ದಾವಣಗೆರೆ: ‘ಭತ್ತದ ನಾಟಿಗೆ 30 ಗುಂಟೆ ಭೂಮಿಯನ್ನು ಉಳುಮೆ ಮಾಡಿದ್ದೆ. ಮಾರ್ಚ್ 2ನೇ ವಾರ ಕಳೆದರೂ ಜಮೀನಿನವರೆಗೆ ನೀರು ಬರಲಿಲ್ಲ. ಭದ್ರಾ ನೀರಿಗೆ ಕಾದು ಸುಸ್ತಾಗಿ ನಾಟಿಯ ಆಲೋಚನೆ ಕೈಬಿಟ್ಟೆ. ಹೊಟ್ಟೆಪಾಡಿಗೆ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದೇನೆ..’
ಹರಿಹರ ತಾಲ್ಲೂಕಿನ ಕಮಲಾಪುರದ ರೈತ ಪ್ರಶಾಂತ್ ಅವರ ಸಂಕಟವಿದು. ಬೇಸಿಗೆ ಹಂಗಾಮಿಗೆ ಭತ್ತ ಬೆಳೆಯುವ ಅವರ ಕನಸು ನನಸಾಗಿಲ್ಲ. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಇಂತಹ ಸಾವಿರಾರು ರೈತರು ನೀರಿನ ಕನವರಿಕೆಯಲ್ಲಿ ಭತ್ತ ನಾಟಿಯ ಆಸೆಯನ್ನೇ ಕೈಬಿಟ್ಟಿದ್ದಾರೆ.
ಬೇಸಿಗೆ ಹಂಗಾಮಿನ ಬೆಳೆಗೆ ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ಜ.8ರಿಂದ ನೀರು ಹರಿಸಲಾಗುತ್ತಿದೆ. ನಾಲೆಯಲ್ಲಿ ನೀರು ಹರಿಯಲಾರಂಭಿಸಿ 75 ದಿನಗಳು ಕಳೆದಿವೆ. ಆದರೂ, ಹರಿಹರ ಮತ್ತು ದಾವಣಗೆರೆ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಭದ್ರಾ ನೀರು ತಲುಪಿ ನಾಟಿ ಮಾಡಿದ ಭತ್ತ ಒಂದೆಡೆ ನಳನಳಿಸುತ್ತಿದ್ದರೆ ಮತ್ತೊಂದೆಡೆ ಒಣಗಿದ ಖಾಲಿ ಜಮೀನು ರೈತರ ಸಂಕಟವನ್ನು ಹೇಳುತ್ತಿದೆ.
ಪ್ರಸಕ್ತ ಬೇಸಿಗೆ ಹಂಗಾಮಿಗೆ ಜಿಲ್ಲೆಯಲ್ಲಿ 56,517 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯ ಗುರಿ ಹೊಂದಲಾಗಿತ್ತು. ಇದರಲ್ಲಿ ಈವರೆಗೆ 52,000 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಪೂರ್ಣಗೊಂಡಿದೆ. ನೀರಿನ ಸಮಸ್ಯೆಯಿಂದ 4,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಭತ್ತ ನಾಟಿ ಸಾಧ್ಯವಾಗಿಲ್ಲ. ಹರಿಹರ ತಾಲ್ಲೂಕಿನ ಭಾನುವಳ್ಳಿ, ಕಮಲಾಪುರ, ಕೊಕ್ಕನೂರು, ಹೊಳೆಸಿರಿಗೆರೆ, ಹೊಸಳ್ಳಿ, ಕಡರನಾಯ್ಕನಹಳ್ಳಿ, ಗಂಗನರಸಿ, ಗುತ್ತೂರು, ಅಮರಾವತಿ ಹಾಗೂ ದಾವಣಗೆರೆ ತಾಲ್ಲೂಕಿನ ಕೋಡಿಹಳ್ಳಿ ಸೇರಿ ಹಲವೆಡೆ ಭತ್ತ ನಾಟಿ ಅರ್ಧದಷ್ಟು ಪೂರ್ಣಗೊಂಡಿಲ್ಲ.
