ADVERTISEMENT

ದಾವಣಗೆರೆ: ಬಾಲ್ಯ ವಿವಾಹಕ್ಕೆ ಅಧಿಕಾರಿಗಳಿಂದ ತಡೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 5:44 IST
Last Updated 9 ಫೆಬ್ರುವರಿ 2023, 5:44 IST

ದಾವಣಗೆರೆ: ಎರಡು ದಿನಗಳಲ್ಲಿ ನಡೆಯಬೇಕಿದ್ದ ಬಾಲಕಿಯ ಮದುವೆಯನ್ನು ಮಕ್ಕಳ ಸಹಾಯವಾಣಿ ಕೊಲ್ಯಾಬ್
(ಡಾನ್ ಬಾಸ್ಕೋ) ತಂಡ ತಡೆಯೊಡ್ಡಿದೆ.

ದಾವಣಗೆರೆ ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಗ್ರಾಮವೊಂದರ ಬಾಲಕಿಯ ವಿವಾಹವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಡ್ಡೆಹಳ್ಳಿ ಗ್ರಾಮದ 23 ವರ್ಷದ ವರನೊಂದಿಗೆ ಫೆ.10ರಂದು ನಿಶ್ಚಯವಾಗಿತ್ತು.

ಈ ಕುರಿತು ಮಕ್ಕಳ ಸಹಾಯವಾಣಿಗೆ ಕೆಲವರು ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಮಕ್ಕಳ ಸಹಾಯವಾಣಿಯ ಕೊಲ್ಯಾಬ್ ಡಾನ್ ಬಾಸ್ಕೋದ ಸಂಯೋಜಕ ಕೊಟ್ರೇಶ್ ಟಿ.ಎಂ., ಕಾರ್ಯಕರ್ತೆ ಮಂಜುಳಾ ವಿ.ಟಿ.ನಾಗರಾಜ ಅವರು ಬಾಲಕಿ ವಿದ್ಯಾಭ್ಯಾಸ ಮಾಡಿದ್ದ ಶಾಲೆಯಿಂದ ಜನ್ಮದಿನಾಂಕ ದೃಢೀಕರಣ ಪತ್ರ ಪಡೆದು ಪರಿಶೀಲಿಸಿದಾಗ ಬಾಲಕಿಗೆ 17 ವರ್ಷ 1 ತಿಂಗಳು ಎಂಬ ಮಾಹಿತಿ ದೊರೆಯಿತು.

ADVERTISEMENT

ಕೂಡಲೇ ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡವು ಕಾಡಜ್ಜಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕೆಂಚಪ್ಪ, ಅಧ್ಯಕ್ಷೆ ಗೀತಮ್ಮ, ಮುಖ್ಯ ಶಿಕ್ಷಕರಾದ ನಾಗರಾಜ ಕೆ.ಎಸ್., ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾದರ್ಶಿನಿ, ಅಂಗನವಾಡಿ ಮೇಲ್ವಿಚಾಕರಾದ ಕವಿತಾ, ಹೆಡ್‌ ಕಾನ್‌ಸ್ಟೆಬಲ್ ಎಸ್.ಆರ್.ಲಕ್ಷ್ಮಿಪತಿ, ರೈತ ಮುಖಂಡ ಚಂದ್ರಪ್ಪ ಅವರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಯ ಪೋಷಕರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಲಾಯಿತು.

ಸೂಕ್ತ ಪೋಷಣೆ ಮತ್ತು ರಕ್ಷಣೆ ಕಲ್ಪಿಸುವ ಸಲುವಾಗಿ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.