ADVERTISEMENT

ಹಿಂದಿ ವಿರೋಧಿಗಳು ದೇಶ ಒಡೆಯುವವರು

ರಾಜ್ಯಮಟ್ಟದ ಹಿಂದಿ ಶೈಕ್ಷಣಿಕ ಸಮ್ಮೇಳನದಲ್ಲಿ ಡಾ. ವೈ.ಎ. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:16 IST
Last Updated 27 ಸೆಪ್ಟೆಂಬರ್ 2022, 4:16 IST
ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹಿಂದಿ ಸಮ್ಮೇಳನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹಿಂದಿ ಸಮ್ಮೇಳನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ದೇಶ ಒಡೆಯುವ ರಾಜಕೀಯ ಕುತಂತ್ರ, ಷಡ್ಯಂತ್ರದ ಭಾಗವಾಗಿ ಹಿಂದಿಯನ್ನು ವಿರೋಧಿಸಲಾಗುತ್ತಿದೆ.ಹಿಂದಿ ರಾಷ್ಟ್ರಭಾಷೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಿಂದಿ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಫ್ರೆಂಚ್, ಜರ್ಮನ್, ಜಪಾನೀಸ್, ಚೈನೀಸ್ ಭಾಷೆ ಕಲಿಸಲಾಗುತ್ತಿದೆ. ಆದರೆ ಯಾವುದೇ ಭಾಷೆಗೂ ಇಲ್ಲದ ವಿರೋಧ ಹಿಂದಿ ವಿಚಾರದಲ್ಲಿ ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 30 ರಾಜ್ಯಗಳನ್ನು ಬೆಸೆಯುವ ಹಿಂದಿ ಭಾಷೆಯು
ದೇಶಕ್ಕೆ ಗೌರವ ತಂದಿದೆ, ಒಗ್ಗಟ್ಟು ಕಾಪಾಡಿದೆ ಎಂದರು.

ADVERTISEMENT

‘ನಾವು ವಿದ್ಯಾರ್ಥಿಯಾಗಿದ್ದಾಗ 5ನೇ ತರಗತಿಯಿಂದಲೇ ಹಿಂದಿ ಕಲಿಸಲಾಗುತ್ತಿತ್ತು. ಈಗಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯ ಫಲಿತಾಂಶವೇ ಉತ್ತಮವಾಗಿದೆ. ದೇಶಭಕ್ತರಾದ ನಮಗೆ ಹಿಂದಿ ಬೇಕು’ ಎಂದು ಹೇಳಿದರು.

ಶಿಕ್ಷಕರಿಗೆ ಗೌರವ ಕೊಡದ ಸಮಾಜ ಉಳಿಯಲು ಸಾಧ್ಯವಿಲ್ಲ. ಶಿಕ್ಷಕರ ಮುಖದಲ್ಲಿ ಮಂದಹಾಸವಿದ್ದಾಗ ಮಾತ್ರ ಸಮಾಜ ಸುಭದ್ರವಾಗಿರುತ್ತದೆ. ಶಿಕ್ಷಕರ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು. ಭಿನ್ನಾಭಿಪ್ರಾಯ ತೊರೆದು ಶಿಕ್ಷಕರು ಒಗ್ಗಟ್ಟಾಗಿದ್ದರೆ ಸಂಘಟನೆ ಗಟ್ಟಿಯಾಗುತ್ತದೆ. ಸಂಘಟನೆ ಶಕ್ತಿಯುತವಾಗಿದ್ದಾಗಲೇ ಶಿಕ್ಷಕರ ಬೇಡಿಕೆಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.

ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಪಕ್ಷಿ, ರಾಷ್ಟ್ರೀಯ ಪ್ರಾಣಿ ಇದೆ. ಆದರೆ ಈವರೆಗೆ ನಮ್ಮ ರಾಷ್ಟ್ರಭಾಷೆ ಕುರಿತಂತೆ ಗೊಂದಲ ಬಗೆಹರಿದಿಲ್ಲ. ಜವಾಹರಲಾಲ್ ನೆಹರೂರಿಂದ ನರೇಂದ್ರ ಮೋದಿವರೆಗೆ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಘೋಷಿಸುವ ಪ್ರಯತ್ನಗಳಾದರೂ ದುರದೃಷ್ಟವಶಾತ್ ಸಾಧ್ಯವಾಗಿಲ್ಲ. ಹಿಂದಿ ಹೇರಿಕೆಯ ಆರೋಪದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ವಿರೋಧ ವ್ಯಕ್ತವಾಗುತ್ತದೆ. ರಾಷ್ಟ್ರಭಾಷೆಯಾಗಿರುವ ಹಿಂದಿ ಹೇರಿಕೆ ತಪ್ಪೇನಲ್ಲ. ಈ ಸಮ್ಮೇಳನದ ಮೂಲಕ ಹಿಂದಿಯನ್ನು ರಾಷ್ಟ್ರಭಾಷೆ ಎಂಬುದಾಗಿ ಅಧಿಕೃತವಾಗಿ ಘೋಷಿಸಲು ಸಂದೇಶ ಹೋಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ಹೇಳಿದರು.

‘ಹಿಂದಿ ಶಿಕ್ಷಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದರು.

ಸಂಘದ ರಾಜ್ಯಾಧ್ಯಕ್ಷ ಧರ್ಮರಾಜ ಎಂ.ರಾಠೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಡಿ. ಹಾಲಪ್ಪ, ಡಯಟ್ ಪ್ರಾಂಶುಪಾಲೆ ಗೀತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಫಾಲಾಕ್ಷಿ, ಹಿಂದಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜಾನಾಯ್ಕ ಮತ್ತಿತರರು ಹಾಜರಿದ್ದರು.

ಸಂಘದ ಬೆಂಗಳೂರು ವಿಭಾಗ ಉಪಾಧ್ಯಕ್ಷ ಬಿ.ಮುಬಾರಕ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಪ್ರಶಸ್ತಿ ಪಡೆದಿರುವ ಹಿಂದಿ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲೆಗೊಬ್ಬ ಶಿಕ್ಷಕರಿಗೆ ಹಿಂದಿರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ವೆಬ್‍ಸೈಟ್ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.