ದಾವಣಗೆರೆ: ‘ಇಷ್ಟು ದಿನ ಚಿತ್ರ ಬಿಡಿಸಲು ವಿಷಯವಸ್ತುವಿಗಾಗಿ ತಡಕಾಡಿದ್ದೇವೆ. ರಂಗಭೂಮಿಯಲ್ಲೂ ಭರಪೂರ ವಿಷಯ ಸಂಪತ್ತು ಅಡಗಿದೆ ಎಂಬ ಅರಿವು ಮೂಡಿದ್ದು ಈ ಶಿಬಿರದಿಂದಲೇ. ಶಿಬಿರದಿಂದ ಚಿತ್ರಕಲೆಗಿರುವ ಬಹು ಆಯಾಮವು ಮನದಟ್ಟಾಯಿತು…’
ಈ ಆತ್ಮವಿಶ್ವಾಸ ವ್ಯಕ್ತವಾಗಿದ್ದು ನಗರದ ದೃಶ್ಯಕಲಾ ಕಾಲೇಜಿನಲ್ಲಿ ‘ರಾಷ್ಟ್ರೀಯ ವೃತ್ತಿರಂಗೋತ್ಸವ’ದ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ.
ಇದೇ 15ರಿಂದ 17ರವರೆಗೆ ದೃಶ್ಯಕಲಾ ಕಾಲೇಜು ಆವರಣದ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ನಾಟಕೋತ್ಸವದ ಪೂರ್ವಭಾವಿಯಾಗಿ ಆಯ್ದ 15 ವಿದ್ಯಾರ್ಥಿಗಳಿಗೆ ರಂಗಭೂಮಿ ಹಿನ್ನೆಲೆಯನ್ನಾಧರಿಸಿ ಚಿತ್ರಕಲಾ ಶಿಬಿರ ಹಾಗೂ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಪಾಲ್ಗೊಂಡ ಒಬ್ಬೊಬ್ಬ ವಿದ್ಯಾರ್ಥಿಯೂ ವಿಭಿನ್ನ ವಸ್ತುವನ್ನು ಆಯ್ದುಕೊಂಡು ಕಲಾಕೃತಿ ರಚಿಸಿದ್ದಾರೆ. ಅವೆಲ್ಲವೂ ‘ರಾಷ್ಟ್ರೀಯ ವೃತ್ತಿರಂಗೋತ್ಸವ’ದಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರೇಕ್ಷಕರು ನಾಟಕದ ಜೊತೆಗೆ ವೃತ್ತಿ ರಂಗಭೂಮಿ ಹಿನ್ನೆಲೆಯಲ್ಲಿ ಒಡಮೂಡಿದ ಚಿತ್ರಕಲೆಗಳನ್ನೂ ಕಣ್ತುಂಬಿಕೊಳ್ಳಬಹುದು.
ವಿದ್ಯಾರ್ಥಿಗಳು ರಚಿಸಿದ ಒಂದೊಂದು ಕಲಾಕೃತಿಯೂ ಭಿನ್ನ ಆಯಾಮದಲ್ಲಿ ರೂಪುಗೊಂಡಿವೆ. ಐಶ್ವರ್ಯಾ ಇಳಿಗೇರ ರಚಿಸಿರುವ ‘ಹಯವದನ’ ನಾಟಕದ ದೃಶ್ಯ, ಗೌತಮ್ ಎ.ಎನ್ ರಚಿಸಿರುವ ‘ಭಿಕ್ಷುಕ’, ಸಬ್ರೀನ್ ತಾಜ್ ಕೆ.ಎಸ್ ರಚಿಸಿರುವ ‘ವಿಷಮ ವಿವಾಹ’ ನಾಟಕದ ದೃಶ್ಯ, ಕೀರ್ತನಾ ಎಸ್.ಎಲ್ ರಚಿಸಿರುವ ‘ಚಿತ್ರಾಂಗದೆ’ ನಾಟಕದ ಪ್ರಸಂಗ, ಗಗನ್ ಕೆ.ವಿ ರಚಿಸಿರುವ ‘ಅಶೋಕ’ನ ಚಿತ್ರ, ಶಿಲ್ಪಾ ಡಿ.