ADVERTISEMENT

ವಸತಿರಹಿತರಿಗೆ ಮನೆ ಹಂಚಲು ಕ್ರಮಕೈಗೊಳ್ಳಿ

ನಗರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಸಂಸದ ಸಿದ್ದೇಶ್ವರ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 13:46 IST
Last Updated 12 ಸೆಪ್ಟೆಂಬರ್ 2019, 13:46 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು.
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು.   

ದಾವಣಗೆರೆ: ನಗರದಲ್ಲಿರುವ ಎಲ್ಲಾ ಅರ್ಹ ವಸತಿರಹಿತರಿಂದ ಅರ್ಜಿ ಆಹ್ವಾನಿಸಿ ಒಂದೇ ಬಾರಿಗೆ ಎಲ್ಲರಿಗೂ ಮನೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಗರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್‌ ವಸತಿ ಯೋಜನೆ (ಪಿ.ಎಂ.ವೈ.ಎ) ಬಗ್ಗೆ ಮಾಹಿತಿ ಪಡೆದ ಸಂಸದರು, ‘ಕೆಲ ದಿನಗಳ ಹಿಂದೆ ಸಾವಿರಾರು ಜನ ಶಾಸಕರ ಮನೆ ಮುಂದೆ ಜಮಾಯಿಸಿದ್ದರು. ಹೊರಗಿನಿಂದ ಅರ್ಜಿ ಸ್ವೀಕರಿಸಲು ಅವಕಾಶ ಇಲ್ಲದಿರುವಾಗ ಸಾರ್ವಜನಿಕರಲ್ಲಿ ಏಕೆ ಗೊಂದಲ ಉಂಟುಮಾಡಲಾಗಿದೆ. ಮನೆ ನೀಡುವುದು ಯಾವುದೇ ಒಬ್ಬರ ಸ್ವತ್ತಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ‘ನಗರದಲ್ಲಿ 24 ಸಾವಿರ ಅರ್ಹ ವಸತಿರಹಿತರು ಅರ್ಜಿ ಸಲ್ಲಿಸಿದ್ದಾರೆ. 56 ಎಕರೆ ಜಾಗ ಈಗಾಗಲೇ ಖರೀದಿಸಲಾಗಿದೆ. ಇನ್ನೂ 19 ಎಕರೆ ಜಾಗ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ಎಕರೆಯಲ್ಲಿ ಜಿ+2 ಮಾದರಿಯಲ್ಲಿ 100 ಮನೆಗಳನ್ನು ನಿರ್ಮಿಸಲು ಸಾಧ್ಯವಿದೆ. ಇನ್ನೂ 100 ಎಕರೆ ಜಾಗ ಖರೀದಿಗೆ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಜಲಸಿರಿ ಯೋಜನೆಯಡಿ ಕೈಗೊಂಡಿರುವ ಎಸ್‌ಟಿಪಿ ಹಾಗೂ ಯುಜಿಡಿ ಕಾಮಗಾರಿ ವಿವರ ಪಡೆದ ಸಂಸದರು, ಚರಂಡಿ ನೀರು ಎಸ್‌ಟಿಪಿಗೆ ತಲುಪುವಂತೆ ಮಾಡಲು ಚರಂಡಿ ಜಾಲಗಳನ್ನು ಸಮರ್ಪಕವಾಗಿ ಜೋಡಿಸುವ ಕೆಲಸವನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ವಸತಿ ಯೋಜನೆಯಡಿ ಫಲಾನುಭವಿಗಳಿಗೆ ತ್ವರಿತವಾಗಿ ಮನೆ ಕೊಡಿಸಲು ಹಾಗೂ ಯುಜಿಡಿ, ಎಸ್‌ಟಿಪಿ, ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪ್ರತ್ಯೇಕವಾಗಿ ಸಭೆ ನಡೆಸಿ ಕಾಮಗಾರಿಗೆ ಚುರುಕು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ, ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಹಣ ಖರ್ಚು ಮಾಡದಿರುವುದು ಬೇಜವಾಬ್ದಾರಿತನ’

