ADVERTISEMENT

6ರಿಂದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 11:00 IST
Last Updated 1 ಜನವರಿ 2012, 11:00 IST

ದಾವಣಗೆರೆ: ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಶಿಕ್ಷಣ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಸಮಾವೇಶವನ್ನು ಜ. 20ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಶಿಕ್ಷಣ ಇಲಾಖೆಯ ಹತ್ತಾರು ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯ್ತಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. `ಮಗುವನ್ನು ಕೇಂದ್ರೀಕರಿಸಿ~ ಇರುವ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನವಾಗಿ, ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಲು ಇದೇ ಪ್ರಥಮ ಬಾರಿಗೆ ಸಮಾವೇಶ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸರ್ಕಾರವು ಯಾವ ಯೋಜನೆ ಅನುಷ್ಠಾನಗೊಳಿಸಬೇಕು. ಇದನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ... ಮತ್ತಿತರ ಸಂಗತಿಗಳ ಬಗ್ಗೆ ಇಡೀ ದಿನ ಸಮಾಲೋಚಿಸಲಾಗುವುದು ಎಂದು ಅವರು ಹೇಳಿದರು.
 

7ನೇ ತರಗತಿ ಇರುವೆಡೆ 8ನೇ  ತರಗತಿ ಆರಂಭಿಸಲಾಗುವುದು. 9,  10, 11,  12ನೇ ತರಗತಿಯನ್ನು  ಆರ್‌ಎಂಎಸ್‌ಎ (ರಾಷ್ಟ್ರೀಯ  ಮಾಧ್ಯಮಿಕ ಶಿಕ್ಷಣ  ಅಭಿಯಾನ) ಅಡಿಯಲ್ಲಿ  ಜೋಡಿಸಲಾಗುವುದು. ಎಲ್ಲ  ರಾಜ್ಯಗಳಲ್ಲಿಯೂ ಈ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಲಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ.

ಈ ಹೊಸ ಆಡಳಿತಾತ್ಮಕ ವ್ಯವಸ್ಥೆ ಜಾರಿಯಿಂದ ಆಗುವ ಪರಿಣಾಮಗಳ ಕುರಿತು ಸಮಾಲೋಚನೆ ನಡೆಸಲು, ಸಿದ್ಧತೆ ಮಾಡಿಕೊಳ್ಳಲು 2 ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಒಂದೂವರೆ ತಿಂಗಳಲ್ಲಿ ವರದಿ ಸಿಗಲಿದೆ. ಇದರಿಂದ ದೇಶಾದ್ಯಂತ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾದಂತೆ ಆಗುತ್ತದೆ ಹಾಗೂ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಬಹುದು ಎಂದು ತಿಳಿಸಿದರು.

ಅಧಿಕಾರಿಗಳು, ಶಿಕ್ಷಣ ತಜ್ಞರು ಒಳಗೊಂಡ ಸಮಿತಿಗಳು ನೀಡುವ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸಲಾಗುವುದು. ಮುಂದಿನ ವರ್ಷದಿಂದ ಹೊಸ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ವರ್ಷದಿಂದ ಪ್ರಥಮ ಪಿಯುಸಿ (ಪಿಸಿಎಂಬಿ) ವಿದ್ಯಾರ್ಥಿಗಳಿಗೆ ಕೇಂದ್ರೀಯ ಪಠ್ಯಕ್ರಮ ಜಾರಿಗೊಳಿಸಲಾಗುವುದು. ಐಸಿಟಿ (ಮಾಹಿತಿ ಮತ್ತು ಸಂವಹನ ಯೋಜನೆ) ಹಂತ-3ರಲ್ಲಿ `ಮಾಹಿತಿ ಸಿಂಧು~ ಶಿಕ್ಷಕರಿಗೆ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಏಜೆನ್ಸಿ ಕಿಯೋನಿಕ್ಸ್‌ಗೆ ಸೂಚನೆ ನೀಡಲಾಗಿದೆ.

ADVERTISEMENT

ಶಿಕ್ಷಕರ ವೇತನ ತಾರತಮ್ಯ ನಿವಾರಣೆ, ನಮ್ಮ ಕೈಲಿಲ್ಲ. ವೇತನ ಸಮಿತಿ ಅದನ್ನು ಪರಿಶೀಲಿಸುತ್ತದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸದಾನಂದಗೌಡರು ಭರವಸೆ ನೀಡಿದ್ದಾರೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಜ. 6, 7 ಮತ್ತು 8ರಂದು ಚಿತ್ರದುರ್ಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ `ಪ್ರತಿಭಾ ಕಾರಂಜಿ~ ಆಯೋಜಿಸಲಾಗಿದೆ. ಮೊದಲು, ತುಮಕೂರಿನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ಇರುವುದರಿಂದ ಚಿತ್ರದುರ್ಗಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟಿಸಲಿದ್ದಾರೆ ಎಂದು ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.