ಪ್ರಸಕ್ತ ವರ್ಷ ಉತ್ತಮ ಮಳೆಯಿಂದ ಭದ್ರಾ ಜಲಾಶಯ ಭರ್ತಿಯಾಗಿತ್ತು. ಬೇಸಿಗೆ ಹಂಗಾಮಿಗೆ ನೀರು ಸಿಗುವ ಭರವಸೆ ಮೂಡಿಸಿತ್ತು. ಮಳೆಗಾಲದ ಭತ್ತವನ್ನು ಕಟಾವು ಮಾಡಿದ ರೈತರು ನೀರು ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ನೀರು ನಿರ್ವಹಣೆಯಲ್ಲಿ ಆಗುತ್ತಿರುವ ಲೋಪದಿಂದ ಕೃಷಿಕರು ತೊಂದರೆ ಅನುಭವಿಸಬೇಕಾಗಿದೆ. ನೀರಾವರಿ ಇಲಾಖೆಯ ಮೇಲೆ ರೈತರು ಅಸಮಾಧಾನಗೊಂಡಿದ್ದಾರೆ.
‘ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ಎಲ್ಲ ಭೂಮಿಯಲ್ಲಿ ಭತ್ತ ನಾಟಿ ಮಾಡಲಾಗುತ್ತಿತ್ತು. ಇತ್ತೀಚಿನ ಕೆಲ ವರ್ಷಗಳಿಂದ ತೊಂದರೆ ಉಂಟಾಗುತ್ತಿದೆ. 2023ರಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದರಿಂದ ಕಳೆದ ವರ್ಷದ ಬೇಸಿಗೆ ಬೆಳೆಗೆ ನೀರು ಲಭ್ಯವಾಗಿರಲಿಲ್ಲ. ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಕೂಡ ಇಂತಹ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ’ ಎಂದು ಕಮಲಾಪುರದ ರೈತ ಕುಬೇರಪ್ಪ ಬೇಸರ ಹೊರಹಾಕಿದರು.
ಭದ್ರಾ ನೀರು ನಾಲೆಯ ಕೊನೆಯ ಭಾಗಕ್ಕೆ ತಲುಪದಿರುವುದರಿಂದ ಆಕ್ರೋಶಗೊಂಡ ರೈತರು ಮಲೇಬೆನ್ನೂರು ಪಟ್ಟಣದ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ನೀರು ನಿರ್ವಹಣೆಯಲ್ಲಿ ಉಂಟಾಗಿರುವ ಲೋಪವನ್ನು ಸರಿಪಡಿಸಿಕೊಂಡು ಅಚ್ಚುಕಟ್ಟು ಪ್ರದೇಶದ ಎಲ್ಲೆಡೆಗೆ ನೀರು ಒದಗಿಸುವುದಾಗಿ ಇಲಾಖೆ ಭರವಸೆ ನೀಡಿತ್ತು. ಆದರೆ, ಇದು ಈವರೆಗೆ ಸಾಧ್ಯವಾಗಿಲ್ಲ. ಇದರಿಂದ ಭೀತಿಗೊಂಡ ಎಂಜಿನಿಯರುಗಳು ನಾಲೆಯಲ್ಲಿ ಎಷ್ಟು ಪ್ರಮಾಣದ ನೀರು ಹರಿಯುತ್ತಿದೆ ಎಂಬುದನ್ನು ಗಮನಿಸಲು ಕೂಡ ಹಳ್ಳಿಗಳಿಗೆ ಬರುತ್ತಿಲ್ಲ ಎಂದು ದೂರುತ್ತಾರೆ ರೈತರು.
‘ನಾಲೆಯ ನೀರಿಗೆ 10 ದಿನಕ್ಕೊಂದು ಪಾಳಿ ವ್ಯವಸ್ಥೆ ಇದೆ. ನಾಲೆಯಲ್ಲಿ ನೀರು ಹರಿಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು, ನೀರಾವರಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಎಂಜಿನಿಯರುಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದರು. ಇತ್ತೀಚಿಗೆ ಯಾವೊಬ್ಬ ಎಂಜಿನಿಯರ್ ಕೂಡ ಕೊನೆಯ ಭಾಗದ ಹಳ್ಳಿಗಳಿಗೆ ಭೇಟಿ ನೀಡುತ್ತಿಲ್ಲ’ ಎಂದು ರೈತ ಹಾಲೇಶ್ ಆರೋಪಿಸಿದರು.