2018–19ನೇ ಸಾಲಿನ 14ನೇ ಹಣಕಾಸು ಆಯೋಗದ ಅನುದಾನದಡಿ ಇನ್ನೂ 16 ಕಾಮಗಾರಿಗಳು ಆರಂಭಗೊಳ್ಳದೆ ಇರುವುದಕ್ಕೆ ಅಸಮಾಧಾನಗೊಂಡ ಸಂಸದರು, ‘₹ 10 ಕೋಟಿಯನ್ನು ಖರ್ಚು ಮಾಡದೇ ಇರುವುದು ಬೇಜವಾಬ್ದಾರಿತನವಾಗಿದೆ. ಪ್ರಸಕ್ತ ಸಾಲಿನ ಅನುದಾನದ ಕಾಮಗಾರಿಯನ್ನು ಇನ್ನೂ ಆರಂಭಿಸಿಲ್ಲ. ಕೇಂದ್ರ ಸರ್ಕಾರ ನೀಡುವ ಈ ಅನುದಾನದಿಂದ ಪಾಲಿಕೆಗೆ ಆಸ್ತಿ ಮಾಡುವುದನ್ನು ಬಿಟ್ಟು ನಿರ್ವಹಣೆ ಕಾಮಗಾರಿಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

‘ಹಣಕಾಸು ಆಯೋಗದ ಅನುದಾನದ ಕಾಮಗಾರಿ ಹಾಗೂ ನಗರೋತ್ಥಾನ ಯೋಜನೆಯ ಅನುದಾನದ ಕಾಮಗಾರಿಗಳನ್ನು ಎಲ್ಲೆಲ್ಲಿ ಕೈಗೊಳ್ಳಲಾಗಿದೆ ಎಂಬ ವರದಿ ನೀಡಿ. ಈ ಬಗ್ಗೆ ಸ್ಥಳಪರಿಶೀಲನೆ ನಡೆಸೋಣ’ ಎಂದು ಸಂಸದರು ಹೇಳಿದರು.

ಸ್ವಚ್ಛ ಭಾರತ ಮಿಷನ್‌ನಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನೀಡಿದ್ದ ಅನುದಾನದಲ್ಲಿನ ಉಳಿಕೆ ಹಣವನ್ನು ಸಾಮೂಹಿಕ ಶೌಚಾಲಯ ನಿರ್ಮಿಸಲು ಬಳಸಿಕೊಳ್ಳಿ ಎಂದೂ ಸಲಹೆ ನೀಡಿದರು.

ಎರಡು ವರ್ಷಗಳಲ್ಲಿ ನಿರಂತರ ನೀರು

ನಗರಕ್ಕೆ 24x7 ನಿರಂತರ ನೀರು ಪೂರೈಸುವ ಯೋಜನೆ ವಿಳಂಬವಾಗುತ್ತಿರುವುದಕ್ಕೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ತೆರವುಗೊಳಿಸದೆ ಇರುವ ಬಗ್ಗೆ ಸಂಸದ ಸಿದ್ದೇಶ್ವರ, ಜಲಸಿರಿ ಯೋಜನೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಯು.ಐ.ಡಿ.ಎಫ್‌.ಸಿಯ ಜಲಸಿರಿ ಯೋಜನೆ ಅಧಿಕಾರಿಗಳು, ‘ನಿರಂತರ ನೀರು ಪೂರೈಸಲು ನಗರದಲ್ಲಿ ಒಟ್ಟು 50 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇದೇ ಡಿಸೆಂಬರ್‌ ಅಂತ್ಯಕ್ಕೆ ಯರಗುಂಟೆ, ಬಸಾಪುರ ವಲಯಗಳಿಗೆ ನಿರಂತರ ನೀರು ಪೂರೈಸಲಾಗುವುದು. ಮುಂದಿನ ಮಾರ್ಚ್‌ ಅಂತ್ಯಕ್ಕೆ ಇನ್ನೂ 20 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 2021ರ ಡಿಸೆಂಬರ್‌ ಅಂತ್ಯಕ್ಕೆ ಇಡೀ ನಗರಕ್ಕೆ ನಿರಂತರ ನೀರು ಪೂರೈಸಲಾಗುವುದು’ ಎಂದು ವಾಗ್ದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.