಿಸಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 10:11 IST
Last Updated 23 ಜನವರಿ 2018, 10:11 IST

ದಾವಣಗೆರೆ: ಸ್ವಾತಂತ್ರ್ಯ ಬಂದಾಗ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ ಸಮಾಜವನ್ನು ಮುಂದಕ್ಕೆ ಕರೆಯೊಯ್ಯುವ ಕನಸುಗಳಿದ್ದವು. ಆದರೆ, ಸಮಾಜವೇ ಹಿಂದಕ್ಕೆ ಹೋಗಲು ಯತ್ನಿಸುತ್ತಿತ್ತು. ಇಂದು ಸರ್ಕಾರವೇ ಸಮಾಜವನ್ನು ಬಲವಂತವಾಗಿ ಹಿಂದಕ್ಕೆ ಎಳೆದೊಯ್ಯುತ್ತಿದೆ ಎಂದು ಸ್ವರಾಜ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರ ಮಹಾದೇವ ಟೀಕಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಸ್ವರಾಜ್‌ ಇಂಡಿಯಾ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಪೇಶ್ವೆಗಳ ಕಾಲದ ಆಡಳಿತ ಜಾರಿಯಲ್ಲಿದೆ. ಗಾಂಧಿಯನ್ನು ಕೊಂದ ಗೂಡ್ಸೆ ರಾಷ್ಟ್ರಪ್ರೇಮಿಯಾಗುತ್ತಿದ್ದಾನೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಒಂದು ಲಕ್ಷ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಕಪ್ಪುಹಣ ಹೊರತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಜಮೆ ಮಾಡುವುದಾಗಿ ಹೇಳಿತ್ತು. ಐದು ಪೈಸೆಯೂ ಹಾಕಲಿಲ್ಲ ಎಂದರು.

ADVERTISEMENT

ಇಷ್ಟಾದರೂ ಪ್ರಧಾನಿ ಬಣ್ಣಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ಈ ಬಗ್ಗೆ ಜನರು ಗಟ್ಟಿದನಿ ಎತ್ತಬೇಕು. ಕೊಟ್ಟ ಮಾತನ್ನು ಏಕೆ ಈಡೇರಿಸಿಲ್ಲ ಎಂದು ಪತ್ರ ಬರೆದು ಒತ್ತಾಯಿಸಬೇಕು. ಆದರೆ, ಜನರಿಗೆ ಮರೆವಿನ ಶಾಪ ತಟ್ಟಿದೆ ಎಂದರು.

ಮತದಾರರನ್ನು ಓಲೈಸುವ ಮಾತುಗಳು ಬೇಡ. ತೇಪೆ ಹಾಕುವ ರಾಜಕಾರಣವೂ ಅವಶ್ಯಕತೆ ಇಲ್ಲ. ಬದಲಾಗಿ, ಭರವಸೆಗಳನ್ನು ಈಡೇರಿಸುವ ರಾಜಕಾರಣಿಗಳು ಬೇಕು. ಈ ನಿಟ್ಟಿನಲ್ಲಿ ಸ್ವರಾಜ್‌ ಇಂಡಿಯಾ ಪಕ್ಷ ಉದಯಿಸಿದೆ. ಭ್ರಷ್ಟ ವ್ಯವಸ್ಥೆಯನ್ನು ಬದಲಿಸಲು ಪಣತೊಟ್ಟಿದೆ ಎಂದರು.

ರಾಜ್ಯದಲ್ಲಿ ಮೈಸೂರು, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಸ್ವರಾಜ್ ಇಂಡಿಯಾ ಪಕ್ಷಕ್ಕೆ ಹೆಚ್ಚು ಜನರು ಬೇಕಿಲ್ಲ. ಆದರ್ಶ, ಕನಸು, ವಿಶ್ವಾಸತೆ ಹೊಂದಿರುವ 10 ಜನರಿದ್ದರೆ ಸಾಕು. ಎಲ್ಲ ಸಮುದಾಯ, ಮಹಿಳೆಯರನ್ನು ಒಳಗೊಂಡು ಪಕ್ಷವನ್ನು ಕಟ್ಟಲಾಗುವುದು ಎಂದರು.

