ADVERTISEMENT

ಅಂಚೆ ಅಧೀಕ್ಷಕರ ಕಚೇರಿ ಕಟ್ಟಡಕ್ಕೆ ಕ್ರಮ

ಅಂಚೆ ಇಲಾಖೆಯ ದಾವಣಗೆರೆ ವಿಭಾಗ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 2 ಮೇ 2022, 3:58 IST
Last Updated 2 ಮೇ 2022, 3:58 IST
ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆ ಅಂಚೆ ವಿಭಾಗವನ್ನು ಉದ್ಘಾಟಿಸಿದರು
ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆ ಅಂಚೆ ವಿಭಾಗವನ್ನು ಉದ್ಘಾಟಿಸಿದರು   

ದಾವಣಗೆರೆ: ಅಂಚೆ ಇಲಾಖೆಗೆ ಸೇರಿದ ಮೂರು ನಿವೇಶನಗಳು ನಗರದ ವ್ಯಾಪ್ತಿಯಲ್ಲಿವೆ. ಅದರಲ್ಲಿ ಸೂಕ್ತ ನಿವೇಶನದಲ್ಲಿ ಅಂಚೆ ಅಧೀಕ್ಷಕರ ಕಚೇರಿಯ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ ಬಳಿ ಭಾನುವಾರ ಅಂಚೆ ಇಲಾಖೆಯ ದಾವಣಗೆರೆ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಅಂಚೆ ವಿಭಾಗದಲ್ಲಿ ವರ್ಷಕ್ಕೆ ₹ 17 ಕೋಟಿ ಲಾಭ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ. ₹ 10 ಕೋಟಿ ಲಾಭ ಬಂದರೂ ಸಾಕು. ಜನರಿಗೆ ಸುಲಭದಲ್ಲಿ ಸೇವೆ ಸಿಗುವುದು ಮುಖ್ಯ. ದೇವರಾಜ ಅರಸು ಬಡಾವಣೆ, ಟೆಲಿಫೋನ್ ಎಕ್ಸ್‌ಚೇಂಜ್ ಕಚೇರಿ ಹಿಂದೆ ಹಾಗೂ ವಿದ್ಯಾನಗರ ಈ ಮೂರು ನಿವೇಶನಗಳಲ್ಲಿ ಒಂದು ಕಡೆ ಅಂಚೆ ಅಧೀಕ್ಷಕರ ಕಚೇರಿ ನಿರ್ಮಿಸಲು ₹ 3 ಕೋಟಿ ಅನುದಾನ ನೀಡಬೇಕು ಎಂದು ಕೇಳಿದ್ದಾರೆ. ಈ ಬಗ್ಗೆ ನೀಲನಕ್ಷೆ
ತಯಾರಿಸಿ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು.

ADVERTISEMENT

ಅಂಚೆ ಇಲಾಖೆಗೆ ಪ್ರತಿ ಹಳ್ಳಿಗಳಲ್ಲೂ ಹಿಂದೆ ನಿವೇಶನ ನೀಡಲಾಗಿತ್ತು. ಆದರೆ ಅಲ್ಲಿ ಕಚೇರಿ ನಿರ್ಮಾಣವಾಗಿಲ್ಲ. ವಾಪಸ್‌ ಕೊಡಿ ಎಂದು ಗ್ರಾಮ ಪಂಚಾಯಿತಿಯವರು ಕೇಳುತ್ತಿದ್ದಾರೆ. ಆದರೆ ಒಮ್ಮೆ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಭೂಮಿ ಮತ್ತೆ ಪಡೆಯುವುದು ಸುಲಭವಲ್ಲ. ಹಾಗಾಗಿ ಅಲ್ಲಿ ಅಂಚೆ ಕಚೇರಿ ನಿರ್ಮಾಣ ಮಾಡಬೇಕು. ಹಲವು ಕಡೆಗಳಲ್ಲಿ ಮನೆಗಳಲ್ಲಿಯೇ ಅಂಚೆ ಕಚೇರಿ ಇದೆ. ಅವೆಲ್ಲ ಸ್ವಂತ ಕಟ್ಟಡಕ್ಕೆ ಬರಬೇಕು. ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಅಥವಾ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಂಚೆ ಕಚೇರಿ ನಿರ್ಮಾಣ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಲಾಭದಾಯಕವಾಗಿ ನಡೆಯುತ್ತಿದ್ದ ಅಂಚೆ ಇಲಾಖೆಯು ಫೋನ್, ಮೊಬೈಲ್ ಬಂದಾಗ ಲಾಭ ಕಡಿಮೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಅಂಚೆ ಇಲಾಖೆಯ ಮೂಲಕ ತಲುಪಿಸಲು ನಿರ್ಧರಿಸಿ ಅಂಚೆ ಇಲಾಖೆಯನ್ನು ಲಾಭದಾಯಕವನ್ನಾಗಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಎಸ್.ಎ. ರವೀಂದ್ರನಾಥ, ‘ಪತ್ರಗಳನ್ನು ಸರಿಯಾಗಿ ತಲುಪಿಸುವ ಮೂಲಕ ದೇಶದಲ್ಲಿ ಉತ್ತಮವಾಗಿ ಅಂಚೆ ಇಲಾಖೆ ಕೆಲಸ ಮಾಡಿದೆ. ಈಗ ಆಧುನಿಕತೆಯನ್ನು ರೂಢಿಸಿಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ನಿಮಗೆ ಸೌಲಭ್ಯಗಳು ಬೇಕಾದಾಗ ಅಗತ್ಯ ಇರುವವರನ್ನು ಭೇಟಿಯಾಗಿ ಅನುದಾನ ಕೇಳಬೇಕು ಎಂದು ಸಲಹೆ ನೀಡಿದರು.

ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಒ. ವಿರೂಪಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ‘ದಾವಣಗೆರೆ ವಿಭಾಗದಲ್ಲಿ 43 ಅಂಚೆ ಕಚೇರಿಗಳು, 274 ಶಾಖಾ ಅಂಚೆ ಕಚೇರಿಗಳು ಇರಲಿವೆ. ಚಿತ್ರದುರ್ಗ ಮತ್ತು ಶಿವಮೊಗ್ಗ ವಿಭಾಗ ವ್ಯಾಪ್ತಿಯಲ್ಲಿ ಇಲ್ಲಿವರೆಗೆ ಅವು ಇದ್ದವು’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ವಿ.ಎಸ್.ಆರ್. ಮೂರ್ತಿ, ಪೋಸ್ಟಲ್ ಸರ್ವೀಸಸ್ ಡೈರೆಕ್ಟರ್ ಕೆ.ವಿ.ಮೋಹನ್ , ಮೇಯರ್ ಜಯಮ್ಮ ಆರ್‌. ಗೋಪಿನಾಯ್ಕ್, ಉಪಮೇಯರ್‌ ಗಾಯತ್ರಿ ಬಾಯಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್‌, ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌ ಅವರೂ ಇದ್ದರು.

ಅಂಚೆ ಇಲಾಖೆಯ ಅನಿಲ್‌ ಕುಮಾರ್‌ ಸ್ವಾಗತಿಸಿದರು. ಗುರುಪ್ರಸಾದ್‌ ವಂದಿಸಿದರು. ರವಿನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.