ದಾವಣಗೆರೆ: ಅಗ್ನಿಹೋತ್ರ ಹೋಮ ಕೇವಲ ಧಾರ್ಮಿಕ ಕ್ರಿಯೆಯಲ್ಲ, ಇದೊಂದು ವೈಜ್ಞಾನಿಕ ಪ್ರಕ್ರಿಯೆ. ಪ್ರಾಣವಾಯು ಆಮ್ಲಜನಕ ಬಿಡುಗಡೆ ಮಾಡುವ ಶಕ್ತಿಯೂ ಇದಕ್ಕಿದೆ. ಸಂವಿಧಾನದ ಪೀಠಿಕೆಯ ಮೌಲ್ಯಗಳನ್ನು ಅನುಷ್ಠಾನಗೊಳಿಸಲು ಇದೊಂದು ಉತ್ತಮ ಮಾರ್ಗ ಕೂಡ ಹೌದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ತ್ರಿಶೂಲ್ ಕಲಾಭವನದಲ್ಲಿ ಹರಿಹರ ತಾಲ್ಲೂಕಿನ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ವತಿಯಿಂದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಿದ್ಧ ಅಗ್ನಿಹೋತ್ರ’ ಸಮಾರಂಭದಲ್ಲಿ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
‘ಪವಿತ್ರ ಅಗ್ನಿಹೋತ್ರವನ್ನು ಪ್ರತಿಯೊಬ್ಬರೂ ಮನೆಯಲ್ಲಿ ಮಾಡುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ. ಆರೋಗ್ಯ ಸುಧಾರಿಸಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಜಮೀನುಗಳಲ್ಲಿ ಈ ಹೋಮ ಮಾಡಿದರೆ ಬೆಳೆಗಳಿಗೆ ಕೀಟಬಾಧೆ ಇರುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ’ ಎಂದು ಹೇಳಿದರು.
‘ಸಂವಿಧಾನದ ಪೀಠಿಕೆಯಲ್ಲಿರುವ ಸಹೋದರತ್ವ, ಅಖಂಡತೆ, ಭ್ರಾತೃತ್ವದ ಮೌಲ್ಯಗಳನ್ನು ಮೂಡಿಸಲು ಅಗ್ನಿಹೋತ್ರ ಪರಿಣಾಮಕಾರಿ. ಸಿಟ್ಟು, ದ್ವೇಷಕ್ಕೆ ಇದು ಅವಕಾಶ ನೀಡುವುದಿಲ್ಲ. ಆಗ ಎಲ್ಲರೂ ನಮ್ಮವರಾಗಿ, ಸಹೋದರತ್ವದ ಭಾವನೆ ಮೂಡುತ್ತದೆ. ಸಂವಿಧಾನದ ಜೊತೆ ಅಗ್ನಿಹೋತ್ರವನ್ನು ಹೇಗೆ ಸಮೀಕರಿಸಬಹುದು ಎಂಬುದರ ಕುರಿತು ಆಲೋಚಿಸುತ್ತಿದ್ದೇನೆ’ ಎಂದರು.
‘ಸ್ನೇಹಿತರೊಬ್ಬರು ಈ ಅಗ್ನಿಹೋತ್ರದ ಮಹಿಮೆಯನ್ನು ಪರಿಚಯಿಸಿದರು. ತಾಮ್ರದ ಹೋಮಕುಂಡದಲ್ಲಿ ಅಗ್ನಿಹೋತ್ರ ಮಾಡಿದ ಬಳಿಕ ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆರೋಗ್ಯ ಸುಧಾರಿಸಿ ಸುಸ್ತು ಕಡಿಮೆಯಾಗಿದೆ. ಕೆಲಸದಲ್ಲಿ ದಕ್ಷತೆ ಹೆಚ್ಚಿ ನಕಾರಾತ್ಮಕ ಚಿಂತನೆಗಳು ದೂರವಾಗಿವೆ. ಸಿಟ್ಟು, ಕೋಪ ಕಡಿಮೆಯಾಗಿ ಮನೆಯಲ್ಲಿ ಶಾಂತಿ ನೆಲೆಸಿದೆ’ ಎಂದು ಹೇಳಿದರು.
