ADVERTISEMENT

60 ರೋಗಿಗಳಿಗೆ ಕೇವಲ ಒಬ್ಬ ಸಿಬ್ಬಂದಿ!

ಇದು ದಾವಣಗೆರೆಯ ಮಕ್ಕಳು ಮತ್ತು ಮಹಿಳೆಯರ ಸರ್ಕಾರಿ ಆಸ್ಪತ್ರೆಯ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 9:57 IST
Last Updated 14 ಜೂನ್ 2013, 9:57 IST

ದಾವಣಗೆರೆ: `ಆರು ರೋಗಿಗಳಿಗೆ ಒಬ್ಬ ಸಿಬ್ಬಂದಿ ಇರಬೇಕು; ಆದರೆ, ಇಲ್ಲಿ 60 ರೋಗಿಗಳಿಗೆ ಕೇವಲ ಒಬ್ಬ ಸಿಬ್ಬಂದಿ ಇದ್ದಾರೆ'!. ನಗರದ ಚಾಮರಾಜೇಂದ್ರ ವೃತ್ತದಲ್ಲಿರುವ ಮಕ್ಕಳು ಮತ್ತು ಮಹಿಳೆಯರ ಸರ್ಕಾರಿ ಆಸ್ಪತ್ರೆಯ ದುಃಸ್ಥಿತಿ ಇದು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದ್ದಿಗೇಶ್ ಅವರು ಗುರುವಾರ ದಿಢೀರ್ ಪರಿಶೀಲನೆ ನಡೆಸಿದ ವೇಳೆ ಈ ಸಂಗತಿ ಬೆಳಕಿಗೆ ಬಂದಿತು. `ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದೆ. ಇದನ್ನು ಪರಿಹರಿಸುವ ಮೂಲಕ ರೋಗಿಗಳಿಗೆ ಮತ್ತಷ್ಟು ಉತ್ಕೃಷ್ಟ ಸೇವೆ ನೀಡಲು ಅವಕಾಶ ಮಾಡಿಕೊಡಬೇಕು' ಎಂದು ಅಲ್ಲಿನ ಸಿಬ್ಬಂದಿ ಅಧ್ಯಕ್ಷರಿಗೆ ಕೋರಿಕೊಂಡರು.

ವೈದ್ಯಕೀಯ ಅಧೀಕ್ಷಕಿ ಡಾ.ಡಿ.ಎಸ್.ರೇಣುಕಾ ಮಾತನಾಡಿ, ಆಸ್ಪತ್ರೆ ಆರಂಭವಾದಾಗ ಇದ್ದಷ್ಟೇ ಸಿಬ್ಬಂದಿ ಈಗಲೂ ಇದ್ದಾರೆ. ಈ ಭಾಗದ ಪ್ರಮುಖ ಹೆರಿಗೆ ಆಸ್ಪತ್ರೆ ಇದಾಗಿದ್ದು, ದಿನೇ ದಿನೇ ಚಿಕಿತ್ಸೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. 100 ಹಾಸಿಗೆಗಳ ಈ ಆಸ್ಪತ್ರೆಯನ್ನು ವಿಸ್ತರಿಸಲು ಬಹಳ ಅವಕಾಶವಿದೆ. ಜೆಜೆಎಂ ವೈದ್ಯಕೀಯ ಕಾಲೇಜಿನ ಸಹಯೋಗ ಇರುವುದರಿಂದ ಹೇಗೋ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇವೆ.

19 ಮಂದಿ ಇತರ ಸಿಬ್ಬಂದಿ (ನಾನ್ ಕ್ಲಿನಿಕ್)ಯನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ತಿಂಗಳಿಗೆ ಇಲ್ಲಿ, ಸರಾಸರಿ 700 ಹೆರಿಗೆ ಆಗುತ್ತಿವೆ. ಜಿಲ್ಲಾ ಆಸ್ಪತ್ರೆಗೆ ಹೋಲಿಸಿದಲ್ಲಿ ಇಲ್ಲಿ, ಕೆಲಸದ ಒತ್ತಡ ಹೆಚ್ಚಿದೆ. ಇದಕ್ಕೆ ತಕ್ಕಂತೆ ಸಿಬ್ಬಂದಿ ಇಲ್ಲದಿರುವುದು ತೊಡಕಾಗಿ ಪರಿಣಮಿಸಿದೆ ಎಂದು ಮಾಹಿತಿ ನೀಡಿದರು.

