ADVERTISEMENT

ಸರ್ಧಾತ್ಮಕ ಪರೀಕ್ಷೆ ಎದುರಿಸಲು ಪೂರ್ವ ತಯಾರಿ ಸರಿ ಇರಲಿ

ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ನಗರ ಸಂಚಾರ ಠಾಣೆ ಪಿಎಸ್‌ಐ ಲಕ್ಷ್ಮೀಪತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 12:09 IST
Last Updated 17 ಅಕ್ಟೋಬರ್ 2018, 12:09 IST
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಪ್ರಾಂಶುಪಾಲ ಪ್ರೊ. ಶಂಕರ್‌ ಆರ್‌. ಶೀಲಿ ಉದ್ಘಾಟಿಸಿದರು
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಪ್ರಾಂಶುಪಾಲ ಪ್ರೊ. ಶಂಕರ್‌ ಆರ್‌. ಶೀಲಿ ಉದ್ಘಾಟಿಸಿದರು   

ದಾವಣಗೆರೆ: ವಿದ್ಯಾರ್ಥಿಗಳು ಮುಂದೇನಾಗಬೇಕು ಎಂಬುವುದನ್ನು ಮೊದಲು ನಿರ್ಧರಿಸಬೇಕು. ಬಳಿಕ ಅದಕ್ಕೆ ಪೂರಕವಾಗಿ ಪೂರ್ವ ತಯಾರಿ ನಡೆಸಬೇಕು. ಆಗ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಸುಲಭ ಎಂದು ನಗರ ಸಂಚಾರ ಠಾಣೆ ಪಿಎಸ್‌ಐ ಆರ್‌.ಎಲ್‌. ಲಕ್ಷ್ಮೀಪತಿ ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶದ ಸಂಯೋಜನೆಯಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯುಪಿಎಸ್‌ಸಿ, ಎಸ್‌ಎಸ್‌ಸಿ, ಕೆಪಿಎಸ್‌ಸಿ ಮೂಲಕ ಪರೀಕ್ಷೆಗಳು ನಡೆಯುತ್ತವೆ. ಆಯಾ ಪರೀಕ್ಷೆಗೆ ಅನುಗುಣವಾಗಿ ಪುಸ್ತಕಗಳು ದೊರೆಯುತ್ತವೆ. ನಾಲ್ಕು ತಿಂಗಳು ಗಮನವಿಟ್ಟು ಓದಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ತಿಳಿಸಿದರು.

ADVERTISEMENT

ಓದು ಒಂದು ತಪಸ್ಸು ಎಂದು ಹೇಳುತ್ತಾರೆ. ಅಷ್ಟೊಂದು ಏಕಾಗ್ರತೆ ವಹಿಸುವುದು ಅಸಾಧ್ಯ. ಯಾವುದೇ ವಿಚಾರವನ್ನು ಓದುವಾಗ ಏನಿದು ಎಂಬ ಕುತೂಹಲ ಬೆಳೆಸಿಕೊಳ್ಳಿ. ಆಗ ಅವು ನೆನಪಲ್ಲಿ ಉಳಿಯುತ್ತದೆ. ಪರೀಕ್ಷೆಯ ಭಯ ಎಂಬುದು ಎಲ್ಲರಿಗೂ ಇರುತ್ತದೆ. ಅದು ದೊಡ್ಡ ಸಮಸ್ಯೆಯಲ್ಲ. ನೀವು ಸರಿಯಾಗಿ ಓದಿದ್ದು ಹೌದಾದರೆ, ಪರೀಕ್ಷಾ ಕೊಠಡಿಗೆ ಹೋಗಿ ಬರೆಯಲು ಕುಳಿತಾಗ ಎಲ್ಲವೂ ನೆನಪಾಗಿಯೇ ಆಗುತ್ತದೆ. ಹಾಗಾಗಿ ಯಾರೂ ಎದೆಗುಂದುವ ಅವಶ್ಯಕತೆ ಇಲ್ಲ ಎಂದು ಹುರಿದುಂಬಿಸಿದರು.

ಮನೆಯಲ್ಲಿ ಸಾವಿರ ಕಷ್ಟಗಳು ಇರುತ್ತವೆ. ಓದನ್ನು ಬಿಟ್ಟು ಸಮಸ್ಯೆ ಪರಿಹರಿಸಲು ಹೋಗಬೇಡಿ. ಬಡತನ, ನೋವು, ಸಂಕಷ್ಟಗಳು ಹಾಗೆ ಪರಿಹಾರ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲಾ ಕಷ್ಟಗಳನ್ನು ಬದಿಗಿರಿಸಿ ಓದಿನ ಕಡೆ ಗಮನ ಹರಿಸಿ. ಶ್ರಮ ವಹಿಸಿ ನೀವು ಉದ್ಯೋಗ ಪಡೆದರೆ ಆಗ ನಿಮ್ಮ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ತಿಳಿಸಿದರು.

500 ಅಥವಾ 800 ಹುದ್ದೆಗಳಿಗಾಗಿ ನಡೆಯುವ ಪರೀಕ್ಷೆಗೆ 5 ಲಕ್ಷ ಜನ ಅರ್ಜಿ ಸಲ್ಲಿಸಿರುತ್ತಾರೆ. ಇದನ್ನು ಕಂಡು ನೀವು ಕಂಗಾಲಾಗಬೇಕಿಲ್ಲ. ಯಾಕೆಂದರೆ ಅದರಲ್ಲಿ 4.5 ಲಕ್ಷ ಜನ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. 50 ಸಾವಿರ ಮಂದಿ ಮಾತ್ರ ಗಂಭೀರವಾಗಿ ಪರಿಗಣಿಸಿರುತ್ತಾರೆ. ಅದರಲ್ಲಿಯೂ ಉದ್ಯೋಗ ಬೇಕೇಬೇಕು ಎಂದು 25 ಸಾವಿರ ಮಂದಿಯಷ್ಟೇ ಪ್ರಯತ್ನಪಡುತ್ತಿರುತ್ತಾರೆ. ಅದರಲ್ಲಿ ನೀವೊಬ್ಬರು ಆದರೆ ಸಾಕು ಎಂದರು.

ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ಹಲಗೇರಿ ಆಶಯ ನುಡಿಗಳನ್ನಾಡಿ, ‘ಸ್ಪರ್ಧೆ ಮತ್ತು ಸಂಘರ್ಷ ಜಾಗತೀಕರಣದ ಎರಡು ಪ್ರಮುಖ ಅಂಶಗಳು. ಜಾಗತೀಕರಣದಿಂದ ಉದ್ಯೋಗಗಳ ಸೃಷ್ಟಿಯಾಗಿವೆ. ಆದರೆ ಅದಕ್ಕೆ ಬೇಕಾದ ನುರಿತ ಮತ್ತು ಕುಶಲತೆ ಹೊಂದಿರುವವರ ಕೊರತೆ ಇದೆ. ಆ ಯೋಗ್ಯತೆ ಇದ್ದರೆ ಉದ್ಯೋಗ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಪ್ರೊ. ಶಂಕರ್‌ ಆರ್‌. ಶೀಲಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಮಂಜುನಾಥ ಎನ್‌. ಮರಿಗೌಡ, ಪಿಡಿಒ ಎಸ್‌. ನಾಗರಾಜ, ಪತ್ರಾಂಕಿತ ವ್ಯವಸ್ಥಾಪಕ ಎಸ್‌. ಆರ್‌. ಭಜಂತ್ರಿ, ಎನ್‌.ಆರ್‌. ರಾಜಮೋಹನ್‌, ಎಸ್‌. ವೆಂಕಟೇಶಬಾಬು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.