ADVERTISEMENT

ಏನಾದರೂ ಆಗಿ ಮೊದಲು ಸ್ವಾಭಿಮಾನಿಗಳಾಗಿ

ಎ.ಆರ್.ಜಿ ಕಾಲೇಜಿನ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬುದ್ಧ ಚಿಂತಕ ಪ್ರೊ. ಕೆ.ಬಿ. ಸಿದ್ದಯ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 13:53 IST
Last Updated 21 ಆಗಸ್ಟ್ 2019, 13:53 IST
ದಾವಣಗೆರೆ ಎ.ಆರ್.ಜಿ ಕಾಲೇಜಿನ 2019–20 ನೇ ಸಾಲಿನ ವಿವಿಧ ಕಾರ್ಯಕ್ರಮಗಳನ್ನು ಪ್ರೊ.ಕೆ.ಬಿ. ಸಿದ್ದಯ್ಯ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ದಾವಣಗೆರೆ ಎ.ಆರ್.ಜಿ ಕಾಲೇಜಿನ 2019–20 ನೇ ಸಾಲಿನ ವಿವಿಧ ಕಾರ್ಯಕ್ರಮಗಳನ್ನು ಪ್ರೊ.ಕೆ.ಬಿ. ಸಿದ್ದಯ್ಯ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ದಾವಣಗೆರೆ: ಓದಿ ಉತ್ತಮ ಉದ್ಯೋಗ ಪಡೆಯಿರಿ ಅಥವಾ ಪಡೆಯದೇ ಇರಿ. ಎಲ್ಲೇ ಇರಿ. ಸ್ವಾಭಿಮಾನಿಗಳಾಗಿ ಇರಿ ಎಂದು ಬುದ್ಧ ಚಿಂತಕ ಪ್ರೊ. ಕೆ.ಬಿ. ಸಿದ್ದಯ್ಯ ಹೇಳಿದರು.

ಎ.ಆರ್‌.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರದ ಪಠ್ಯ, ಪಠ್ಯಪೂರಕ, ಎನ್‌ಎಸ್‌ಎಸ್‌, ಯುವರೆಡ್‌ಕ್ರಾಸ್‌, ಎನ್‌ಸಿಸಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಯಾರಿಂದಲೂ ಮೇಲಲ್ಲ, ಯಾರಿಂದಲೂ ಕೀಳಲ್ಲ. ನಾನು ಎಲ್ಲರಿಗೂ ಸಮಾನ, ಎಲ್ಲರೂ ನನಗೆ ಸಮಾನ ಎಂಬ ಭಾವ ಬರಬೇಕು. ಪುರುಷರಿಗಿಂತ ಸ್ತ್ರೀಯರು ಕೆಳಗೆ ಎಂಬ ಭಾವ ಪುರುಷರಲ್ಲಿದೆ. ಪುರಷರ ತುಳಿತಕ್ಕೆ ಒಳಗಾಗಿಯೋ, ಮೌಢ್ಯದಿಂದಲೋ, ಅಜ್ಞಾನದಿಂದಲೋ ಸ್ತ್ರೀಯರೂ ಹಾಗೇ ತಿಳಿದುಕೊಂಡಿದ್ದಾರೆ’ ಎಂದು ವಿಷಾದಿಸಿದರು.

ADVERTISEMENT

ಎಲ್ಲ ಧರ್ಮ, ಜಾತಿ, ಭಾಷೆ, ಎಲ್ಲವೂ ಸಮಾನ ಎಂದು ತಿಳಿದು ಬದುಕುವುದೇ ಸ್ವಾಭಿಮಾನ. ಅಂಥವರ ಮೇಲೆ ಯಾರೂ ಅಧಿಕಾರ ಚಲಾಯಿಸಲು ಸಾಧ್ಯವಾಗುವುದಿಲ್ಲ. ಯಾವ ಕಲಹವೂ ಇರುವುದಿಲ್ಲ. ಇದರ ಜತೆಗೆ ಜಾತ್ಯತೀತ ತತ್ವಗಳನ್ನೂ ಅಳವಡಿಸಿಕೊಳ್ಳಬೇಕು. ಜಾತಿವಾದಿಗಳಾಗಬಾರದು, ಜಾತಿಯ ಹಿಡಿತಕ್ಕೆ ಸಿಗಬಾರದು. ಜಾತಿ ಕಾಡಬಾರದು. ಸ್ವಾಭಿಮಾನ ಮತ್ತು ಜಾತ್ಯತೀತ ಬದುಕು ಕಟ್ಟಿಕೊಂಡರೆ ಸಮಾನತೆ ಅರ್ಥವಾಗುತ್ತದೆ ಎಂದು ವಿಶ್ಲೇಷಿಸಿದರು.