‘ವೇದಕಗಳ ಕಾಲದಿಂದಲೂ ಅಗ್ನಿಹೋತ್ರವಿದೆ. ಉಪನಿಷತ್ತುಗಳಲ್ಲಿ, ಭಗವದ್ಗೀತೆಯ 16ನೇ ಅಧ್ಯಾಯದಲ್ಲಿ ಕೂಡ ಅಗ್ನಿಹೋತ್ರದ ಉಲ್ಲೇಖವಿದೆ. ಋಷಿಮುನಿಗಳು ಇಡೀ ಜಗತ್ತಿಗೆ ವೈಜ್ಞಾನಿಕ ವಿಚಾರಗಳನ್ನು ಕಲಿಸಿಕೊಟ್ಟಿದ್ದಾರೆ. ಮೆಕಾಲೆ ಶಿಕ್ಷಣದ ಪರಿಣಾಮವಾಗಿ ನಮ್ಮತನ ಕಳೆದುಕೊಂಡಿದ್ದೇವೆ. ಸನಾತನ ಧರ್ಮವನ್ನು ಉಳಿಸಿ ಭಾರತವನ್ನು ವಿಶ್ವಗುರು ಮಾಡಬೇಕಿದೆ. ಇಲ್ಲವಾದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ’ ಎಂದರು.
ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಮೇಯರ್ ಎಸ್.ಟಿ.ವೀರೇಶ್ ಹಾಜರಿದ್ದರು.
‘ನಿತ್ಯ ಮನೆಯಲ್ಲಿ ಅಗ್ನಿಹೋತ್ರ ಹೋಮ ಮಾಡುತ್ತಿದ್ದ ಕುಟುಂಬವೊಂದು ಭೋಪಾಲ್ ಅನಿಲ ದುರಂತದಿಂದ ಪಾರಾಗಿದೆ. ಅಗ್ನಿಹೋತ್ರದ ಮಹಿಮೆಯನ್ನು ಅರಿಯಲು ಇದೊಂದು ನಿದರ್ಶನ ಸಾಕು’ ಎಂದು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಹೇಳಿದರು.
‘1984ರ ಡಿಸೆಂಬರ್‌ನಲ್ಲಿ ಭೋಪಾಲ್‌ನ ಕಾರ್ಖಾನೆಯೊಂದರಿಂದ ಮೀಥೈಲ್ ಐಸೋಸೈನೇಟ್ ವಿಷಾನಿಲ ಬಿಡುಗಡೆಯಾಯಿತು. 10 ಕಿ.ಮೀ ವ್ಯಾಪ್ತಿಯಲ್ಲಿ ಸಾವಿರಾರು ಜನರನ್ನು ಬಲಿಪಡೆದು, ಬಹುತೇಕರನ್ನು ಅಂಗವೈಕಲ್ಯಕ್ಕೆ ದೂಡಿತು. ಆದರೆ, ಕಾರ್ಖಾನೆಯಿಂದ 2 ಕಿ.ಮೀ ದೂರದಲ್ಲಿದ್ದ ಬ್ರಾಹ್ಮಣ ಕುಟುಂಬವೊಂದರ ಮನೆ ಪ್ರವೇಶಿಸಲು ವಿಷಾನಿಲಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ಆ ಮನೆಯಲ್ಲಿ ನಿತ್ಯವೂ ಅಗ್ನಿಹೋತ್ರ ಹೋಮ ನಡೆಯುತ್ತಿತ್ತು. ಇದು ನೂರಕ್ಕೆ ನೂರರಷ್ಟು ಸತ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.