ಸ್ವರಾಜ್‌ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ.ಅಜಿತ್‌ ಝಾ ಮಾತನಾಡಿ, ‘1980ರ ಅವಧಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡಿನಲ್ಲಿ ರೈತ ಚಳವಳಿಗಳು ಮುಂಚೂಣಿಯಲ್ಲಿದ್ದವು. ಸರ್ಕಾರವನ್ನೇ ಅಲುಗಾಡಿಸುವಷ್ಟು ಪ್ರಭಾವಿಯಾಗಿದ್ದವು. ಆದರೆ, ಈಗ ರೈತ ಚಳವಳಿಗಳು ಕಾವು ಕಳೆದುಕೊಂಡಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ದೇಶದಲ್ಲಿ ರೈತ ಚಳವಳಿಯನ್ನು ಮುನ್ನಲೆಗೆ ತರಲು ಸ್ವರಾಜ್‌ ಇಂಡಿಯಾ ಆಂದೋಲನವನ್ನು ಹಮ್ಮಿಕೊಂಡಿದೆ. ದೇಶದ ಬಹುದೊಡ್ಡ ವರ್ಗವಾಗಿರುವ ರೈತರ ಹೋರಾಟಗಳಿಗೆ ಕೈಜೋಡಿಸಿದೆ. 200 ರೈತ ಸಂಘಟನೆಗಳ ಜತೆ ಸೇರಿ ದೆಹಲಿಯಲ್ಲಿ ಕಿಸಾನ್‌ ಸಂಯೋಜಿತ ಸಮಿತಿ ರಚಿಸಲಾಗಿದೆ. ಬೆಳೆಗೆ ವೈಜ್ಞಾನಿಕ ದರ ನಿಗದಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ ಎಂದರು.

ಪಕ್ಷದ ಸಂಚಾಲನ ಸಮಿತಿ ಸದಸ್ಯ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಜನಪರ ಕಾರ್ಯಗಳು ನಡೆಯುತ್ತಿಲ್ಲ. ಕೋಮು ಭಾವನೆಗಳನ್ನು ಕೆರಳಿಸಲಾಗುತ್ತಿದೆ. ರೈತರು ಹೋರಾಟಗಳಿಗೆ ಮಾತ್ರ ಸೀಮಿತರಾಗದೆ ರಾಜಕೀಯ ಪ್ರಜ್ಞೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಪಕ್ಷದ ಸಂಘಟನಾ ಸಮಿತಿ ರಾಜ್ಯ ಸಂಚಾಲಕ ಅಮ್ಜದ್ ಪಾಷಾ ಮಾತನಾಡಿದರು. ಸಮಿತಿಯ ಪುರುಷೋತ್ತಮ್, ಬಡಗಲಪುರ ನಾಗೇಂದ್ರ, ಅರುಣ್‌ ಕುಮಾರ್ ಕುರುಡಿ, ಬಿ.ಕರುಣಾಕರ್, ವಸಂತ್‌ ಕುಮಾರ್, ಹೆಬ್ಬಾಲೆ ಲಿಂಗರಾಜು, ಎಸ್‌.ಹಾಲಪ್ಪ, ಮೌಲ ನಾಯಕ್, ಬಲ್ಲೂರು ರವಿಕುಮಾರ್, ಅನೀಸ್‌ ಪಾಷಾ ಅವರೂ ಇದ್ದರು.

‘ಸ್ಥಳೀಯ ಚುನಾವಣೆ ನಮ್ಮ ಗುರಿ’

ವಿಧಾನಸಭಾ ಚುನಾವಣೆಗೆ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮವಾಗಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ, ಮುಂದಿನ ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ ಚುನಾವಣೆ ಮೇಲೆ ಸ್ವರಾಜ್ ಇಂಡಿಯಾ ಕಣ್ಣಿಟ್ಟಿದೆ. ರೈತ ಸಂಘಗಳು, ಜನಸಂಗ್ರಾಮ ಪರಿಷತ್, ಜನಾಂದೋಲನ ಮಹಾಮೈತ್ರಿ ಸಹಯೋಗದಲ್ಲಿ ಸ್ಥಳೀಯ ಚುನಾವಣೆಗಳನ್ನು ಎದುರಿಸಲಾಗುವುದು ಎಂದು ದೇವನೂರ ಮಹಾದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.