ದಾವಣಗೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ರಾಜ್ಯ ಮಟ್ಟದ ಅಧಿವೇಶನವನ್ನು ಜೂನ್ 7 ರಂದು 8 ರಂದು ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟಿ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
‘ಸಾಹಿತ್ಯದಲ್ಲಿ ‘ಸ್ವ’ತ್ವ ವಿಷಯದ ಕುರಿತು ಎರಡು ದಿನ ಚರ್ಚೆ, ಸಂವಾದ, ಹರಟೆ, ಕವಿಗೋಷ್ಠಿ ನಡೆಯಲಿವೆ. ಸ್ವಂತಿಕೆ, ಸ್ವಗುಣ ಬಿಂಬಿಸುವ ‘ಸ್ವ’ತ್ವವು ಸಾಹಿತ್ಯದಲ್ಲಿ ಹೇಗಿದೆ ಎಂಬುದನ್ನು ಅರಿಯುವುದು ಅಧಿವೇಶನದ ಉದ್ದೇಶ’ ಎಂದು ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಾಹಿತಿ ಪ್ರೊ.ಪ್ರೇಮಶೇಖರ ಅಧಿವೇಶನ ಉದ್ಘಾಟಿಸಲಿದ್ದಾರೆ. ಅಧಿವೇಶನದ ಭಾಗವಾಗಿ ಹೊರತಂದಿರುವ ಕೃತಿಗಳನ್ನು ಸಂಶೋಧಕ ಸಂಗಮೇಶ್ವರ ಸವದತ್ತಿಮಠ ಬಿಡುಗಡೆ ಮಾಡಲಿದ್ದಾರೆ. ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ನಾ.ಮೊಗಸಾಲೆ ಪಾಲ್ಗೊಳ್ಳಲಿದ್ದಾರೆ. ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.
‘ಸಾಹಿತ್ಯದಲ್ಲಿ ‘ಸ್ವ’ತ್ವದ ಅಭಿವ್ಯಕ್ತಿ ಕುರಿತು ಸಾಹಿತಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಚರ್ಚಾಗೋಷ್ಠಿ ನಡೆಯಲಿದೆ. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ‘ನಮ್ಮ ಕಟ್ಟೆ–ನಮ್ಮ ಮಾತು’ ಹರಟೆ ನಡೆಸಿಕೊಡಲಿದ್ದಾರೆ. ಜೂನ್ 8ರಂದು ಕವಿ ದಿವಾಕರ ಹೆಗಡೆ ಕೆರೆಹೊಂಡ ಅಧ್ಯಕ್ಷತೆಯಲ್ಲಿ ಕಾವ್ಯಗೋಷ್ಠಿ ಏರ್ಪಡಿಸಲಾಗಿದೆ. ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್ ಸಮಾರೋಪ ಭಾಷಣ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.