ADVERTISEMENT

ಧೋಬಿಘಾಟ್‍ಗೆ ಮೂಲ ಸೌಲಭ್ಯ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 14:48 IST
Last Updated 7 ಜುಲೈ 2020, 14:48 IST
ದಾವಣಗೆರೆಯ ಮಡಿಕಟ್ಟೆಗೆ (ಧೋಬಿಘಾಟ್‍ಗೆ) ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಮಡಿಕಟ್ಟೆಯಲ್ಲಿ ಕೆಲಸ ಮಾಡುವವರು ಮೇಯರ್ ಬಿ.ಜಿ. ಅಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆಯ ಮಡಿಕಟ್ಟೆಗೆ (ಧೋಬಿಘಾಟ್‍ಗೆ) ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಮಡಿಕಟ್ಟೆಯಲ್ಲಿ ಕೆಲಸ ಮಾಡುವವರು ಮೇಯರ್ ಬಿ.ಜಿ. ಅಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.   

ದಾವಣಗೆರೆ: ನಗರದ ರಾಷ್ಟ್ರೀಯ ಹೆದ್ದಾರಿ ಜಿಲ್ಲಾ ಪಂಚಾಯಿತಿ ಸಮೀಪ ಇರುವ ಮಡಿಕಟ್ಟೆಗೆ (ಧೋಬಿಘಾಟ್‍ಗೆ) ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಮಡಿಕಟ್ಟೆಯಲ್ಲಿ ಕೆಲಸ ಮಾಡುವವರು ಮೇಯರ್ ಬಿ.ಜಿ. ಅಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಸಮುದಾಯದ ಮುಖಂಡ ಎಚ್.ಜಿ. ಉಮೇಶ್ ಮಾತನಾಡಿ, ‘ಮಡಿಕಟ್ಟೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವರ್ಗದ ನಾಗರಿಕರ, ವಸತಿ ಗೃಹಗಳ, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ಮಲಮೂತ್ರ ಮಿಶ್ರಣದ ಬಟ್ಟೆಗಳನ್ನು ಶುಚಿ ಮಾಡುವ ಜೊತೆ ಮಡಿ ಮಾಡುವ ಕಾಯಕದಲ್ಲಿ ನಿರತರಾಗಿರುವ ನಮಗೆ ಯಾವುದೇ ಮೂಲಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ’ ಎಂದು ಹೇಳಿದರು.

‘ದಿನನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೂ ನೀರಿನಲ್ಲಿ ನಿಂತು ಬಟ್ಟೆಗಳನ್ನು ತೊಳೆಯುವುದರಿಂದ ಕೈ ಮತ್ತು ಕಾಲುಗಳು ನೀರಿನಿಂದಾಗಿ ಸೆಲೆತುಹೋಗಿ, ಗಾಯಗಳಾಗಿ ಸೂಕ್ತ ಚಿಕಿತ್ಸೆ ಇಲ್ಲದೇ ಗ್ಯಾಂಗ್ರಿನ್‍ನಂತಹ ರೋಗಗಳಿಗೆ ತುತ್ತಾಗಿದ್ದಲ್ಲದೇ, ಜೀವಹಾನಿ ಮಾಡಿಕೊಂಡಿರುವ ಉದಾಹರಣೆಗಳಿವೆ’ ಎಂದರು.

ADVERTISEMENT

‘ಜಿಲ್ಲಾಡಳಿತ ಈ ಹಿಂದೆ ₹1 ಕೋಟಿ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಿತ್ತು. ಆದರೆ, ಇಲ್ಲಿ ಅವಶ್ಯವಿರುವ ಬಟ್ಟೆ ತೊಳೆಯುವ ಮಷಿನ್‍ಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಇದಲ್ಲದೇ ಬಟ್ಟೆ ತೊಳೆಯಲು ನೀರಿನ ಅಭಾವ ಕೂಡ ಹೆಚ್ಚಾಗಿದೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿ ಬಟ್ಟೆ ತೊಳೆಯುವ ಯಂತ್ರವನ್ನು ಅಳವಡಿಸಿ, ನೀರಿನ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಅಜಯ್‍ಕುಮಾರ್, ‘ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶಾಸಕರೊಂದಿಗೆ ಸೂಕ್ತ ಸೌಲಭ್ಯ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ಮಾಧ್ಯಮ ಸಲಹೆಗಾರ ಎಂ.ವೈ. ಸತೀಶ್, ಮಡಿಕಟ್ಟೆ ಸಮಿತಿಯ ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಎಂ.ರವಿ, ಬಿ. ರವಿಕುಮಾರ್, ಎಂ.ವೈ. ರಮೇಶ್, ನಿಂಗರಾಜ್, ರಾಕೇಶ್, ಶಿವಮೂರ್ತೆಪ್ಪ, ಗುತ್ಯಪ್ಪ, ಬಸವರಾಜ, ಶಂಕರ್, ಮಡಿವಾಳಪ್ಪ, ಸೋಮಶೇಖರ್, ಮಂಜುನಾಥ್ ಮಟ್ಟಿ, ಪರಶುರಾಮ, ಷಣ್ಮುಖಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.