ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು ಬಾನುವಳ್ಳಿಯಲ್ಲಿ ಈಚೆಗೆ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಗ್ರಾಮದ ಮುಖಂಡರೊಬ್ಬರು ಉದ್ಯೋಗಾರ್ಥಿಯೊಬ್ಬರಿಗೆ ಕಂಪನಿಯೊಂದರ ಉದ್ಯೋಗಪತ್ರ ನೀಡಿದರು
–ಪ್ರಜಾವಾಣಿ ಚಿತ್ರ
ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ಬೃಹತ್ ಉದ್ಯೋಗ ಮೇಳವೊಂದು ನಡೆಯಿತು. ಮೇಳದಲ್ಲಿ ಪಾಲ್ಗೊಂಡಿದ್ದ ಸುತ್ತಮುತ್ತಲಿನ 25 ಗ್ರಾಮಗಳ 800ಕ್ಕೂ ಅಧಿಕ ಯುವಕ– ಯುವತಿಯರ ಪೈಕಿ 417 ಜನರಿಗೆ ಐ.ಟಿ, ಬಿ.ಟಿ ಸೇರಿದಂತೆ ಒಟ್ಟು 32 ಕಂಪನಿಗಳು ಸ್ಥಳದಲ್ಲೇ ಉದ್ಯೋಗದ ಆದೇಶ ನೀಡಿದವು.
1995–96ನೇ ಸಾಲಿನಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳು, ತಾವು ಕಲಿತ ಶಾಲೆಗೆ ಅಥವಾ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಲು ನಿರ್ಧರಿಸಿದ್ದ ಪರಿಣಾಮವೇ ಈ ಉದ್ಯೋಗ ಮೇಳ.
‘ಹಳೆ ವಿದ್ಯಾರ್ಥಿಗಳೆಲ್ಲ ಗುರುವಂದನೆ ಕಾರ್ಯಕ್ರಮ ಮಾಡಬೇಕು ಅಂದುಕೊಂಡೆವು. ಶಾಲೆಯ ಕಾಂಪೌಂಡ್‌ಗೆ ಕಬ್ಬಿಣದ ಗೇಟ್ ಮಾಡಿಸಿಕೊಡಲು ನಿರ್ಧರಿಸಿದೆವು. ಇನ್ನೂ ಏನಾದರೂ ಸ್ಮರಣೀಯ ಕಾರ್ಯ ಮಾಡಬೇಕು ಅನ್ನಿಸಿತು. ತಕ್ಷಣ ಉದ್ಯೋಗ ಮೇಳ ನೆನಪಾಯಿತು’ ಎಂದು ಆ ಬ್ಯಾಚ್‌ನ ವಿದ್ಯಾರ್ಥಿ, ದಾವಣಗೆರೆಯ ಜಿ.ಎಂ. ಯೂನಿವರ್ಸಿಟಿಯ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟೀಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಾನುವಳ್ಳಿ ಮಾತ್ರವಲ್ಲ ಸುತ್ತಲಿನ ಊರುಗಳಿಗೂ ನೆರವಾಗಿ ಎಂದು ಊರ ಮುಖಂಡರು ಸಲಹೆ ನೀಡಿದರು. ಕೂಡಲೇ ಉದ್ಯೋಗದಾತ ಕಂಪನಿಗಳನ್ನು ಸಂಪರ್ಕಿಸಿದೆವು. ಜಿ.ಎಂ. ಯೂನಿವರ್ಸಿಟಿಯಲ್ಲಿ ಉದ್ಯೋಗ ಮೇಳ ಆಯೋಜಿಸಿದ ಅನುಭವ ನನಗೆ ಇಲ್ಲಿ ನೆರವಿಗೆ ಬಂತು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ತಂದೆ– ತಾಯಿ ಹೆಸರಲ್ಲಿರುವ ಭೀಮಸಮುದ್ರ ಜಿ.ಮಲ್ಲಿಕಾರ್ಜುನಪ್ಪ, ಶ್ರೀಮತಿ ಹಾಲಮ್ಮ ಚಾರಿಟಿ ಪ್ರತಿಷ್ಠಾನದ ನೆರವಿನೊಂದಿಗೆ ಫೆಬ್ರುವರಿ 9ರಂದು ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಮೇಳ ನಡೆಸಿದೆವು’ ಎಂದು ಅವರು ವಿವರಿಸಿದರು.
