ADVERTISEMENT

ತಾಂಡಾಗಳಲ್ಲಿ ಸಂಭ್ರಮದ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:28 IST
Last Updated 28 ಅಕ್ಟೋಬರ್ 2022, 7:28 IST
ಮಾಯಕೊಂಡ ಸಮೀಪದ ಲಂಬಾಣಿ ತಾಂಡಾದಲ್ಲಿ ದೀಪಾವಳಿ ಪ್ರಯುಕ್ತ ಯುವತಿಯರು ಕಾಡಿನಿಂದ ಹೂ ತರುತ್ತಿರುವುದು
ಮಾಯಕೊಂಡ ಸಮೀಪದ ಲಂಬಾಣಿ ತಾಂಡಾದಲ್ಲಿ ದೀಪಾವಳಿ ಪ್ರಯುಕ್ತ ಯುವತಿಯರು ಕಾಡಿನಿಂದ ಹೂ ತರುತ್ತಿರುವುದು   

ಮಾಯಕೊಂಡ: ಸಮೀಪದ ಪರಶುರಾಂಪುರ, ಬುಳ್ಳಾಪುರ, ಹೆದ್ನೆ, ತೋಳಹುಣಸೆ ಸೇರಿದಂತೆ ವಿವಿಧ ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಲಂಬಾಣಿ ಮಹಿಳೆಯರು ಬಣ್ಣ-ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಲಂಬಾಣಿ ಹಾಡಿಗೆ ಹೆಜ್ಜೆ ಹಾಕುವ ಮಾಡುವ ಮೂಲಕ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ದೀಪಾವಳಿಯಲ್ಲಿ ಪಟಾಕಿ ಸದ್ದು ಜೋರು. ಆದರೆ ತಾಂಡಾ ನಿವಾಸಿಗಳು ಪುರಾತನ ಕಾಲದಿಂದ ಪರಿಸರ ಕಾಳಜಿ ಉಳಿಸಿಕೊಂಡು ಬಂದಿದ್ದಾರೆ.ಸ್ನೇಹಿತರೆಲ್ಲರೂ ಸೇರಿ ಸಿಹಿ ತಿನಿಸುಗಳನ್ನು ಸವಿದು ತಾಂಡಾದ ಹೊರ ಭಾಗದಲ್ಲಿ ಹಾಡನ್ನು ಹಾಡಿದರು.

ADVERTISEMENT

ಹೂವು ತರುವ ಹಬ್ಬ: ಕಾಡಿನಿಂದ ಹೂ ತರುವ ಸಂಪ್ರದಾಯ ನಡೆಸಲಾಗುತ್ತದೆ. ಯುವತಿಯರು ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ಬಲಿಪಾಡ್ಯದಂದು ಸ್ನೇಹಿತೆಯರೊಂದಿಗೆ ಕಾಡಿಗೆ ತೆರಳಿ ತಂಗಟೆ ಹೂ ತಂದರು. ಹೂವುಗಳನ್ನು ತಂದ ಯುವತಿಯರನ್ನು ಜನರು ಮೆರವಣಿಗೆ ಮೂಲಕ ಸ್ವಾಗತಿಸಿದರು. ಬಿದಿರಿನ ಬುಟ್ಟಿಯಲ್ಲಿ ತಂದ ಹೂಗಳನ್ನು ದೇವಸ್ಥಾನಕ್ಕೆ ಅರ್ಪಿಸಿದರು.

ಹಿರಿಯರ ಪೂಜೆ ಆಚರಣೆ: ಹಬ್ಬದಲ್ಲಿ ಪೂರ್ವಿಕರ ಪೂಜೆ ಮಾಡುವುದು ವಿಶೇಷ. ತಮ್ಮ ಹಿರಿಯರು ಸಂತಸಗೊಂಡು ಆಶೀರ್ವಾದ ಮಾಡಿದರೆ ಸಮೃದ್ದಿ ಮನೆಮಾಡುತ್ತದೆ ಎಂಬ ನಂಬಿಕೆ ಇದೆ. ಯುವತಿಯರು ಸಂಜೆ ಗ್ರಾಮದ ಪ್ರತಿಯೊಬ್ಬರ ಮನೆಗಳಿಗೂ ಕೈಲಿ ದೀಪ ಹಿಡಿದು ತೆರಳಿ ಪೂಜೆ ಸಲ್ಲಿಸಿ ಕಾಣಿಕೆ ಪಡೆದು ಬರುವುದು ಸಂಪ್ರದಾಯ.

‘ಆಧುನಿಕವಾಗಿ ಎಷ್ಟೇ ಮುಂದುವರಿದರೂ ಲಂಬಾಣಿ ಜನರು ಮೂಲ ಸಂಪ್ರದಾಯವನ್ನು ಮರೆತಿಲ್ಲ. ಹೀಗಾಗಿ ಪ್ರತಿ ವರ್ಷ ಬೆಳಕಿನ ಹಬ್ಬ ದೀಪಾವಳಿ ಲಂಬಾಣಿ ಸಂಪ್ರದಾಯ ಉಡುಗೆ ತೊಟ್ಟು ನೃತ್ಯ ಮಾಡುವ ಮೂಲಕ ಹಬ್ಬ ಆಚರಿಸುತ್ತೇವೆ’ ಎನ್ನುತ್ತಾರೆ ತೋಳಹುಣಸೆಯ ಕುಮಾರನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.