ADVERTISEMENT

61 ಹಳ್ಳಿಗಳ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 6:14 IST
Last Updated 30 ಅಕ್ಟೋಬರ್ 2017, 6:14 IST

ಜಗಳೂರು: ಮಳೆಗಾಲದಲ್ಲಿ ಸೋರುವ ಸೂರು, ಗೆದ್ದಲು ಮುತ್ತಿಕೊಂಡು ನಾಶವಾಗುತ್ತಿರುವ ದಾಖಲೆಗಳು, ತೇವಾಂಶದಿಂದ ಪದೇಪದೇ ಶಾರ್ಟ್‌ ಸರ್ಕೀಟ್ ಸಮಸ್ಯೆ, ಇಕ್ಕಟ್ಟಾದ ಕಟ್ಟಡದಲ್ಲಿ ನಿತ್ಯ ಜನಸಂದಣಿ, ಶೌಚಾಲಯ ಇಲ್ಲದೆ ಮಹಿಳಾ ಸಿಬ್ಬಂದಿ ಪರದಾಟ. ಇದು ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ ಬಿಳಿಚೋಡು ನಾಡಕಚೇರಿಯ ದುಸ್ಥಿತಿಯ ಚಿತ್ರಣ.

61 ಹಳ್ಳಿಗಳ ವ್ಯಾಪ್ತಿಯ ರೈತರು, ಸಾರ್ವಜನಿಕರು ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳು ಪ್ರತಿನಿತ್ಯ ನಾಡಕಚೇರಿಗೆ ನೂರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಕೆಲವೊಮ್ಮೆ ಒಂದೇ ದಿನಕ್ಕೆ ಒಂದು ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ. ಆದರೆ, ಇಲ್ಲಿ ನೀರು, ನೆರಳು, ಶೌಚಾಲಯ ಒಳಗೊಂಡಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಇದರಿಂದ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಪಂಚಾಯ್ತಿ ಭವನವನ್ನು ನಾಡಕಚೇರಿಯನ್ನಾಗಿ ಪರಿವರ್ತಿಸಲಾಯಿತು. ರೈತರ ಜಮೀನಿನ ದಾಖಲೆಗಳನ್ನು ವಿತರಿಸುವ ಭೂಮಿ ಕೇಂದ್ರ, ಜನಸ್ನೇಹಿ ಕೇಂದ್ರ, ಮೋಜಣಿ, ಪಿಂಚಣಿ ಸೇರಿದಂತೆ ಹಲವು ವಿಭಾಗಗಳು ಇಂದು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ADVERTISEMENT

‘ಮಳೆ ಬಂದರೆ ಇಡೀ ಕಟ್ಟಡ ಸೋರುತ್ತೆ. ತೇವಾಂಶ ಹೆಚ್ಚಿ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಆಗುತ್ತದೆ. ಈಗಾಗಲೇ ಕೆಲವು ಕಂಪ್ಯೂಟರ್‌ಗಳು ಕೆಟ್ಟು ಹೋಗಿ ಕೆಲಸ ಮಾಡಲು ಆಗುತ್ತಿಲ್ಲ. ಹಳೇ ಕಟ್ಟಡವಾಗಿರುವ ಕಾರಣ ಗೆದ್ದಲು ಹಾವಳಿಯಿಂದ ದಾಖಲೆಗಳು ನಾಶವಾಗದಂತೆ ಕಾಪಾಡುವುದೇ ದೊಡ್ಡ ಸಮಸ್ಯೆಯಾಗಿದೆ’ ಎಂದು ಉಪ ತಹಶೀಲ್ದಾರ್ ಟಿ. ಗಂಗಾಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಹಣಿ ಪಡೆಯಲು ಏಕಕಾಲದಲ್ಲಿ ರೈತರು ಸರದಿಯಲ್ಲಿ ನಿಲ್ಲಲು ಇಲ್ಲಿ ಜಾಗ ಇಲ್ಲ. 12 ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಮಹಿಳಾ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಕುಳಿತು ಕೆಲಸ ಮಾಡಲು ಕೊಠಡಿಗಳು ಇಲ್ಲ. ದೇಶದಾದ್ಯಂತ ಸ್ವಚ್ಛ ಭಾರತ ಅಭಿಯಾನ ಬಿರುಸಿನಿಂದ ಸಾಗಿರುವಾಗ ಇಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬೆಂಚಿಕಟ್ಟೆ ದ್ಯಾಮೇಶ್‌ ಬೇಸರ ವ್ಯಕ್ತಪಡಿಸುತ್ತಾರೆ.

ಮಲ್ಪೆ– ಮೊಳಕಾಲ್ಮುರು ರಾಜ್ಯ ಹೆದ್ದಾರಿ ಮಗ್ಗುಲಲ್ಲಿರುವ ನಾಡಕಚೇರಿ ಮುಂದೆ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ, ದಶಕಗಳಿಂದ ಕನಿಷ್ಠ ಸವಲತ್ತುಗಳಿಂದ ವಂಚಿತವಾಗಿರುವ ಈ ಕಟ್ಟಡದ ಬಗ್ಗೆ ಇದುವರೆಗೆ ಯಾರೂ ಗಮನಹರಿಸಿಲ್ಲ. ಶಿಥಿಲವಾಗಿರುವ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.