ADVERTISEMENT

‘ಕೊನೆ ಭಾಗಕ್ಕೆ ಭದ್ರಾ ನೀರು ಬಿಡಿ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 9:52 IST
Last Updated 31 ಜನವರಿ 2018, 9:52 IST

ದಾವಣಗೆರೆ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಭದ್ರಾ ನಾಲೆ ನೀರು ಹರಿಯದಿರುವುದನ್ನು ಖಂಡಿಸಿ ಮಂಗಳವಾರ ದಾವಣಗೆರೆ–ಚನ್ನಗಿರಿ ರಸ್ತೆಯಲ್ಲಿ ಉರುಳುಸೇವೆ ಮಾಡಿ ರೈತರು ಪ್ರತಿಭಟನೆ ನಡೆಸಿದರು.

ಹದಡಿ, ಕೈದಾಳೆ, ಗಿಯಾಪುರ, ಕುಕ್ಕುವಾಡ, ಕಾರಿಗನೂರು, ಕೊಳೇನಹಳ್ಳಿ, ನಾಗರಸನಹಳ್ಳಿ, ಜಡಗನಹಳ್ಳಿ, ಬಲ್ಲೂರು, ಶಿವನಹಳ್ಳಿ, ಕನಗೊಂಡನಹಳ್ಳಿ, ಭಟ್ಲಕಟ್ಟೆ, ಮುದಹದಡಿ, ಜರಿಕಟ್ಟೆ ಗ್ರಾಮಸ್ಥರು ರಸ್ತೆ ತಡೆದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ರೈತ ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ‘ಮೂರು ಹಂಗಾಮಿನಿಂದ ಭದ್ರಾ ಅಚ್ಚುಕಟ್ಟು ಭಾಗದ ರೈತರು ಬೆಳೆ ಬೆಳೆದಿಲ್ಲ. ಈ ಬಾರಿಯ ಬೇಸಿಗೆ ಹಂಗಾಮಿಗೆ 105 ದಿನ ನೀರು ಹರಿಸಲಾಗುತ್ತಿದೆ. ನೀರು ಬಿಟ್ಟು 25 ದಿನ ಕಳೆದರೂ ಕೊನೆ ಭಾಗದ ರೈತರ ಜಮೀನಿಗೆ ನೀರು ಹರಿದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನೀರಾವರಿ ಹಾಗೂ ಬೆಸ್ಕಾಂ ಅಧಿಕಾರಿಗಳು ನೆಪಮಾತ್ರಕ್ಕೆ ನಾಲೆಗೆ ಅಳವಡಿಸಿದ್ದ ಅಕ್ರಮ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡು ಮತ್ತೆ ರೈತರಿಗೆ ಮರಳಿಸುತ್ತಿದ್ದಾರೆ. ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ಪರಿಣಾಮ ನಾಲೆಯಿಂದ ಅಕ್ರಮವಾಗಿ ನೀರೆತ್ತುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಭದ್ರಾ ನಾಲೆ ನೀರನ್ನು ದೊಡ್ಡ ಗಾತ್ರದ ಹೆಚ್ಚು ಶಕ್ತಿಯುಳ್ಳ ಪಂಪ್‌ಸೆಟ್‌ ಮೋಟರ್ ಅಳವಡಿಸಿ 20ರಿಂದ 30 ಕಿ.ಮೀ ದೂರಕ್ಕೆ ಪೈಪ್‌ಲೈನ್‌ ಮೂಲಕ ಕೊಂಡೊಯ್ಯಲಾಗಿದೆ. ಬಾವಿ ತೋಡಿಸಿರುವುದಾಗಿ ಸುಳ್ಳು ಪ್ರಮಾಣ ಪತ್ರ ನೀಡಿ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲಾಗುತ್ತಿದೆ. ಅಕ್ರಮದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಸತೀಶ್‌ ಆರೋಪಿಸಿದರು.

ಭದ್ರಾ ನಾಲೆ ನೀರು ಅಡಿಕೆ ಬೆಳೆಗೆ ಬಳಸುವಂತಿಲ್ಲ. ಭತ್ತ, ಮೆಕ್ಕೆಜೋಳ ಸೇರಿದಂತೆ ಆಹಾರ ಪದಾರ್ಥಗಳ ಬೆಳೆಗಳಿಗೆ ಮಾತ್ರ ಬಳಸಬೇಕು. ಸುರಂಗ ಮಾರ್ಗದಿಂದ ನೀರನ್ನು ಕೊಂಡೊಯ್ಯಲಾಗಿದೆ. ಸರ್ಕಾರದಿಂದ ಸಹಾಯಧನ ಪಡೆದು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಭಾರಿ ಪ್ರಮಾಣದ ನೀರು ಶೇಖರಣೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ರೈತರು ಒತ್ತಾಯಿಸಿದರು.

ನಾಲಾ ಸಮೀಪ ಕೊಳವೆಬಾವಿ ಕೊರೆಸದಂತೆ ಹಾಗೂ ವಿದ್ಯುತ್ ಲೈನ್‌ ಹಾದುಹೋಗದಂತೆ ಕ್ರಮ ತೆಗೆದುಕೊಳ್ಳಬೇಕು. ನೀರಾವರಿ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ನಾಲಾ ವ್ಯಾಪ್ತಿಯ ಹಂಚಿಕೆ ಮಾಡಿ ನೀರು ಎತ್ತದಂತೆ ಕ್ರಮ ಜರುಗಿಸಬೇಕು. ಅಕ್ರಮ ವಿದ್ಯುತ್ ಸಂಪರ್ಕ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.