ADVERTISEMENT

ಬಿಜೆಪಿ ಗೆಲುವಿಗೆ ಕಾರ್ಯಕರ್ತರೇ ಶಕ್ತಿ

ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:03 IST
Last Updated 7 ನವೆಂಬರ್ 2019, 10:03 IST
ದಾವಣಗೆರೆಯಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು. ಶಾಸಕ ಎಸ್ ಎ ರವೀಂದ್ರನಾಥ್, ಎಂ.ಎಲ್.ಸಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು. ಶಾಸಕ ಎಸ್ ಎ ರವೀಂದ್ರನಾಥ್, ಎಂ.ಎಲ್.ಸಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕಾದರೆ ಕಳೆದ ಚುನಾವಣೆಯಲ್ಲಿ ಅಮಿತ್ ಶಾ ಅವರು ಅನುಸರಿಸಿದ ‘ಪೇಜ್ ಪ್ರಮುಖ್’ ಸೂತ್ರವನ್ನು ಅನುಸರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ ಇಲ್ಲಿನ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಾವಣಗೆರೆಯಲ್ಲಿ ಚುನಾವಣೆ ಏನು ಹೊಸದಲ್ಲ. ಲೋಕಸಭೆಯಲ್ಲಿ ಗೆದ್ದಿದ್ದೇವೆ. ಇದೆಲ್ಲವೂ ಆಗಿದ್ದು ಕಾರ್ಯಕರ್ತರ ಶ್ರಮದಿಂದ. ಬೂತ್ ಕಮಿಟಿ ಕಾರ್ಯಕರ್ತರು ಈ ಚುನಾವಣೆಯ ಶಕ್ತಿ. ಚುನಾವಣೆಯಲ್ಲಿ ತೊಡಗದೇ ಇರುವ ಕಾರ್ಯಕರ್ತರನ್ನು ಪ್ರೀತಿಯಿಂದ ಮಾತನಾಡಿಸಿ ಅವರನ್ನು ಚುನಾವಣೆಯಲ್ಲಿ ತೊಡಗಿಸಿ. ಪೇಜ್‌ ಪ್ರಮುಖರು ಮತದಾರರ ಪಟ್ಟಿಯನ್ನು ಇಟ್ಟಕೊಂಡು ಮನೆಗೆ ಮನೆಗೆ ಭೇಟಿ ನೀಡಿ ಮತಗಳು ಬಾರದೇ ಇರುವ ಕಡೆ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಬಿಜೆಪಿ ಕಾರ್ಯಕರ್ತನ ಶಕ್ತಿ ಹನುಮಂತನ ಶಕ್ತಿ ಇದ್ದ ಹಾಗೆ. ಬೆಟ್ಟ ಹೊತ್ತು ತಂದ ಹಾಗೆ ಹಿಡಿದ ಕೆಲಸವನ್ನು ಸಾಧಿಸುತ್ತಾನೆ. ಈಗ ಎಲ್ಲಾ ಮನೆಗಳಲ್ಲೂ ಬಿಜೆಪಿಯನ್ನು ಗುರುತಿಸುತ್ತಾರೆ. ಆದ್ದರಿಂದ ಕಾರ್ಯಕರ್ತರು ಮೈಕೊಡವಿ ನಿಲ್ಲಬೇಕು. ಆಗ ದಾವಣಗೆರೆ ನಗರಪಾಲಿಕೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಸ್ಲಿಮರ ಮನವೊಲಿಸಿ: ಮುಸ್ಲಿಮರು ಈಗ ಮೊದಲಿನಂತೆ ಇಲ್ಲ. ಮುಂಚೆ ಇದ್ದ ಭಾವನೆಗಳು ಬದಲಾಗಿವೆ. ಮುಸಲ್ಮಾನರ ಓಟು ಬರುವುದಿಲ್ಲ ಎಂದು ಯಾವುದೇ ಕಾರಣಕ್ಕೂ ಅಂದುಕೊಳ್ಳಬೇಡಿ, ಮುಸ್ಲಿಂ ಮಹಿಳೆಯರ ಮನೆಗೆ ಹೋದರೆ ಅವರೇ ಮೋದಿಯ ಹೆಸರು ಹೇಳುತ್ತಾರೆ. ಅವರ ಮನವೊಲಿಸಿ ಆ ಓಟುಗಳು ಬಿಜೆಪಿಗೆ ಬರುತ್ತವೆ’ ಎಂದರು.

ಚುನಾವಣೆ ಬಂದರೆ ಬಿಜೆಪಿಗೆ ಗೆಲವು:

‘ಕಾಂಗ್ರೆಸ್‌, ಜೆಡಿಎಸ್‌ನವರು ಕೇಳದಿದ್ದರೂ ನಮಗೆ ಬೆಂಬಲ ನೀಡುತ್ತಿವೆ. ಏಕೆಂದರೆ ಬಿಜೆಪಿಗೆ ಅಂತಹ ಕಾರ್ಯಕರ್ತರಿಗೆ ಇದೆ. ರಾಷ್ಟ್ರೀಯ ವಿಚಾರಗಳನ್ನು ಇಡೀ ದೇಶವೇ ಒಪ್ಪುತ್ತಿರುವಾಗ ದಾವಣಗೆರೆಯವರು ಒಪ್ಪದೇ ಇರುತ್ತಾರೆಯೇ?. ಪ್ರತಿ ಮನೆಗೂ ಕಾರ್ಯಕರ್ತರು ಹೋಗಬೇಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ದೇವೇಗೌಡರು ಹೇಳಿದ್ದರು. ಆದರೆ ಅವರೇ ಒಂದೊಂದು ಸ್ಥಾನಗಳನ್ನು ಗೆದ್ದರು. ಈಗ ಯಾವುದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ಬಂದರೂ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದಾವಣಗೆರೆ ಅಭಿವೃದ್ಧಿಯಾಗಬೇಕು. ಸ್ಮಾರ್ಟ್‌ ಸಿಟಿಗೆ ವರ್ಷಕ್ಕೆ ₹1ಸಾವಿರ ಕೋಟಿ ಬರುತ್ತದೆ. ಇದು ಪೂರ್ಣ ಸದುಪಯೋಗವಾಗಬೇಕಾದರೆ ಬಿಜೆಪಿಗೆ ಗೆಲ್ಲಲೇಬೇಕು. ಒಂದು ಕಾಲದಲ್ಲಿ ಬಿಜೆಪಿ ಬ್ರಾಹ್ಮಣರ ಪಾರ್ಟಿ ಎಂಬ ಟೀಕೆ ಇತ್ತು. ಈಗ ಬಿಜೆಪಿ ಎಲ್ಲಾ ಸಮುದಾಯದ ಪಕ್ಷವಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಮಾಡಾಳು ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎ.ಎಸ್‌. ಶಿವಯೋಗಿಸ್ವಾಮಿ, ಚುನಾವಣಾಯ ಸಹ ಸಂಚಾಲಕ ದತ್ತಾತ್ರೇಯ, ಮಾಯಕೊಂಡ ಮುಖಂಡ ಆನಂದಪ್ಪ, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಿವಮೂರ್ತಿ, ಜೀವನ್‌ಮೂರ್ತಿ, ಅನಿತ್ ಜಿ.ಎಸ್, ರಮೇಶ್‌ನಾಯ್ಕ್ ಹಾಜರಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.