ADVERTISEMENT

ಬಸವಾಪಟ್ಟಣ, ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕೊಯ್ಲು ಆರಂಭ

​ಪ್ರಜಾವಾಣಿ ವಾರ್ತೆ
Published 2 ಮೇ 2025, 5:37 IST
Last Updated 2 ಮೇ 2025, 5:37 IST
ಬಸವಾಪಟ್ಟಣ ಸಮೀಪದ ಚಿರಡೋಣಿ ರೈತರು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕೊಯ್ಲು ಆರಂಭಿಸಿರುವುದು
ಬಸವಾಪಟ್ಟಣ ಸಮೀಪದ ಚಿರಡೋಣಿ ರೈತರು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕೊಯ್ಲು ಆರಂಭಿಸಿರುವುದು   

ಬಸವಾಪಟ್ಟಣ: ಇಲ್ಲಿನ ಸೂಳೆಕರೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದಿರುವ ಭತ್ತದ ಕೊಯ್ಲು ಆರಂಭವಾಗಿದೆ.

ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ನಾಟಿ ಮಾಡಿದ್ದ ಅಂದಾಜು 3,300 ಹೆಕ್ಟೇರ್‌ ಭತ್ತದ ಪೈಕಿ 600 ಹೆಕ್ಟೇರ್‌ ಸೂಳೆಕೆರೆ ಅಚುಕಟ್ಟು ಪ್ರದೇಶದಲ್ಲಿದ್ದು, ಈಗ ಕಟಾವಿಗೆ ಬಂದಿದೆ. ರೈತರು ಯಂತ್ರಗಳ ಮೂಲಕ ಭತ್ತದ ಕೊಯ್ಲು ಆರಂಭಿಸಿದ್ದಾರೆ. ಇದಕ್ಕಾಗಿ ದೂರದ ಗಂಗಾವತಿ ಮತ್ತು ಆಂಧ್ರ ಪ್ರದೇಶದಿಂದ ಭತ್ತ ಕೊಯ್ಲು ಮಾಡುವ ಯಂತ್ರಗಳು ಈ ಭಾಗಕ್ಕೆ ಆಗಮಿಸಿವೆ.

‘ಗಂಟೆಗಳ ಲೆಕ್ಕದಲ್ಲಿ ಯಂತ್ರಗಳ ಮಾಲೀಕರು ಭತ್ತದ ಕಟಾವು ಮಾಡಿಕೊಡುತ್ತಿದ್ದಾರೆ. ಈ ಬಾರಿಯ ಬೇಸಿಗೆ ಬೆಳೆಯಲ್ಲಿ ಭತ್ತಕ್ಕೆ ರೋಗ ಬಾಧೆ ಅಷ್ಟಾಗಿ ತೊಂದರೆ ಕೊಡದೇ ಇರುವುದರಿಂದ ಎಕರೆಗೆ 30 ರಿಂದ 32 ಕ್ವಿಂಟಲ್‌ ಇಳುವರಿ ಸಿಗುವ ನಿರೀಕ್ಷೆಯಿದೆ’ ಎಂದು ಚಿರಡೋಣಿಯ ರೈತ ನಾಗಪ್ಪ ಹೇಳಿದರು.

ADVERTISEMENT

‘ನಮ್ಮ ಭಾಗದಲ್ಲಿ ಆರ್‌.ಎನ್‌.ಆರ್‌ ತಳಿಯ ಭತ್ತವನ್ನು ರೈತರು ಹೆಚ್ಚಾಗಿ ಬೆಳೆದಿದ್ದು, ಅಲ್ಪ ಪ್ರಮಾಣದಲ್ಲಿ ಶ್ರೀರಾಮ ಸೋನಾ ಬೆಳೆಯಲಾಗಿದೆ. ದಿನೇದಿನೇ ಭತ್ತದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಆದರೆ ಭತ್ತದ ಖರೀದಿ ದರ ಮಾತ್ರ ಕ್ವಿಂಟಲ್‌ಗೆ 2,000ದಿಂದ ₹2,100 ದವರೆಗೆ ನಡೆಯುತ್ತಿದೆ. ಕ್ವಿಂಟಲ್‌ಗೆ ಕನಿಷ್ಠ ₹3,000 ದೊರೆತರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು ಚಿರಡೋಣಿಯ ಸಿ.ಎಂ.ರುದ್ರಯ್ಯ ಅಭಿಪ್ರಾಯಪಟ್ಟರು.

ಭತ್ತಕ್ಕೆ ದರ ಕಡಿಮೆಯಾಗಿ ಅಡಿಕೆಯ ಬೆಲೆ ಗಗನಕ್ಕೇರುತ್ತಿರುವುದರಿಂದ ಈ ಭಾಗದ ಗದ್ದೆಗಳು ಅಡಿಕೆ ತೋಟಗಳಾಗುತ್ತಿವೆ. ಪ್ರಮುಖ ಆಹಾರಧಾನ್ಯವಾದ ಭತ್ತದ ಫಸಲಿನ ಉತ್ಪಾದನೆ ಕಡಿಮೆಯಾದರೆ ಮುಂದೆ ಅಕ್ಕಿಗಾಗಿ ಇತರ ರಾಜ್ಯಗಳ ಮೊರೆ ಹೋಗಬೇಕಾಗುವುದರಿಂದ ಸರ್ಕಾರ ಉತ್ತಮ ಬೆಂಬಲ ಬೆಲೆಯನ್ನು ನೀಡಿ ರೈತರಿಂದ ಭತ್ತ ಖರೀದಿಸಬೇಕು ಎಂದು ಅವರು ಹೇಳಿದರು.

ಬಸವಾಪಟ್ಟಣ ಸಮೀಪದ ಚಿರಡೋಣಿ ರೈತರು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೊಯಿಲು ಮಾಡಿದ ಭತ್ತವನ್ನು ಗುರುವಾರ ಗದ್ದೆಯ ಪಕ್ಕದಲ್ಲಿ ಒಣಗಲು ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.