ADVERTISEMENT

ಬಸವಾಪಟ್ಟಣ: ನಿಲೋಗಲ್‌ಗೆ ಅಭಿವೃದ್ಧಿಯ ಸವಾಲು

ಸ್ವಾತಂತ್ರ್ಯದ 75ನೇ ವರ್ಷದ ನೆನಪಿಗಾಗಿ ಅಮೃತ ಯೋಜನೆಗೆ ಆಯ್ಕೆ

ಎನ್.ವಿ.ರಮೇಶ್
Published 20 ಅಕ್ಟೋಬರ್ 2021, 3:59 IST
Last Updated 20 ಅಕ್ಟೋಬರ್ 2021, 3:59 IST
ಬಸವಾಪಟ್ಟಣ ಸಮೀಪದ ನಿಲೋಗಲ್‌ನಲ್ಲಿ ಹುದುಗಿ ಹೋಗಿರುವ ಪುರಾತನ ಪುಷ್ಕರಣಿ.
ಬಸವಾಪಟ್ಟಣ ಸಮೀಪದ ನಿಲೋಗಲ್‌ನಲ್ಲಿ ಹುದುಗಿ ಹೋಗಿರುವ ಪುರಾತನ ಪುಷ್ಕರಣಿ.   

ಬಸವಾಪಟ್ಟಣ: ಸ್ವಾತಂತ್ರೋತ್ಸವದ 75ನೇ ವರ್ಷದ ನೆನಪಿಗಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಅಮೃತ ಯೋಜನೆ ಅಡಿ ಹೋಬಳಿಯ ನಿಲೋಗಲ್‌ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಈ ಯೋಜನೆ ಅಡಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಸವಾಲು ಗ್ರಾಮ ಪಂಚಾಯಿತಿಯ ಮುಂದಿದೆ.

ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಿಲೋಗಲ್‌, ಕಂಚುಗಾರನಹಳ್ಳಿ, ಗುಡ್ಡದ ಬೆನಕನಹಳ್ಳಿ ಮತ್ತು ಸಿದ್ದೇಶ್ವರನಗರ ಗ್ರಾಮಗಳು ಇದ್ದು, ಪ್ರತಿ ಗ್ರಾಮದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಹಾಗೂ ಗ್ರಾಮಸ್ಥರು ಗುರುತಿಸಿದ್ದಾರೆ.

ಯೋಜನೆ ಅಡಿ ಮುಖ್ಯಮಂತ್ರಿ, ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಮತ್ತು ನರೇಗಾದ ಅನುದಾನದಲ್ಲಿ ₹ 10 ಕೋಟಿಯಿಂದ ₹ 15 ಕೋಟಿವರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಇದರಲ್ಲಿ ಉತ್ತಮ ಫಲಿತಾಂಶ ನೀಡಿದ ಗ್ರಾಮ ಪಂಚಾಯಿತಿಗೆ ಅಮೃತ ಯೋಜನಾ ಸಮಿತಿ ₹ 25 ಲಕ್ಷ ಪ್ರೋತ್ಸಾಹ ಧನ ನೀಡಲಿದೆ. ನಿಲೋಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳ ಜನರಿಗೆ ಒಟ್ಟು 800 ಮನೆಗಳ ಅವಶ್ಯಕತೆ ಇದ್ದು, ಸೋಲಾರ್‌ ಬೀದಿ ದೀಪ ಅಳವಡಿಸುವುದು ಅಗತ್ಯ ಎನ್ನುತ್ತಾರೆ ಪಿಡಿಒ ಆನಂದನಾಯ್ಕ.