ಹಗಲು ಹೊತ್ತು ಹರಿಯುವ ನಾಲೆಯ ನೀರು ರಾತ್ರಿ ವೇಳೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಅಕ್ರಮ ಪಂಪ್‌ಸೆಟ್‌ಗಳು ರಾತ್ರಿ ವೇಳೆ ನಾಲೆಯಿಂದ ನೀರು ಎತ್ತುತ್ತಿವೆ. ಅಡಿಕೆ ತೋಟದ ಮಾಲೀಕರು ನಾಲೆಯ ಪಕ್ಕದಲ್ಲಿ ಟ್ಯಾಂಕರ್‌ಗಳನ್ನು ಇಟ್ಟುಕೊಂಡು ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಅಚ್ಚುಕಟ್ಟು ಪ್ರದೇಶದ ಭೂಮಿ ತಲುಪಬೇಕಿದ್ದ ನೀರು ಅನ್ಯರ ಪಾಲಾಗುತ್ತಿದೆ.
ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಸಮಸ್ಯೆಯ ವಿರುದ್ಧ ಫೆಬ್ರುವರಿ ಕೊನೆಯ ವಾರದಲ್ಲಿ ಹೊಳೆಸಿರಿಗೆರೆಯಲ್ಲಿ ಬಹಿರಂಗ ಸಭೆ ನಡೆಸಿದ್ದರು. ಮಾರ್ಚ್ 1ರಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ರೈತ ಮುಖಂಡರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೂ ನೀರು ತಲುಪಿಸುವ ಭರವಸೆ ನೀಡಿದರು.
ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆಗೆ ದಾವಣಗೆರೆ, ಚನ್ನಗಿರಿ ಹಾಗೂ ಹೊನ್ನಾಳಿ ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕುವಾರು ತಂಡಗಳನ್ನು ರಚಿಸಲಾಗಿತ್ತು. ಆದರೂ ನೀರು ನಾಲೆಯ ಕೊನೆಯ ಭಾಗವನ್ನು ತಲುಪುತ್ತಿಲ್ಲ.
______
ಒಂದು ತಿಂಗಳು ವಿಳಂಬವಾಗಿ ಭತ್ತ ನಾಟಿ ಮಾಡಿದ್ದೇವೆ. ಭತ್ತ ತೆನೆ ಕಟ್ಟುವ ಸಮಯದಲ್ಲಿ ನೀರು ಕೈಕೊಡುವ ಸಾಧ್ಯತೆ ಇದೆ. ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಆತಂಕ ನಿವಾರಿಸಬೇಕು.
– ಮಂಜುನಾಥ್ ಭಾನುವಳ್ಳಿ ಹರಿಹರ ತಾಲ್ಲೂಕು
______
ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದಲ್ಲಿ ಶೇ 35ರಷ್ಟು ಕೂಡ ಭತ್ತ ನಾಟಿ ಆಗಿಲ್ಲ. ಪ್ರತಿಭಟನೆ ಸರ್ಕಾರಿ ಕಚೇರಿಗೆ ಮುತ್ತಿಗೆ ಹಾಕಿದರೂ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆ ಸ್ಪಂದಿಸುತ್ತಿಲ್ಲ.
–ಕುಬೇರಪ್ಪ ಕಮಲಾಪುರ ಹರಿಹರ ತಾಲ್ಲೂಕು
ನೀರು ಸಿಗುವುದು ಅನುಮಾನ
ಭದ್ರಾ ನಾಲೆಯ ಕೊನೆಯ ಭಾಗದ ಒಂದಷ್ಟು ಜಮೀನುಗಳಲ್ಲಿ ಭತ್ತ ನಾಟಿ ಮಾಡಲಾಗಿದೆ. ಈಗಷ್ಟೇ ಕಳೆ ತೆಗೆಯುವ ಕೆಲಸದಲ್ಲಿ ರೈತರು ಮಗ್ನರಾಗಿದ್ದಾರೆ. ಆದರೆ ಭತ್ತ ಕೈಸೇರುವವರೆಗೂ ನೀರು ಲಭ್ಯವಾಗುವುದು ಅನುಮಾನ. ನಾಲೆಯಲ್ಲಿ ನೀರು ಹರಿಯಲು ಆರಂಭಿಸಿ 75 ದಿನಗಳು ಕಳೆದಿವೆ. ಕೊನೆಯ ಭಾಗದ ರೈತರು ನಾಟಿ ಮಾಡಿ ತಿಂಗಳು ಕಳೆದಿದೆ. ಭದ್ರಾವತಿ ತಾಲ್ಲೂಕಿನ ದಿಗ್ಗೇನಹಳ್ಳಿ ಬಳಿಯ ಭದ್ರಾ ಕಾಲುವೆಯ ಅಕ್ವಡಕ್ ಒಡೆದ ಬಳಿಕ ನಾಲೆಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇದು ರೈತರನ್ನು ಆತಂಕಕ್ಕೆ ತಳ್ಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.