ADVERTISEMENT

ದಾವಣಗೆರೆ: ಕರಿಯಪ್ಪನ ಬಹು ಸಂತಾನದ ಸಿರೋಹಿ ಮೇಕೆಗಳು

ಎನ್.ವಿ.ರಮೇಶ್
Published 10 ಜನವರಿ 2022, 5:31 IST
Last Updated 10 ಜನವರಿ 2022, 5:31 IST
ಮೇಕೆ ಮರಿಯೊಂದಿಗೆ ಕರಿಯಪ್ಪ
ಮೇಕೆ ಮರಿಯೊಂದಿಗೆ ಕರಿಯಪ್ಪ   

ಬಸವಾಪಟ್ಟಣ: ಮೇಕೆಗಳು ಆರು ತಿಂಗಳಿಗೆ ಒಮ್ಮೆ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ. ಆದರೆ, ಇಲ್ಲಿನ ಕಾಟಪ್ಪರ ಕರಿಯಪ್ಪ ಸಾಕಿರುವ ಸಿರೋಹಿ ತಳಿಯ ಮೇಕೆಗಳು ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ.

ಕೃಷಿ ಕಾರ್ಮಿಕರಾಗಿದ್ದ ಕರಿಯಪ್ಪ ಎಂಟು ವರ್ಷಗಳ ಹಿಂದೆ ಒಂದು ಕಂದು ಬಣ್ಣದ ಹೆಣ್ಣು ಮೇಕೆಯನ್ನು ಖರೀದಿಸಿದ್ದರು. ಅದು ಆರು ತಿಂಗಳಿಗೆ ಒಮ್ಮೆಲೆ ಮೂರು ಮರಿಗಳಿಗೆ ಜನ್ಮ ನೀಡಿತು. ನಂತರದಲ್ಲಿ ಕರಿಯಪ್ಪ ಅವರಿಗೆ ಮೇಕೆ ಸಾಕಾಣಿಕೆ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯಿತು. ಅದನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡರು. ಈಗ ಅವರ ಹತ್ತಿರ 25ಕ್ಕೂ ಹೆಚ್ಚು ಮೇಕೆಗಳು, 10ಕ್ಕೂ ಹೆಚ್ಚು ಮರಿಗಳಿವೆ.

‘ಗಂಡು ಮೇಕೆಗಳು ಬಲಿತ ಕೂಡಲೇ ಮಾರುತ್ತೇವೆ. ಈ ಮೇಕೆಗಳು 25 ಕೆ.ಜಿಗಿಂತ ಹೆಚ್ಚು ತೂಕ ಹೊಂದಿದ್ದು, ₹ 12 ಸಾವಿರದಿಂದ ₹ 13 ಸಾವಿರಕ್ಕೆ ಮಾರಾಟವಾಗುತ್ತಿವೆ. ಹೆಣ್ಣು ಮೇಕೆಗಳು ತಮ್ಮ ಮರಿಗಳಿಗೆ ಹಾಲು ಕುಡಿಸಿದ ನಂತರ ತಲಾ ಅರ್ಧ ಲೀಟರ್‌ ಹಾಲು ನೀಡುತ್ತವೆ. ಆದರೆ, ನಾವು ಹಾಲು ಕರೆಯುವುದಿಲ್ಲ. ಮರಿಗಳಿಗೇ ಕುಡಿಯಲು ಬಿಡುತ್ತೇವೆ. ಪ್ರತಿ ಭಾನುವಾರ ಮತ್ತು ಗುರುವಾರ ನಾಟಿ ಔಷಧ ಬಳಸಲು ಜನ ಮೇಕೆ ಹಾಲು ಕೇಳಿಕೊಂಡು ಬರುತ್ತಾರೆ. ಅಂತಹವರಿಗೆ ಉಚಿತವಾಗಿಯೇ ಹಾಲು ನೀಡುತ್ತೇವೆ’ ಎನ್ನುತ್ತಾರೆ ಕರಿಯಪ್ಪ ಅವರ ಮಗಳು ಲಲಿತಮ್ಮ.