ಸ್ಪರ್ಧಾತ್ಮಕ ಜಗತ್ತಿನ ವೇಗದ ಬದಲಾವಣೆಯ ಲಾಭವನ್ನು ಶೇ 3 ಮಂದಿ ಮಾತ್ರ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದ ರೈತರ, ದಲಿತರ ಮಕ್ಕಳು, ಸ್ತ್ರೀಯರು ವಂಚಿತರಾಗುತ್ತಿದ್ದಾರೆ ಎಂದರು.

ಇಂಗ್ಲಿಷ್‌ ಕಲಿಯಿರಿ. ಆದರೆ ಅದು ಜ್ಞಾನದ ಭಾಷೆಯಲ್ಲ ಎಂಬುದೂ ಗೊತ್ತಿರಲಿ. ನಮ್ಮ ಮಾತೃಭಾಷೆಯೇ ಜ್ಞಾನ ಭಾಷೆ ಎಂಬುದನ್ನು ಹೆಮ್ಮೆಯಿಂದ ಹೇಳಿ ಎಂದು ಸಲಹೆ ನೀಡಿದರು.

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ಆರ್‌. ಹಲಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಗತ್ತಿನ ಮೊದಲ ಶಿಕ್ಷಕ ಗೌತಮ ಬುದ್ಧ. ಮನೋವಿಕಾಸಕ್ಕಾಗಿ ಪ್ರಜ್ಞೆ, ಕರುಣೆ ಮತ್ತು ಸಮತೆಯನ್ನು ಆತ ಬೋಧಿಸಿದ’ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌, ‘ತಂಡವಾಗಿ ಕೆಲಸ ಮಾಡುವಾಗ ವಿಫಲರಾದರೆ ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳುವ, ಯಶಸ್ವಿಯಾದಾಗ ಅದರ ಹಿರಿಮೆಯನ್ನು ತಂಡಕ್ಕೆ ಹಂಚುವವನೇ ನಿಜವಾದ ನಾಯಕ’ ಎಂದರು.

ನಿವೃತ್ತ ಪ್ರಾಂಶು‍ಪಾಲ ಪ್ರೊ. ಡಿ.ಲಿಂಗಪ್ಪ, ‘ಕಲಿತು ಯಾವುದೇ ಹುದ್ದೆಗೆ ಹೋದರೂ ಮನುಷ್ಯತ್ವ ಮರೆಯಬಾರದು. ವೃತ್ತಿಯ ಬದ್ಧತೆಯನ್ನೂ ಇಟ್ಟುಕೊಳ್ಳಬೇಕು. ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗಬೇಕು’ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ. ಕೆ.ಎಸ್‌. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಜೆ.ಕೆ. ಮಲ್ಲಿಕಾರ್ಜುನಪ್ಪ, ಪ್ರೊ. ಜೆ. ಅನಿತಾ ಕುಮಾರಿ, ಕೆ. ಬೊಮ್ಮಣ್ಣ ಉಪಸ್ಥಿತರಿದ್ದರು. ದೀಪಾ ಪ್ರಾರ್ಥಿಸಿದರು. ಸೌಮ್ಯಾ ಸ್ವಾಗತಿಸಿದರು. ನಂದೀಶ ವಂದಿಸಿದರು. ಆಯಿಶಾ ಬಾನು ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಸಿದ್ಧಯ್ಯ ಪಾಠ

* ಪ್ರಶ್ನೆ ಮಾಡುವುದನ್ನು ಕಲಿತರೆ ಜ್ಞಾನ ವೃದ್ಧಿಯಾಗುತ್ತದೆ.

* ಹಿತವಚನ ಹೇಳಿದರೆ ಕೇಳುವುದಿಲ್ಲ. ಹಿತ ಯಾವುದು ಎಂಬುದನ್ನು ಅನುಭವ ಮತ್ತು ಜ್ಞಾನದಿಂದ ನೀವೇ ಕಂಡುಕೊಳ್ಳಬೇಕು.

* ನುಡಿ ಸುಲಭ, ನಡೆ ಕಷ್ಟ. ನಡೆಯಲಾಗದ್ದನ್ನು ನುಡಿಯಬೇಡಿ.

* ವರದಕ್ಷಿಣೆ ಕೊಡುವುದಿಲ್ಲ ಎಂದು ಹೆಣ್ಣು ಮಕ್ಕಳೂ, ತೆಗೆದುಕೊಳ್ಳುವುದಿಲ್ಲ ಎಂದು ಗಂಡು ಮಕ್ಕಳೂ ನಿರ್ಧರಿಸಬೇಕು. ಮನೆಯವರು ನಿಮ್ಮ ನಿರ್ಧಾರವನ್ನು ಒಪ್ಪುವುದಿಲ್ಲ. ಆಗಲೂ ವಿಚಲಿತರಾಗದೇ ಹೆತ್ತವರನ್ನೇ ತಿದ್ದಬೇಕು.

* ಸಾಧ್ಯವಾದರೆ ಜಾತಿ ಮೀರಿ ಮದುವೆಯಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.