ADVERTISEMENT

ಬಲಿಪಾಡ್ಯಮಿ ಸಡಗರ: ಬಣ್ಣದ ಚಿತ್ತಾರ

ಹೆಚ್ಚಿದ ಪಟಾಕಿ ವಹಿವಾಟು l ಮನೆಗಳೆದುರು ರಾರಾಜಿಸಿದ ಆಕಾಶಬುಟ್ಟಿಗಳು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 3:25 IST
Last Updated 7 ನವೆಂಬರ್ 2021, 3:25 IST
ದಾವಣಗೆರೆಯ ಕೆ.ಬಿ.ಬಡಾವಣೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿಪೂಜೆ ನೆರವೇರಿಸಲಾಯಿತು (ಚಿತ್ರ 1). ವಿನೋಬ ನಗರದಲ್ಲಿ ಮೇಕಪ್ ಕಲಾವಿದೆ ರೂಪಾ ಸುರೇಶ್ ಅವರು ವಿದ್ಯಾರ್ಥಿನಿ ಸಿಂಚನಾಳಿಗೆ ಲಕ್ಷ್ಮಿ ಅಲಂಕಾರ ಮಾಡಿದಾಗ ಕಂಡಿದ್ದು ಹೀಗೆ (ಚಿತ್ರ 2). ನಿಟುವಳ್ಳಿಯಲ್ಲಿ ಯುವತಿಯೊಬ್ಬರು ದೀಪಗಳನ್ನು ಬೆಳಗಿದರು.
ದಾವಣಗೆರೆಯ ಕೆ.ಬಿ.ಬಡಾವಣೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿಪೂಜೆ ನೆರವೇರಿಸಲಾಯಿತು (ಚಿತ್ರ 1). ವಿನೋಬ ನಗರದಲ್ಲಿ ಮೇಕಪ್ ಕಲಾವಿದೆ ರೂಪಾ ಸುರೇಶ್ ಅವರು ವಿದ್ಯಾರ್ಥಿನಿ ಸಿಂಚನಾಳಿಗೆ ಲಕ್ಷ್ಮಿ ಅಲಂಕಾರ ಮಾಡಿದಾಗ ಕಂಡಿದ್ದು ಹೀಗೆ (ಚಿತ್ರ 2). ನಿಟುವಳ್ಳಿಯಲ್ಲಿ ಯುವತಿಯೊಬ್ಬರು ದೀಪಗಳನ್ನು ಬೆಳಗಿದರು.   

ಪ್ರಜಾವಾಣಿ ವಾರ್ತೆ

ದಾವಣಗೆರೆ: ರಾತ್ರಿಯಾಗುತ್ತಿದ್ದಂತೆ ಬಾನಲ್ಲಿ ಮೂಡಿದ ರಂಗುರಂಗಿನ ಚಿತ್ತಾರ. ಕಿವಿಗಡಚಿದ ಪಟಾಕಿಗಳ ಅಬ್ಬರ. ಅಂಗಡಿ ಮಳಿಗೆಗಳಲ್ಲಿ ಲಕ್ಷ್ಮಿ ಹಬ್ಬದ ಸಡಗರ.

–ಬಲಿಪಾಡ್ಯಮಿಯ ದಿನವಾದ ಶುಕ್ರವಾರ ನಗರದಲ್ಲಿ ಕಂಡುಬಂದ ದೃಶ್ಯಗಳಿವು. ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಕಳೆಗುಂದಿದ್ದ ದೀಪಾವಳಿ ಈ ಬಾರಿ ಕಳೆಗಟ್ಟಿತು. ಜಿಲ್ಲೆಯಾದ್ಯಂತ ಜನರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬಲಿಪಾಡ್ಯಮಿ ದಿವಸ ಹೆಚ್ಚಿನ ಮಂದಿ ಹಬ್ಬ ಆಚರಿಸಿದರು.

ADVERTISEMENT

ಬಲಿಪಾಡ್ಯಮಿಯಂದು ಸಂಜೆ
ಯಾಗುತ್ತಿದ್ದಂತೆ ಪಟಾಕಿಗಳ ಸದ್ದು ಜೋರಾಯಿತು. ಮನೆಯ ಮುಂದೆ ಹೂಕುಂಡ, ಸುರ್‌ಸುರ್ ಬತ್ತಿ, ಭೂಚಕ್ರ ಹಚ್ಚಿ ಮಕ್ಕಳು, ಮಹಿಳೆಯರು ಸಂಭ್ರಮಿಸಿದರು. ಅನೇಕ ಮನೆಗಳ ಮುಂಭಾಗ ಆಕಾಶ ಬುಟ್ಟಿಗಳು ರಾರಾಜಿಸಿದವು. ಅನೇಕ ಕಟ್ಟಡಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ರಾತ್ರಿ ಎಲ್ಲೆಲ್ಲೂ ದೀಪಗಳ ಸಾಲು ಕಂಡುಬಂದವು. ಹಬ್ಬದ ಕೊನೆಯ ದಿನ ಸಿಹಿಖಾದ್ಯ ತಯಾರಿಸಿ ಮನೆಮಂದಿಯೆಲ್ಲ ಸವಿದರು. ಸ್ವೀಟ್ಸ್‌ ಸ್ಟಾಲ್‌ಗಳಲ್ಲಿ ಜನಜಂಗುಳಿ ಹೆಚ್ಚಾಗಿ
ಕಂಡುಬಂತು.

