ADVERTISEMENT

ದಾವಣಗೆರೆ| ಬೀದಿ ಬದಿ ವ್ಯಾಪಾರಿಗಳಿಗೆ ಸ್ವ–ನಿಧಿ ಮಹೋತ್ಸವ; ಜಿ.ಎಂ. ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 5:31 IST
Last Updated 27 ಮಾರ್ಚ್ 2023, 5:31 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಪಿಎಂ ಸ್ವ–ನಿಧಿ ಯೋಜನೆ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಪಿಎಂ ಸ್ವ–ನಿಧಿ ಯೋಜನೆ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಬೀದಿ ಬದಿ ವ್ಯಾಪಾರಿಗಳಿಗೆ ಒಂದೇ ಕಡೆ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದ 4 ಕಡೆ ಜಾಗ ಗುರುತಿಸಲಾಗಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾ ಕೌಶಲ ಮಿಷನ್, ಮಹಾನಗರ ಪಾಲಿಕೆ ವತಿಯಿಂದ ದೀನ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ (ಡೇ– ನಲ್ಮ್) ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಕುಟುಂಬದ
ಸದಸ್ಯರಿಗೆ ಸ್ವ–ನಿಧಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಾಸನ, ತುಮಕೂರು ಜಿಲ್ಲೆಗಳಲ್ಲಿ ಇರುವಂತೆಯೇ ಜಿಲ್ಲೆಯಲ್ಲಿಯೂ 500 ವ್ಯಾಪಾರಿಗಳು ಒಂದೇ ಕಡೆ ಕುಳಿತು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ₹50 ಲಕ್ಷ ಮೀಸಲಿಟ್ಟಿದೆ’ ಎಂದು ಹೇಳಿದರು.

ADVERTISEMENT

‘ಡೇ–ನಲ್ಮ್ ಯೋಜನೆಯಡಿ ಜಿಲ್ಲೆಯಲ್ಲಿ 8,729 ಬೀದಿಬದಿ ವ್ಯಾಪಾರಿಗಳಿಗೆ ₹8.50 ಕೋಟಿ ಸಾಲ ನೀಡಿದ್ದು, ಇವರಲ್ಲಿ ದಾವಣಗೆರೆ ನಗರದ 6,700, ಹರಿಹರದ 1,200, ಚನ್ನಗಿರಿಯ 171, ಮಲೇಬೆನ್ನೂರಿನ 296, ಹೊನ್ನಾಳಿಯ 196 ಹಾಗೂ ಜಗಳೂರಿನ 158 ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಸ್ವಸಹಾಯ ಗುಂಪುಗಳಿಗೂ ತಲಾ ₹2 ಲಕ್ಷದಂತೆ ₹10 ಕೋಟಿ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಹಣವಿಲ್ಲದೇ ₹1000ಕ್ಕೆ ದಿನಕ್ಕೆ ₹100ರಂತೆ ಬಡ್ಡಿ ನೀಡಿ ವ್ಯಾಪಾರ ಮಾಡುತ್ತಿದ್ದರು. ಅವರು ದುಡಿದ ಹಣವನ್ನೆಲ್ಲಾ ಬಡ್ಡಿಗೆ ತೆರಬೇಕಾಗಿತ್ತು. ಇದರಿಂದ ಹಣ ಉಳಿಸಲು ಸಾಧ್ಯವಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಬೀದಿಬದಿ ವ್ಯಾಪಾರಿಗಳ ಪರಿಸ್ಥಿತಿ ಅಧೋಗತಿಗೆ ಹೋಗಿತ್ತು. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು ಡೇ–ನಲ್ಮ್ ಯೋಜನೆಯಡಿ ವ್ಯಾಪಾರಿಗಳ ನೆರವಿಗೆ ಬಂದಿದ್ದಾರೆ’ ಎಂದರು.

‘ಪಡೆದುಕೊಂಡ ಸಾಲವನ್ನು ಸಮರ್ಪಕವಾಗಿ ಬಳಸಿಕೊಂಡು ಹೆಣ್ಣು ಮಕ್ಕಳು ಸಕಾಲಕ್ಕೆ ಮರುಪಾವತಿ ಮಾಡಿದ್ದಾರೆ. ಮಹಿಳೆಯರು ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿ ಶ್ರೀಮಂತರಾಗಬೇಕು’ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರದಲ್ಲಿ ಗುಣಮಟ್ಟ ಕಾಯ್ದುಕೊಂಡ ಸ್ವಸಹಾಯ ಗುಂಪುಗಳು, ವ್ಯಾಪಾರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಯಿತು.

ಪಾಲಿಕೆಯ ಎಂಜಿನಿಯರ್ ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಗರಪಾಲಿಕೆ ಮೇಯರ್ ವಿನಾಯಕ ಬಿ.ಎಚ್., ಧೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಮೇಯರ್‌ ಎಸ್‌.ಟಿ.ವೀರೇಶ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಮಹಾಂತೇಶ್, ಲೀಡ್ ಬ್ಯಾಂಕ್ ನಿವೃತ್ತ ವಿಭಾಗೀಯ ಪ್ರಬಂಧಕ ಬಿ.ಜಿ.ದೊಡ್ಡಮನಿ ಹಾಜರಿದ್ದರು. ಆಯುಕ್ತೆ ರೇಣುಕಾ ಸ್ವಾಗತಿಸಿದರು. ಗದಿಗೇಶ್ ಕಾರ್ಯಕ್ರಮ
ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.