ADVERTISEMENT

ಪೌರಕಾರ್ಮಿಕರ ‘ಸೇವೆ ಕಾಯಂ’ಗೆ ಲಂಚ

ಕಾಂಗ್ರೆಸ್‌ ಶಾಸಕ ಬಸವಂತಪ್ಪ ದೂರು– ಕ್ರಮ ಕೈಗೊಳ್ಳುವಂತೆ ಸಿ.ಎಂ.ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:20 IST
Last Updated 14 ಏಪ್ರಿಲ್ 2025, 16:20 IST
ಕೆ.ಎಸ್. ಬಸವಂತಪ್ಪ
ಕೆ.ಎಸ್. ಬಸವಂತಪ್ಪ   

ದಾವಣಗೆರೆ: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲು ಸರ್ಕಾರ ಮುಂದಾಗುತ್ತಿದ್ದಂತೆಯೇ ಲಂಚಾವತಾರ ಕಾಣಿಸಿಕೊಂಡಿದೆ. ಪ್ರತಿ ಫಲಾನುಭವಿ ಕಾರ್ಮಿಕರಿಂದ ₹ 3 ಲಕ್ಷದಿಂದ ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ’ ಎಂದು ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಎಸ್‌. ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಮಹಾನಗರ ಪಾಲಿಕೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.

‘ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ ಮೇ 1ಕ್ಕೆ ಆದೇಶ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ ಖುಷಿಪಡಬೇಕೊ, ದುಃಖಪಡಬೇಕೊ ಗೊತ್ತಾಗುತ್ತಿಲ್ಲ. ಲಂಚ ನೀಡುವಂತೆ ಪೌರ ಕಾರ್ಮಿಕರನ್ನು ಪೀಡಿಸಲಾಗುತ್ತಿದೆ. ಇದು ಅಧಿಕಾರಿಗಳ ಕೃತ್ಯವೊ ಅಥವಾ ಬೇರೆ ಯಾವುದಾದರೂ ಒತ್ತಡ ಇದೆಯೋ ಎಂಬುದರ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ದಿನಗೂಲಿ ಆಧಾರದ ನೇಮಕಾತಿ ಸಂದರ್ಭದಲ್ಲಿಯೂ ಪೌರ ಕಾರ್ಮಿಕರಿಂದ ಲಕ್ಷಾಂತರ ರೂಪಾಯಿ ಲಂಚ ವಸೂಲಿ ಮಾಡಲಾಗಿದೆ. ಸೇವೆ ಕಾಯಂ ಮಾಡುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಪೌರ ಕಾರ್ಮಿಕರು ಶೇ 10ರ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದಾರೆ. ಮಹಿಳಾ ಪೌರಕಾರ್ಮಿಕರ ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣುತ್ತಿಲ್ಲ. ಒಮ್ಮೆ ಇವರನ್ನು ನೋಡಿ’ ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರತ್ತ ಹೊರಳಿ ಮಹಿಳಾ ಕಾರ್ಮಿಕರನ್ನು ತೋರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಬಗ್ಗೆ ಗಮನಹರಿಸಿ, ಲಂಚಕ್ಕೆ ಬೇಡಿಕೆ ಇರಿಸಿರುವ ಅಧಿಕಾರಿಗಳು ಮತ್ತು ಸಂಘಟನೆಗಳ ಮುಖಂಡರನ್ನು ನಿಯಂತ್ರಿಸುವ ಮೂಲಕ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಲು ಪೌರಕಾರ್ಮಿಕರ ಸಂಘದ ಸದಸ್ಯರು ಇಚ್ಛೆಪಡಲಿಲ್ಲ.

ಪೌರಕಾರ್ಮಿಕರಿಂದ ಲಂಚ ಪಡೆಯುವ ವ್ಯವಸ್ಥೆ ದಾವಣಗೆರೆಗೆ ಸೀಮಿತವಾಗಿಲ್ಲ. ಇದು ರಾಜ್ಯದ ಎಲ್ಲೆಡೆ ಇರುವುದನ್ನು ಗಮನಿಸಿದ್ದೇನೆ. ಪೌರಕಾರ್ಮಿಕರ ಅಳಲು ಕೇಳಿದರೆ ಕಣ್ಣೀರು ಬರುತ್ತದೆ
ಕೆ.ಎಸ್‌.ಬಸವಂತಪ್ಪ ಶಾಸಕ ಮಾಯಕೊಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.