ADVERTISEMENT

ಜನವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಕ್ರಮ

ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 4:37 IST
Last Updated 18 ಜುಲೈ 2022, 4:37 IST
ಹರಿಹರದ ಪ್ರವಾಹ ಪೀಡಿತ ಗಂಗಾನಗರಕ್ಕೆ ಭಾನುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪರಿಶೀಲನೆ ನಡೆಸಿದರು.
ಹರಿಹರದ ಪ್ರವಾಹ ಪೀಡಿತ ಗಂಗಾನಗರಕ್ಕೆ ಭಾನುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪರಿಶೀಲನೆ ನಡೆಸಿದರು.   

ಹರಿಹರ: ನಗರದ ಪ್ರವಾಹ ಪೀಡಿತ ಜನವಸತಿ ಪ್ರದೇಶಗಳಿಗೆ ನೀರು ನುಗ್ಗ ದಂತೆ ಮಾಡಲು ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಪ್ರವಾಹಕ್ಕೀಡಾಗುವ ನದಿ ದಡದ ಗಂಗಾನಗರ, ಡಿ.ಬಿ. ಕೆರೆ ದಡದ ಬೆಂಕಿ ನಗರ, ಕಾಳಿದಾಸ ನಗರ ಹಾಗೂ ಎಪಿಎಂಸಿಯ ಕಾಳಜಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.

ನದಿ ಹಿನ್ನೀರಿನಿಂದ ಗಂಗಾ ನಗರದ ಹಲವು ಮನೆಗಳು ಜಲಾವೃತವಾಗುತ್ತವೆ. ಹಿಂದಿನ ಮಾಹಿತಿ ಅಧ್ಯಯನ ಮಾಡಿ ಅಲ್ಲಿರುವ ಎಷ್ಟು ಮನೆಗಳಿಗೆ ನೀರು ಬರುತ್ತದೆ ಎಂದು ಪರಿಶೀಲಿಸಲಾಗುವುದು. ನಗರಸಭೆಯ ಲಭ್ಯ ಇರುವ ಜಾಗದಲ್ಲಿ ಉದ್ದೇಶಿತ ಜಿ ಪ್ಲಸ್ ಟು ಮಾದರಿ ಮನೆಗಳನ್ನು ನಿರ್ಮಿಸಿದಾಗ ಈ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಲಾಗುವುದು.‌‌‌ ಬೆಂಕಿನಗರ, ಕಾಳಿದಾಸ ನಗರದ ವಸತಿ ಪ್ರದೇಶಕ್ಕೆ ಕಾಲುವೆ ನೀರು ನುಗ್ಗದಂತೆ ತಡೆಗೋಡೆ ಕಟ್ಟುವ ಪ್ರಸ್ತಾವ ಇದೆ. ಈ ಕುರಿತು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ತಾಲ್ಲೂಕಿನ ಸಾರಥಿ-ಚಿಕ್ಕಬಿದರಿ ನಡುವಿನ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿ ಎರಡು ವರ್ಷವಾಗಿದೆ. ಆದರೂ ಕಾಮಗಾರಿ ಅಪೂರ್ಣವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ
ಉತ್ತರಿಸಿದ ಜಿಲ್ಲಾಧಿಕಾರಿ, ‘ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಡಿಸಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡುತ್ತೇನೆ’ ಎಂದು ಹೇಳಿದರು.

ಪ್ರತಿ ಮಳೆಗಾಲದಲ್ಲಿ ನೀರು ಗಂಗಾನಗರ ಹಾಗೂ ಬೆಂಕಿನಗರಕ್ಕೆ ನುಗ್ಗುತ್ತದೆ ಎಂದು ಸ್ಥಳೀಯರು ದೂರಿದಾಗ, ‘ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸದ್ಯಕ್ಕೆ ಕಾಲುವೆಯಲ್ಲಿ ತುಂಬಿರುವ ಹೂಳು, ಕಸ, ಕಡ್ಡಿಗಳನ್ನು ಸ್ವಚ್ಛಗೊಳಿಸಿ’ ಎಂದು ಸೂಚಿಸಿದರು.

ತಾಲ್ಲೂಕು ಆಡಳಿತ ಲೀಡ್ ಮಾಡಲಿ:ರಸ್ತೆ, ಸೇತುವೆ ನಿರ್ಮಾಣ ಸೇರಿ ವಿವಿಧ ಇಲಾಖೆಗಳಿಂದ ಜಾರಿಯಾಗಬೇಕಾದ ಬಾಕಿ ಕಾ ಮಗಾರಿಗಳ ಜಾರಿಗೆ ತಾಲ್ಲೂಕು ಆಡಳಿತ ಸಂಬಂಧಿತ ಇಲಾಖಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ ಹಾಗೂ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್‌ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಎಇ ಅಬ್ದುಲ್ ಹಮೀದ್, ಕಂದಾಯ ನಿರೀಕ್ಷಕ ಸಮೀರ್, ನಗರಸಭಾ ಸದಸ್ಯ ಕೆ.ಜಿ.ಸಿದ್ದೇಶ್, ದೇವರಾಜ್, ಮಲ್ಲಿಕಾರ್ಜುನ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.