ADVERTISEMENT

ದುಡಿಮೆಯಿಂದಲೇ ಮೂಲ ಸೌಕರ್ಯ ಆರಂಭ

ಕಾರ್ಮಿಕ ಕಾನೂನು, ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಅರಿವು ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶೆ ಚಂದ್ರಕಲಾ

​ಪ್ರಜಾವಾಣಿ ವಾರ್ತೆ
Published 15 ಮೇ 2019, 16:57 IST
Last Updated 15 ಮೇ 2019, 16:57 IST
ದಾವಣಗೆರೆಯಲ್ಲಿ ಕಾರ್ಮಿಕರಿಗೆ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಇ. ಚಂದ್ರಕಲಾ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಕಾರ್ಮಿಕರಿಗೆ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಇ. ಚಂದ್ರಕಲಾ ಉದ್ಘಾಟಿಸಿದರು   

ದಾವಣಗೆರೆ: ಕಾರ್ಮಿಕರು ಹಗಲಿರುಳು ದುಡಿದ ಕಾರಣ ಸಮಾಜದ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಗಿದೆ. ಹಾಗಾಗಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಒದಗಿಸಬೇಕು ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಇ. ಚಂದ್ರಕಲಾ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಮಯೂರ ಆಪರೆಲ್ಸ್‌ನಿಂದ ಕರೂರು ಕೈಗಾರಿಕಾ ವಲಯದಲ್ಲಿರುವ ಮಯೂರ ಆಪರೆಲ್ಸ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಮಿಕ ಕಾನೂನುಗಳು ಹಾಗೂ ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಆರ್ಥಿಕ ಸಬಲತೆಗೆ, ಕುಟುಂಬ ನಿರ್ವಹಣೆಗೆ ದುಡಿಯುತ್ತಿದ್ದು, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸುರಕ್ಷತೆ, ಭದ್ರತೆ, ವೇತನ ಮತ್ತು ಪರಿಹಾರಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು.

ADVERTISEMENT

ಕೈಗಾರಿಕೆ, ಆಸ್ಪತ್ರೆ, ಶಾಲಾ-ಕಾಲೇಜು, ಕಾರ್ಖಾನೆ, ಗಣಿ ಮತ್ತು ಚಹಾ ತೋಟಗಳಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಅವರಲ್ಲಿ ಸಂಘಟಿತ ವಲಯದ ವ್ಯಾಪ್ತಿಗೆ ಬಂದವರು ತಮ್ಮ ಸಂಘಟಿತ ಶ್ರಮಶಕ್ತಿಯ ಫಲವಾಗಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅಸಂಘಟಿತರಿಗೆ ಇನ್ನೂ ಸೌಲಭ್ಯಗಳು ತಲುಪಿಲ್ಲ ಎಂದು ವಿಷಾದಿಸಿದರು.

ಕಾರ್ಮಿಕರು ತಮ್ಮ ಕೆಲಸಗಳಿಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಇರುವ ವಾಹನಗಳಲ್ಲಿ ಪ್ರಯಾಣಿಸಬೇಕು. ಸರಕು ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು, ಸರಕು ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆಗುವ ಅವಘಡ ಅಪಘಾತಗಳಿಗೆ ಕಾನೂನಿನಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್, ‘ಕಾರ್ಮಿಕರ ಒಳಿತಿಗಾಗಿ ಸುಮಾರು 45 ಕಾನೂನುಗಳಿವೆ. ಕಾರ್ಮಿಕರಿಗೆ ತಲುಪಬೇಕಾದ ಸೌಲಭ್ಯ, ಪರಿಹಾರ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಸೌಲಭ್ಯ ಪಡೆದುಕೊಳ್ಳಲು ಕಾರ್ಮಿಕರಲ್ಲಿ ಸಂಘಟನೆ ಮುಖ್ಯ’ ಎಂದರು.

ಕಾಯಂ ಕಾರ್ಮಿಕರಿಗಿಂತ ಅರೆಕಾಲಿಕ ಕಾರ್ಮಿಕರು, ಅಪ್ರೆಂಟಿಸ್ ತರಬೇತಿದಾರರು, ಗುತ್ತಿಗೆ ಆಧಾರದ ಕಾರ್ಮಿಕರು ಹೆಚ್ಚಾಗುತ್ತಿದ್ದಾರೆ. ಇದರಿಂದ ಕಾರ್ಮಿಕರ ಸುಧಾರಣೆ ಹೆಸರಲ್ಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ. ಕಾನೂನುಗಳ ಅರಿವು ಪಡೆದುಕೊಂಡು, ಮೊದಲು ಸಂಘಟಿತರಾಗಿ ತಮಗೆ ದೊರಕಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹಮ್ಮದ್ ಜಹೀರ್ ಬಾಷಾ ಮಾತನಾಡಿ, ‘ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳವು ದೂರವಿದ್ದಲ್ಲಿ, ಸಂಚರಿಸಲು ಸಮಸ್ಯೆ ಇದ್ದಲ್ಲಿ ಸಾರಿಗೆ ಅಧಿಕಾರಿಗೆ ತಿಳಿಸಬೇಕು. ಆಗ ನಾವು ಕೆಎಸ್‌ಆರ್‌ಟಿಸಿ ಅಧಿಕಾರಗಳೊಂದಿಗೆ ಚರ್ಚಿಸಿ ಕಾರ್ಮಿಕರ ಸುರಕ್ಷಿತ ಸಂಚಾರಕ್ಕೆ ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಅನುಗ್ರಹ ಗಾರ್ಮೆಂಟ್ಸ್‌ನ ಮಾಲೀಕ ರಘು ಮೊಸಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ಮಹಮ್ಮದ್ ಖಾಲೀದ್, ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್, ಕಾರ್ಮಿಕರ ನಿರೀಕ್ಷಕರಾದ ಮುಮ್ತಾಜ್ ಬೇಗಂ, ವೇಮಣ್ಣ, ಯೋಜನಾ ನಿರ್ದೇಶಕ ಪ್ರಸನ್ನ ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.