ADVERTISEMENT

ನಿಲೋಗಲ್‌ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಕಟ್ಟಡ, ಗ್ರಾಮ ಪಂಚಾಯಿತಿ ಕಚೇರಿಗೆ ನೂತನ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಸಮುದಾಯ ಭವನ, ನಿಲೋಗಲ್‌ ಗ್ರಾಮದಿಂದ ಹೊನ್ನಾಳಿ ತಾಲ್ಲೂಕು ಭೈರನಹಳ್ಳಿ ಗ್ರಾಮಕ್ಕೆ 2.5 ಕಿ.ಮೀ. ಸಂಪರ್ಕ ರಸ್ತೆ, ದೂರವಾಣಿ ಸೌಲಭ್ಯಕ್ಕಾಗಿ ದೂರ ಸಂಪರ್ಕ ಟವರ್‌ ನಿರ್ಮಾಣ, ಇಲ್ಲಿನ ಪುರಾತನ ಪುಷ್ಕರಣಿಯನ್ನು ಜೀರ್ಣೋದ್ಧಾರಗೊಳಿಸಿ ಕುಡಿಯುವ ನೀರಿಗಾಗಿ ಬಳಕೆ ಮಾಡಿಕೊಳ್ಳುವುದು, ಪುರಾತನ ಮೆಟ್ಕಲಪ್ಪನ ದೇಗುಲದ ಪುನರ್‌ ರ್ನಿರ್ಮಾಣ, ಕೆರೆ ಅಭಿವೃದ್ಧಿ ಮತ್ತು ಹೈಟೆಕ್‌ ಗ್ರಂಥಾಲಯ ನಿರ್ಮಾಣವಾಗಬೇಕಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಲ್ಲಪ್ಪ, ಸದಸ್ಯೆ ಮಧು ಹಾಗೂ ನಿವೃತ್ತ ಶಿಕ್ಷಕ ಜಿ. ರಂಗನಗೌಡ.

ಕಂಚುಗಾರನಹಳ್ಳಿ ಗ್ರಾಮಕ್ಕೆ ಸೋಲಾರ್‌ ಬೀದಿ ದೀಪ, ಕುಡಿಯುವ ನೀರಿನ ಸಂಗ್ರಹಕ್ಕಾಗಿ 300 ಅಡಿ ಉದ್ದ 150 ಅಡಿ ಅಗಲ ಮತ್ತು 10 ಅಡಿ ಆಳದ ಸಂಪ್‌ ನಿರ್ಮಾಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ, ಹಾಲು ಉತ್ಪಾದಕರ ಸಂಘಕ್ಕೆ ನೂತನ ಕಟ್ಟಡ, ಶಾಲಾ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿಗಳ ಅಗತ್ಯವಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಮತ್ತು ಸದಸ್ಯರಾದ ಪಕೀರಪ್ಪ, ಸಿದ್ದೇಶ್‌ ಪಟೇಲ್‌.

***

ಸಿದ್ಧೇಶ್ವರ ನಗರದ ಸಿದ್ಧೇಶ್ವರಸ್ವಾಮಿ ದೇಗುಲದ ರಸ್ತೆಯ ಎರಡೂ ಬದಿಯಲ್ಲಿ ರಾಜ ಕಾಲುವೆ ನಿರ್ಮಾಣ, ನೀರಿನ ಹೊಂಡದ ಅಭಿವೃದ್ಧಿ, ಸೋಲಾರ್‌ ಬೀದಿ ದೀಪ, ಸಿಸಿ ಚರಂಡಿಗಳ ನಿರ್ಮಾಣ ಅವಶ್ಯಕವಾಗಿದೆ.

- ಪಾರ್ತಿಬಾಯಿ, ಗ್ರಾಮ ಪಂಚಾಯಿತಿ ಸದಸ್ಯೆ

***

ಗುಡ್ಡದ ಬೆನಕನಹಳ್ಳಿ ಗ್ರಾಮದಲ್ಲಿ ಸೋಲಾರ್‌ ಪ್ಲಾಂಟ್‌, ನೀರಿನ ಟ್ಯಾಂಕ್‌ ನಿರ್ಮಾಣ, ನೀರಿನ ಹೊಂಡದ ಅಭಿವೃದ್ಧಿ, 45 ಜನರಿಗೆ ನಿವೇಶನದ ಹಂಚಿಕೆ ಆಗಬೇಕು.

- ಜ್ಯೋತಿ, ಶೇಖರನಾಯ್ಕ, ವನಜಾಕ್ಷಿ ಬಾಯಿ, ಗ್ರಾಮ ಪಂಚಾಯಿತಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.