ADVERTISEMENT

ಉಚ್ಚೆಂಗೆಮ್ಮ ಸನ್ನಿಧಿಯಲ್ಲಿ ಭರತ ಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 9:54 IST
Last Updated 31 ಜನವರಿ 2018, 9:54 IST
ಉಚ್ಚೆಂಗಮ್ಮ ದೇವಿ ದೇವಸ್ಥಾನಕ್ಕೆ ಭರತ ಹುಣ್ಣಿಮೆ ಜಾತ್ರೆ ಅಂಗವಾಗಿ ಮಂಗಳವಾರ ಸೇರಿದ್ದ ಭಕ್ತರು.
ಉಚ್ಚೆಂಗಮ್ಮ ದೇವಿ ದೇವಸ್ಥಾನಕ್ಕೆ ಭರತ ಹುಣ್ಣಿಮೆ ಜಾತ್ರೆ ಅಂಗವಾಗಿ ಮಂಗಳವಾರ ಸೇರಿದ್ದ ಭಕ್ತರು.   

ಉಚ್ಚಂಗಿದುರ್ಗ/ ಹರಪನಹಳ್ಳಿ: ಇತಿಹಾಸ ಪ್ರಸಿದ್ಧ ಶ್ರೀ ಉಚ್ಚೆಂಗೆಲ್ಲಮ್ಮ ದೇವಿ ಭರತ ಹುಣ್ಣಿಮೆ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಎಲ್ಲ ಸಿದ್ಧತೆಗಳು ನಡೆದಿವೆ.

ಹುಣ್ಣಿಮೆ ಮುನ್ನಾ ದಿನವಾದ ಮಂಗಳವಾರ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಅಧಿಕೃತ ಚಾಲನೆ ದೊರೆಯಿತು. ಈ ಪೂಜೆಗೆ ವಿಶಿಷ್ಟ ಸ್ಥಾನವಿದೆ. ದುಷ್ಟ ಸಂಹಾರಕ್ಕೆ ತೆರಳಿದ್ದ ದೇವಿ ವಿಜಯದೊಂದಿಗೆ ಮರಳುತ್ತಾಳೆ ಎಂಬ ನಂಬಿಕೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಜಾತ್ರೆಗೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಭಕ್ತರು ಬರುತ್ತಿದ್ದು, ಮೂಲಸೌಕರ್ಯದ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಹರಪನಹಳ್ಳಿ ವರದಿ: ಭರತ ಹುಣ್ಣಿಮೆಯಂದು ಬಾಲಕಿಯರಿಗೆ ಮುತ್ತುಕಟ್ಟುವ ಅನಿಷ್ಟ ಪದ್ಧತಿ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮುತ್ತುಕಟ್ಟದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ADVERTISEMENT

8 ಸ್ವಯಂ ಸೇವಕರ ತಂಡ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ, ಕಂದಾಯ ಇಲಾಖೆ, ದೇವಾಲಯ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಸೇರಿ ಪೂರ್ವಭಾವಿ ಸಭೆ ನಡೆಸಿದ್ದು, ದೇವದಾಸಿ ಪದ್ಧತಿ ತಡೆಯಲು ಅಂಗನವಾಡಿ, ದೇವದಾಸಿ ಪುನರ್ವಸತಿ ಸ್ವಯಂ ಸೇವಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಒಳಗೊಂಡ 8 ತಂಡಗಳನ್ನು ರಚಿಸಲಾಗಿದೆ.

ಜನಜಾಗೃತಿ ಆಂದೋಲನ, ಕರ ಪತ್ರ ಹಂಚುವ ಮೂಲಕವೂ ಜನರಲ್ಲಿ ಅರಿವು ಮೂಡಿಸಲಾಗಿದೆ. ಬ್ಯಾನರ್ ಹಾಗೂ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗಿದೆ. ಆನೆಹೊಂಡದ ಸುತ್ತ 6 ಸಿಸಿಟಿವಿ ಕ್ಯಾಮೆರಾ, ಗುಡ್ಡದ ಪ್ರಮುಖ ಸ್ಥಳಗಳಲ್ಲಿ 4 ಸಿಸಿಟಿವಿ ಕ್ಯಾಮೆರಾ, 2 ಡ್ರೋನ್ ಕ್ಯಾಮೆರಾ, 2 ಎಲ್‌ಇಡಿ ಪರದೆಗಳನ್ನು ಹಾಕಲಾಗಿದೆ.

ಜಾತ್ರೆಯ ವಿಶೇಷ: ಭರತ ಹುಣ್ಣಿಮೆ ದಿನ ನಾಡಿನ ಹಲವೆಡೆಯಿಂದ ಸಾವಿರಾರು ಜನರು ಉಚ್ಚಂಗ ದುರ್ಗದ ಬೆಟ್ಟಕ್ಕೆ ಬರುತ್ತಾರೆ. ಹರಕೆ ಹೊತ್ತವರು ಬೇವಿನ ಉಡುಗೆ, ಪಡ್ಲಗಿ ತುಂಬಿಸುವುದು ಸೇರಿ ವಿವಿಧ ಸೇವೆಗಳನ್ನು ದೇವಿಗೆ ಅರ್ಪಿಸುತ್ತಾರೆ. ಭರತ ಹುಣ್ಣಿಮೆಯನ್ನು ‘ಮುತ್ತೈದೆ ಹುಣ್ಣಿಮೆ’
ಎಂದೂ ಕರೆಯುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.