‘ಈ ಗ್ರಾಮಗಳ ಅನೇಕ ಯುವಕ/ ಯುವತಿಯರು 10ನೇ ತರಗತಿ ಪಾಸ್ ಅಥವಾ ಫೇಲ್ ಆಗಿ ಗ್ರಾಮದಲ್ಲಿ ಕೃಷಿ ಕೂಲಿ ಮತ್ತಿತರ ಕೆಲಸ ಮಾಡುತ್ತಿದ್ದರು. ಕೆಲವರು ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಓದಿ ಉದ್ಯೋಗ ಅರಸುತ್ತಿದ್ದರು. ಅಂಥವರಿಗೆ ಮೇಳದಿಂದ ನೆರವಾಯಿತು. ಎರಡು ದಿನ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿ ಮೂರನೇ ದಿನ ಉದ್ಯೋಗ ಮೇಳ ಆಯೋಜಿಸಿದೆವು’ ಎಂದು ಅವರು ಹೇಳಿದರು.
ಮೇಳ ನಡೆದ ದಿನವೇ 417 ಜನರಿಗೆ ಉದ್ಯೋಗದ ಆದೇಶ ನೀಡಲಾಯಿತು. ವಾರದ ನಂತರ ಬಹುತೇಕರು ಕೆಲಸಕ್ಕೆ ಹಾಜರಾಗಿದ್ದಾರೆ. ಮುಂದೆಯೂ ಇಂಥ ಮೇಳ ಆಯೋಜಿಸಲು ಹಾಗೂ ಈ ಗ್ರಾಮಗಳ ಜನರ ಅನುಕೂಲಕ್ಕಾಗಿ ಕೆಲವೇ ದಿನಗಳಲ್ಲಿ ಬೃಹತ್ ಆರೋಗ್ಯ ಉಚಿತ ಮೇಳ ಆಯೋಜಿಸಲು ನಿರ್ಧರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ‘ಸ್ನೇಹಸಂಭ್ರಮ ಗೆಳೆಯರ ಬಳಗ’ ರಚಿಸಿ ಭಾನುವಳ್ಳಿ ಗ್ರಾಮದವರಿಗೆ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದವರಿಗೂ ನೆರವು ನೀಡಲು ನಿರ್ಧರಿಸಿದ್ದೇವೆ. ಇಂಥ ಸಾಮಾಜಿಕ ಕಾರ್ಯ ಪ್ರತಿ ವರ್ಷ ನಡೆಯಲಿದೆತೇಜಸ್ವಿ ಕಟ್ಟೀಮನಿ ಭಾನುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ
‘ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಉದ್ಯೋಗ ಮೇಳವನ್ನು ಹಳ್ಳಿಯಲ್ಲಿ ನಡೆಸುವುದು ಅಸಾಧ್ಯ ಎಂಬ ಅಭಿಪ್ರಾಯಗಳು ಬಂದವು. ನಾವು ದೃತಿಗೆಡದೇ ಮುನ್ನಡೆದೆವು. ಉದ್ಯೋಗದಾತ ಕಂಪನಿಗಳ ಸಿಬ್ಬಂದಿಗೆ ಹರಿಹರದಲ್ಲಿ ವಸತಿ ಊಟದ ವ್ಯವಸ್ಥೆ ಮಾಡಿದೆವು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಾರ ಮಾಡಿದೆವು. ಹಳೆ ವಿದ್ಯಾರ್ಥಿಗಳೆಲ್ಲ ಹಣ ಹಾಕಿದೆವು. ಅರ್ಧದಷ್ಟು ವೆಚ್ಚವನ್ನು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಚಾರಿಟಿ ಪ್ರತಿಷ್ಠಾನ ಒದಗಿಸಿತು’ ಎಂದು ತೇಜಸ್ವಿ ಕಟ್ಟೀಮನಿ ಹೇಳಿದರು. ‘ಬ್ಯಾಚ್‌ನ 108 ಸ್ನೇಹಿತರು ಸೇರಿದ್ದೆವು. ಮನಸಿದ್ದರೆ ಮಾರ್ಗ ಎಂಬುದಕ್ಕೆ ಈ ಮೇಳವೇ ಸಾಕ್ಷಿ’ ಎಂದು ಹಳೆ ವಿದ್ಯಾರ್ಥಿ ಚಂದ್ರು ಹುಲಿಕಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.