ಬಿ. ರಚಿಸಿರುವ ದಮಯಂತಿ ಚಿತ್ರ, ಶಕಿಲ್ ಅಹ್ಮದ್ ರಚಿಸಿರುವ ‘ರಂಗಭೂಮಿ ಕಲಾವಿದ ಹಂದಿಗನೂರು ಸಿದ್ದರಾಮಪ್ಪ’ ಅವರ ಕಲಾಕೃತಿ, ರಾಹುಲ್ ಕೆ. ರಚಿಸಿರುವ ‘ನವರಸಗಳು’ ಕಲಾಕೃತಿ ಸೇರಿ ಶಿಬಿರದಲ್ಲಿ ರಚನೆಗೊಂಡ ಎಲ್ಲ ಕೃತಿಗಳೂ ಕಲಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
2.5 X 2.5 ಅಡಿ ಅಳತೆಯ ಕ್ಯಾನ್ವಾಸ್ ಮೇಲೆ ಅಕ್ರೇಲಿಕ್ ಮಾಧ್ಯಮದಲ್ಲಿ ಕಲಾಕೃತಿಗಳು ಒಡಮೂಡಿವೆ. ವೃತ್ತಿ ರಂಗಭೂಮಿ ಎಂದಕೂಡಲೇ ಬಹುತೇಕರ ಕಣ್ಣಮುಂದೆ ಸುಳಿಯುವುದು ‘ಪರದೆ’. ಕಂಪನಿ ನಾಟಕವನ್ನು ಪ್ರತಿಬಿಂಬಿಸುವ ‘ಪರದೆ’ಗಳು ಬಹುತೇಕರ ಕಲಾಕೃತಿಗಳಲ್ಲಿ ಬಿಂಬಿತವಾಗಿವೆ. ಚಿತ್ರರಚನೆಗೂ ಮುನ್ನ ವಿದ್ಯಾರ್ಥಿಗಳಿಗೆ ಶಿಬಿರದ ಸಂಚಾಲಕರಾದ ದತ್ತಾತ್ರೇಯ ಎನ್. ಭಟ್ಟ ಹಾಗೂ ಶಿವಶಂಕರ ಸುತಾರ ಮಾರ್ಗದರ್ಶನ ನೀಡಿದ್ದರು.
‘ರಂಗಭೂಮಿಯ ಒಳಹೊರಗು, ನೆರಳು– ಬೆಳಕಿನ ಆಟ, ಪಾತ್ರಗಳ ಭಾವಾಭಿವ್ಯಕ್ತಿ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಯಿತು. ನಿತ್ಯ ಪಾಠ ಪ್ರವಚನದಲ್ಲಿ ತಲ್ಲೀನರಾಗಿರುತ್ತಿದ್ದ ನಮಗೆ ಭಿನ್ನ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿತು. ವೃತ್ತಿರಂಗಭೂಮಿ ಬಗ್ಗೆ ಬಹುತೇಕ ವಿದ್ಯಾರ್ಥಿಗಳಿಗೆ ಗೊತ್ತಿರಲಿಲ್ಲ. ಆ ಬಗೆಗಿನ ಜ್ಞಾನ ಸಂಪಾದನೆ ಶಿಬಿರದಿಂದ ಸಾಧ್ಯವಾಯಿತು’ ಎನ್ನುತ್ತಾರೆ ದತ್ತಾತ್ರೇಯ ಎನ್. ಭಟ್ಟ.
ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ), ದಾವಣಗೆರೆಯ ಚಿಂದೋಡಿ ಲೀಲಾ ನಾಟಕ ಮಂಡಳಿ, ಮಂಗಳೂರಿನ ಸಂಕೇತ್ ನಾಟಕ ಕಂಪನಿ, ಗೋಕಾಕ್‌ನ ಶಾರದಾ ಸಂಗೀತ ನಾಟಕ ಮಂಡಳಿಗಳು ಪ್ರದರ್ಶಿಸಿದ ನಾಟಕಗಳ ದೃಶ್ಯಗಳು ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿವೆ.
ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಕ್ಯಾನ್ವಾಸ್, ಬಣ್ಣ ಹಾಗೂ ಫ್ರೇಮ್‌ನ ವೆಚ್ಚವನ್ನು ವೃತ್ತಿ ರಂಗಭೂಮಿ ರಂಗಾಯಣವೇ ಭರಿಸಿದೆ.ವೃತ್ತಿರಂಗಭೂಮಿ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ನಾಟಕದ ಸುತ್ತಲೂ ಚಾಚಿಕೊಂಡಿರುವ ವಿಷಯಗಳನ್ನು ಅರಿಯಲು ಶಿಬಿರ ಸಹಕಾರಿಯಾಯಿತು. ರಂಗಭೂಮಿ ಬಗ್ಗೆ ಒಲವು ಮೂಡಿತು ಸಬ್ರೀನ್ ತಾಜ್ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿ
ವೃತ್ತಿರಂಗಭೂಮಿ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ನಾಟಕದ ಸುತ್ತಲೂ ಚಾಚಿಕೊಂಡಿರುವ ವಿಷಯಗಳನ್ನು ಅರಿಯಲು ಶಿಬಿರ ಸಹಕಾರಿಯಾಯಿತು. ರಂಗಭೂಮಿ ಬಗ್ಗೆ ಒಲವು ಮೂಡಿತುಸಬ್ರೀನ್ ತಾಜ್ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿ
ರಂಗಭೂಮಿಯ ಒಡನಾಟ ಇದ್ದ ನನಗೆ ಚಿತ್ರಕಲೆಯಲ್ಲೂ ಆ ದೃಶ್ಯಗಳನ್ನು ಒಡಮೂಡಿಸಬಹುದು ಎಂಬ ಅರಿವನ್ನು ಶಿಬಿರ ಮೂಡಿಸಿತು. ನವರಸಗಳನ್ನು ಕಲಾಕೃತಿಯಲ್ಲಿ ಹಿಡಿದಿಟ್ಟಿದ್ದೇನೆರಾಹುಲ್ ಕೆ ದೃಶ್ಯಕಲಾ ಕಾಲೇಜು ವಿದ್ಯಾರ್ಥಿ
‘ಚಿತ್ರಕಲೆಯೂ ರಂಗಭೂಮಿಯ ಭಾಗವೇ’ ರಂಗಭೂಮಿ ಎಂದರೆ ಕೇವಲ ಅಭಿನಯವಲ್ಲ. ಅದು ಲಲಿತಕಲೆಗಳ ಆಗರ. ಸಂಗೀತ ಸಾಹಿತ್ಯ ಚಿತ್ರಕಲೆ ಹೀಗೆ ಬಹು ಆಯಾಮಗಳ ಸಮ್ಮಿಲನ. ಕಲೆ ಹಾಗೂ ರಂಗಭೂಮಿ ನಡುವೆ ಒಂದು ಅಂತರ್‌ಶಿಸ್ತೀಯ ನಂಟು ಇದೆ. ರಂಗಸಜ್ಜಿಕೆ ಪರದೆಗಳ ಚಿತ್ರಗಳು ಕಲೆಯ ಹೊರತಾಗಿಲ್ಲ. ದೃಶ್ಯಕಲಾ ವಿದ್ಯಾರ್ಥಿಗಳು ಹಾಗೂ ರಂಗಭೂಮಿಯ ನಂಟು ಬೆಸೆಯುವ ಉದ್ದೇಶದಿಂದ ಚಿತ್ರಕಲೆ ಶಿಬಿರ ಆಯೋಜಿಸಿದ್ದೆವು. ಮಧ್ಯ ಕರ್ನಾಟಕದ ಮಟ್ಟಿಗೆ ಇದು ಮೊದಲ ಪ್ರಯೋಗ. ರಂಗಭೂಮಿಯತ್ತ ಯುವಜನರನ್ನು ಸೆಳೆಯಲು ‘ಕಾಲೇಜು ರಂಗೋತ್ಸವ’ ಹೆಸರಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ – ಮಲ್ಲಿಕಾರ್ಜುನ ಕಡಕೋಳ ನಿರ್ದೇಶಕರು ವೃತ್ತಿ ರಂಗಭೂಮಿ ರಂಗಾಯಣ
ಸ್ಪರ್ಧೆಯ ವಿಜೇತರು ಮಾರ್ಚ್ 5ರಿಂದ 7ರವರೆಗೆ ಮೂರು ದಿನ ನಡೆದ ಶಿಬಿರ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸಬ್ರೀನ್ ತಾಜ್ ಕೆ.ಎಸ್ (ಮೊದಲ) ಗಗನ ಕೆ.ವಿ (ದ್ವಿತೀಯ) ಹಾಗೂ ಕೀರ್ತನಾ ಎಸ್.ಎಲ್ (ತೃತೀಯ) ಬಹುಮಾನ ಪಡೆದಿದ್ದಾರೆ. ತೀರ್ಪುಗಾರರಾಗಿ ಸಂತೋಷಕುಮಾರ್ ಕುಲಕರ್ಣಿ ಹಾಗೂ ಸುರೇಶ್ ಡಿ.ಎಚ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.