ಗಮನ ಸೆಳೆದ ಲಕ್ಷ್ಮಿ ಅಲಂಕಾರ: ದೀಪಾವಳಿ ಹಬ್ಬದ ದಿವಸ ಲಕ್ಷ್ಮಿ ಪೂಜೆ ಮಾಡುವುದು ವಾಡಿಕೆ. ಅದರಂತೆ ವಿನೋಬ ನಗರದಲ್ಲಿ ಮೇಕಪ್ ಕಲಾವಿದೆಯೊಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಲಕ್ಷ್ಮಿ ಅಲಂಕಾರ ಮಾಡಿ ಗಮನ ಸೆಳೆದರು.

ರೂಪಾ ಸುರೇಶ್ ಅವರು ವಿದ್ಯಾರ್ಥಿನಿ ಸಿಂಚನಾಗೆ ಲಕ್ಷ್ಮಿಯ ಅಲಂಕಾರ ಮಾಡಿದ್ದು, ಹಲವರು ಈ ಅಲಂಕಾರವನ್ನು ನೋಡಿ ಖುಷಿಪಟ್ಟರು. ನವರಾತ್ರಿಯಲ್ಲಿ ಕಾಳಿ ಅವತಾರ, ದುರ್ಗಿ, ಸರಸ್ವತಿ ಅಲಂಕಾರ ಮಾಡಿದ್ದ ರೂಪಾ ಅವರು ಈ ಬಾರಿ ಲಕ್ಷ್ಮೀ ರೂಪ ನೀಡಿ ಎಲ್ಲರಲ್ಲೂ ಭಕ್ತಿ ಭಾವ ಮೂಡಿಸಿದರು.

ಲೋಕಿಕೆರೆಯಲ್ಲಿ ಎರಡು ಸಮುದಾಯಗಳು ಹಬ್ಬ ಆಚರಿಸೊಲ್ಲ

ಜಿಲ್ಲೆಯ ಎಲ್ಲಾ ಕಡೆ ದೀಪಾವಳಿ ಹಬ್ಬವನ್ನು ಸಂಭ್ರದಿಂದ ಆಚರಿಸಿದರೆ ದಾವಣಗೆರೆ ತಾಲ್ಲೂಕಿನ ಲೋಕಿಕೆರೆಯಲ್ಲಿ ಮಾತ್ರ ಕುರುಬ ಮತ್ತು ಪರಿಶಿಷ್ಟ ಜಾತಿಯ ಸಮುದಾಯವರು ಹಬ್ಬ ಆಚರಿಸುವುದಿಲ್ಲ.

‘ಕೆಲ ವರ್ಷಗಳ ದೀಪಾವಳಿ ಹಬ್ಬ ಆಚರಿಸಲು ಕಾಶಿ ಹುಲ್ಲು ತರಲು ತೆರಳಿದ ಇಬ್ಬರು ಹಿಂತಿರುಗಲೇ ಇಲ್ಲ. ಇದರಿಂದಾಗಿ ಏನಾದರೂ ಕೆಡುಕು ಆಗಬಹುದು ಎಂಬ ಮೂಢನಂಬಿಕೆಯಿಂದ ಹಬ್ಬ ಆಚರಿಸುವುದಿಲ್ಲ. ಕೆಲವರು ಮಹಾಲಯ ಅಮಾವಾಸ್ಯೆ ದಿವಸ ಹಿರಿಯರ ಹಬ್ಬ ಆಚರಿಸುತ್ತಾರೆ’ ಎಂದು ಗ್ರಾಮದ ಮಹಾಂತೇಶ್
ತಿಳಿಸಿದರು.

ಪಟಾಕಿ ವಹಿವಾಟು ಜೋರು

ಈ ಬಾರಿ ಪಟಾಕಿ ವ್ಯಾಪಾರ ಜೋರಾಗಿತ್ತು. ನಗರದ ಹೈಸ್ಕೂಲ್‌ ಮೈದಾನದಲ್ಲಿ 5 ದಿವಸ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಮೂರು ದಿವಸ ಹೆಚ್ಚಿನ ಮಂದಿ ನೂಕುನುಗ್ಗಲಿನಲ್ಲಿ ಪಟಾಕಿ ಖರೀದಿಸಿದರು.

‘63 ಮಳಿಗೆಗಳಲ್ಲಿ 5 ದಿನಕ್ಕೆ ಅಂದಾಜು ₹60 ಲಕ್ಷಕ್ಕೂ ಹೆಚ್ಚು ಪಟಾಕಿ ವಹಿವಾಟು ನಡೆದಿದೆ’ ಎನ್ನುತ್ತಾರೆ ಪಟಾಕಿ ಮಾರಾಟಗಾರರು ಹಾಗೂ ಬಳಕೆದಾರರ ಸಂಘದ ಅಧ್ಯಕ್ಷ ಸಿದ್ದಣ್ಣ.

ಸಂಘದ ನಿರ್ದೇಶಕ ಪಿ.ಸಿ. ಶ್ರೀನಿವಾಸ್ ಅವರು ‘₹ 2 ಕೋಟಿಯಷ್ಟು ವಹಿವಾಟು ನಡೆದಿದೆ’ ಎಂದು ಹೇಳುತ್ತಾರೆ.

12 ಮಕ್ಕಳಿಗೆ ಗಾಯ

ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವ ಸಂದರ್ಭ 12 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

‘ಬಾಪೂಜಿ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ 9 ಹಾಗೂ ಖಾಸಗಿ ಕ್ಲಿನಿಕ್‌ ಒಂದರಲ್ಲಿ ಮೂವರು ಮಕ್ಕಳು ಚಿಕಿತ್ಸೆ ಪಡೆದು ತೆರಳಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.