ADVERTISEMENT

‘ಕಣ್ಣೀರುಮುಕ್ತ ಕರ್ನಾಟಕ' ಮಾಡಿ: ಆಯನೂರು ಮಂಜುನಾಥ ವ್ಯಂಗ್ಯ

ವಿಧಾನ ಪರಿಷತ್‌ ಸದಸ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 19:45 IST
Last Updated 17 ಮಾರ್ಚ್ 2019, 19:45 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಮುಕ್ತ ಭಾರತದ ಜೊತೆಗೆ ‘ಕಣ್ಣೀರುಮುಕ್ತ ಕರ್ನಾಟಕ’ವನ್ನೂ ಮಾಡಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ತಾನು, ತಾನಾದ ಮೇಲೆ ಮಕ್ಕಳು; ನಂತರ ಮೊಮ್ಮಕ್ಕಳನ್ನು ರಾಜಕಾರಣಕ್ಕೆ ತರಲಾಗುತ್ತಿದೆ. ಮೊನ್ನೆ ದೇವೇಗೌಡರು, ಅವರ ಪಕ್ಕದಲ್ಲಿ ಮೊಮ್ಮಗ, ಭವಾನಿ ರೇವಣ್ಣ, ರೇವಣ್ಣ ಅಳುವುದನ್ನು ಟಿವಿಯಲ್ಲಿ ನೋಡಿದೆ. ಕಣ್ಣೀರಧಾರೆ ಹರಿಯುತ್ತಿತ್ತು. ಈ ಬಿಸಿಲಿನಲ್ಲಿ ಕಾವೇರಿಯಲ್ಲಾದರೂ ನೀರು ಬತ್ತಿ ಹೋದೀತು; ಆದರೆ, ಈ ಅಪ್ಪ–ಮಕ್ಕಳ ಕಣ್ಣಲ್ಲಿ ಯಾವಾಗಲೂ ನೀರು ಬತ್ತುವುದಿಲ್ಲ. ಯಾವಾಗ ಬೇಕಾದರೂ ಅದು ಬರುತ್ತದೆ. ದಾವಣಗೆರೆಯ ನಲ್ಲಿಯ ನೀರು ಬಂದಾದೀತು ಹೊರತು ಅವರ ಕಣ್ಣಲ್ಲಿ ನೀರು ಬಂದಾಗುವುದಿಲ್ಲ’ ಎಂದು ಲೇವಡಿ ಮಾಡಿದರು.

‘ಹಾಸನ ಬಿಟ್ಟು ಹೋಗುತ್ತಿರುವುದರಿಂದ ದುಃಖವಾಯಿತು ಎಂದು ದೇವೇಗೌಡರು ಮರುದಿನ ಸ್ಪಷ್ಟನೆ ನೀಡಿದರು. 60 ವರ್ಷಗಳ ಕಾಲ ಹಾಸನದ ಜನ ನಿಮ್ಮನ್ನು ಬೆಳೆಸಿದರು. ಆದರೆ, ನೀವು ಅಲ್ಲಿ ಬೇರೆ ಯಾವುದೇ ನಾಯಕರನ್ನು ಬೆಳೆಸಲಿಲ್ಲ; ನಿಮ್ಮ ಮಗ–ಮೊಮ್ಮಗನನ್ನು ಬೆಳೆಸಿಕೊಂಡಿರಿ’ ಎಂದು ಆಯನೂರು ವಾಗ್ದಾಳಿ ನಡೆಸಿದರು.

ADVERTISEMENT

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನು ಬದುಕಬೇಕೆಂದರೆ ಜೆಡಿಎಸ್‌ಗೆ ವೋಟ್‌ ಹಾಕಿ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಬಟನ್‌ ಒತ್ತಿದ ತಕ್ಷಣವೇ ಅವರಿಗೆ ಕಣ್ಣೀರು ಬರುತ್ತದೆ’ ಎಂದು ಕುಟುಕಿದರು.

‘ಇಂಥ ಸ್ವಾರ್ಥಿಗಳ ನಡುವೆಯೂ ಸಂಸಾರವನ್ನೇ ಬಿಟ್ಟು ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ದೇಶದ ದುಡ್ಡನ್ನು ತನ್ನ ಕುಟುಂಬಕ್ಕೆ ಬಳಕೆ ಮಾಡದ ನಿಸ್ವಾರ್ಥ ನಾಯಕ. ಗಂಟು ಕಳ್ಳರಿಂದ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.