ADVERTISEMENT

‘ಮೇಕೆ ಸಾಕಣಿಕೆಯಲ್ಲಿ ತುಂಬಾ ಲಾಭವಿದೆ. ಮೇಕೆಗಳ ತ್ಯಾಜ್ಯ (ಹಿಕ್ಕೆ) ಉತ್ತಮ ಗೊಬ್ಬರ. ಒಂದು ಟ್ರ್ಯಾಕ್ಟರ್‌ ಲೋಡ್‌ ಹಿಕ್ಕೆ ಗೊಬ್ಬರಕ್ಕೆ ₹ 5 ಸಾವಿರ ಬೆಲೆ ಇದ್ದು, ಅದನ್ನು ಸಂಗ್ರಹಿಸಿ ಮಾರಾಟ ಮಾಡುತ್ತೇವೆ. ಕಂದು ಬಣ್ಣದ ಮೇಕೆಗಳಿಗೆ ತುಂಬಾ ಬೇಡಿಕೆ. ಗ್ರಾಮದ ಗುಡ್ಡ ಹಾಗೂ ಕೆರೆಗಳ ಬದಿಯಲ್ಲಿ ನಮ್ಮ ತಂದೆ ಕರಿಯಪ್ಪ ಮೇಕೆಗಳನ್ನು ಮೇಯಿಸಿಕೊಂಡು ಬರುತ್ತಾರೆ. ಮನೆಗಳಲ್ಲಿರುವ ಚಿಕ್ಕ ಮರಿಗಳಿಗೆ ಮುಂಜಾನೆ ಹಸಿ ಹುಲ್ಲು ಕೊಯ್ದುಕೊಂಡು ಬಂದು ಹಾಕುತ್ತೇವೆ. ಮೇಕೆ ಸಾಕಾಣಿಕೆಗೆ ಸ್ಥಳಾವಕಾಶದ ಕೊರತೆ ಇದ್ದು, ಇರುವುದರಲ್ಲಿಯೇ ಸಾಕುತ್ತಿದ್ದೇವೆ’ ಎನ್ನುತ್ತಾರೆ ಅವರು.

ಕರಿಯಪ್ಪ ಕಡುಬಡವರು. ಇವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಮೇಕೆ ಸಾಕಾಣಿಕೆಗೆ ಅಗತ್ಯ ನಿವೇಶನ ಒದಗಿಸಿ, ಶೆಡ್‌ ನಿರ್ಮಿಸಿ ಕೊಟ್ಟರೆ ಮೇಕೆ ಸಾಕಾಣಿಕೆಯನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ರಾಜಸ್ಥಾನ ಮೂಲದ ತಳಿ
‘ಕರಿಯಪ್ಪ ಅವರು ಸಾಕಿರುವ ಮೇಕೆ ರಾಜಸ್ಥಾನ ಮೂಲದ ಸಿರೋಹಿ ತಳಿಯದು. ರಾಜ್ಯದ ಬೆಳಗಾವಿಯಲ್ಲಿ ಇವುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಇವು ನಮ್ಮ ಗ್ರಾಮೀಣ ಭಾಗದ ಕಪ್ಪು ಮೇಕೆಗಳಿಗಿಂತ ಹೆಚ್ಚು ತೂಕ ಹೊಂದಿದ್ದು, ವೇಗವಾಗಿ ಬೆಳೆಯುತ್ತವೆ. ಪ್ರತಿ ದಿನ ಎರಡರಿಂದ ಎರಡೂವರೆ ಲೀಟರ್‌ ಹಾಲನ್ನು ನೀಡುತ್ತವೆ. ಮೇಕೆ ಹಾಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಸಿರೋಹಿ ತಳಿಯ ಮೇಕೆಗಳು ಗರ್ಭ ಧರಿಸುವ ಸಮಯದಲ್ಲಿ ಹೆಚ್ಚು ಅಂಡಾಣುಗಳು ಬಿಡುಗಡೆಯಾಗುವುದರಿಂದ ಒಂದು ಬಾರಿಗೆ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಆದ್ದರಿಂದ ಸಂತಾನಾಭಿವೃದ್ಧಿ ಹೆಚ್ಚಾಗಿರುತ್ತದೆ. ಭಾರತದಲ್ಲಿ ಪ್ರತಿ ವರ್ಷ ಕುರಿ ಮತ್ತು ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಮಾಂಸದ ಮಾರಾಟ ಹೆಚ್ಚು. ಮೇಕೆಗಳು ಎತ್ತರವಾದ ಗಿಡ ಮರಗಳ ಸೊಪ್ಪನ್ನು ತಿನ್ನುವುದರಿಂದ ಮೇಯಿಸುವುದು ಸುಲಭ. ಈ ತಳಿಯ ಮೇಕೆ ಸಾಕಣಿಕೆ ತುಂಬಾ ಲಾಭದಾಯಕ’ ಎನ್ನುತ್ತಾರೆ ಪಶುವೈದ್ಯಾಧಿಕಾರಿ ಡಾ.ಕಲ್ಲೇಶಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.