ಇಲ್ಲಿ, `ಡಿ' ದರ್ಜೆ ನೌಕರರ ಕೊರತೆಯೂ ಇದೆ. 32 ನೌಕರರ ನೇಮಕಾತಿ ಆಗಿಲ್ಲ. ಮಂಜೂರಾದಷ್ಟು ಸಿಬ್ಬಂದಿ ಶುಶ್ರೂಷಕರೂ ಇಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದಿದ್ದೇವೆ. ಅವರು, ಇಡೀ ರಾಜ್ಯದಲ್ಲಿಯೇ ನೇಮಕಾತಿ ಆಗಬೇಕಿದೆ ಎಂದಿದ್ದಾರೆ. ಅಗತ್ಯ ಸಿಬ್ಬಂದಿ ಕಲ್ಪಿಸಿದರೆ ಅನುಕೂಲ ಆಗುತ್ತದೆ. ಇದಕ್ಕೆ ಸಹಕರಿಸಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಆಸ್ಪತ್ರೆಯ ಸಾಮರ್ಥ್ಯವನ್ನು 200 ಹಾಸಿಗೆಗಳಿಗೆ ವಿಸ್ತರಿಸಲು ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ. ಹಾಲಿ ಕಟ್ಟಡದ ಮೇಲೆ ಮೊದಲ ಮಹಡಿ ನಿರ್ಮಿಸಿದರೆ, ವಿಸ್ತರಣೆ ಮಾಡಬಹುದು. ಆಗ, ಮತ್ತಷ್ಟು ಸೇವೆ ವಿಸ್ತರಿಸಬಹುದು ಎಂದು ಹೇಳಿದರು.

`ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ಸಂಖ್ಯೆ ಬಹಳ ಕಡಿಮೆ ಇದೆ. 2-3 ವರ್ಷದಿಂದಲೂ ಇದೇ ಸಮಸ್ಯೆ ಇದೆ. ಯಾರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಬಂದಾಗಲೂ ಹೇಳಿದ್ದೆವು. ವೈದ್ಯರು ಮತ್ತು ನರ್ಸ್‌ಗಳ ಕೊರತೆ ಇರುವಾಗ, ರೋಗಿಗಳಿಗೆ ಆರೈಕೆ ಮಾಡುವಲ್ಲಿ ತೊಡಕುಗಳು ಉಂಟಾಗುತ್ತವೆ. `ಹೆಚ್ಚು ಕಡಿಮೆಯಾದಲ್ಲಿ' ನಾವು ಸಮಾಜದ ಕೆಂಗಣ್ಣಿಗೆ ಗುರಿಯಾಗುತ್ತವೆ. 60 ರೋಗಿಗಳಿಗೆ ಒಬ್ಬ ಸಿಬ್ಬಂದಿ ಇದ್ದೇವೆ' ಎಂದು ಡಾ.ಮಲ್ಲಿಕಾರ್ಜುನ್ ತಿಳಿಸಿದರು.

`ಇಲ್ಲಿ ತಿಂಗಳಿಗೆ 150 ಸಿಜೇರಿಯರ್ ಮಾಡಲಾಗುತ್ತಿದೆ. ಆದರೆ, ಈ ವಿಭಾಗದಲ್ಲಿ ಕೇವಲ ನಾಲ್ಕು ಮಂದಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದರಿಂದ, ಕಾರ್ಯದ ಒತ್ತಡ ಬಹಳ ಇದೆ. ಒಮ್ಮಮ್ಮೆ ರೋಗಿಗಳ ಆಕ್ರೋಶಕ್ಕೂ ತುತ್ತಾದ ಉದಾಹರಣೆಯೂ ಇದೆ' ಎಂದು ಅಲ್ಲಿನ ಸಿಬ್ಬಂದಿ ಸಮಸ್ಯೆ ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.