ಪ್ರಜಾವಾಣಿ ವಾರ್ತೆ
ಚನ್ನಗಿರಿ: ಯೂರಿಯಾ ಗೊಬ್ಬರದ ಕೊರತೆ ಉಂಟಾಗಿರುವ ಕಾರಣ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ಜಿಲ್ಲೆಗೆ ಬಂದಿದ್ದ 2,500 ಟನ್ ಯೂರಿಯಾ ಗೊಬ್ಬರವನ್ನು ಬೀದರ್ ಜಿಲ್ಲೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಾಲ್ಲೂಕಿನ ಎಲ್ಲೆಡೆ ಮೆಕ್ಕೆಜೋಳ, ರಾಗಿ ಇನ್ನಿತರ ಬೆಳೆಗಳು ಬಿತ್ತನೆಯಾಗಿದ್ದು, ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ಖಾಸಗಿ ರಸಗೊಬ್ಬರ ಮಾರಾಟಗಾರರು 1 ಕ್ವಿಂಟಾಲ್ ಯೂರಿಯಾ ಗೊಬ್ಬರವನ್ನು ₹ 1,200ಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಕೃತಕ ಅಭಾವವನ್ನು ಉಂಟು ಮಾಡುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಇಂತಹ ಮಾರಾಟಗಾರರ ಮೇಲೆ ಕ್ರಮ ಜರುಗಿಸಬೇಕು. ಹಾಗೆಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಹಣವನ್ನು ರೈತರಿಗೆ ವಾಪಾಸ್ ಕೊಡಿಸಬೇಕು. ಯೂರಿಯಾ ಗೊಬ್ಬರವನ್ನು ಮೊದಲು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೀಡಬೇಕು. ನಂತರ ಖಾಸಗಿ ಮಾರಾಟಗಾರರಿಗೆ ನೀಡಬೇಕು. ಇನ್ನು ಎರಡು ದಿನಗಳಲ್ಲಿ ತಾಲ್ಲೂಕಿನ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡದೇ ಹೋದರೆ ಮತ್ತೆ ಹೋರಾಟವನ್ನು ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಗಾಂಧಿ ವೃತ್ತಕ್ಕೆ ಬಂದು ಟೈರ್ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಾಗಿ ಕೃಷಿ ಇಲಾಖೆ ಕಚೇರಿಗೆ ಕಚೇರಿಗೆ ಮುತ್ತಿಗೆ ಹಾಕಿದರು.
ಜಿಲ್ಲೆಗೆ 5,230 ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು, ಇದುವರೆಗೆ 4,830 ಟನ್ ಗೊಬ್ಬರ ಪೂರೈಕೆಯಾಗಿದೆ. ಶುಕ್ರವಾರ ಮತ್ತೆ ಯೂರಿಯಾ ಗೊಬ್ಬರ ಬರುತ್ತಿದ್ದು, ತಾಲ್ಲೂಕಿನ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪೂರೈಸಿ ನಂತರ ಖಾಸಗಿ ಮಾರಾಟಗಾರರಿಗೆ ವಿತರಣೆ ಮಾಡಲಾಗುವುದು. ಆಧಾರ್ ಕಾರ್ಡ್‌ಗೆ 2 ಚೀಲ ಯೂರಿಯಾ ಗೊಬ್ಬರ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಅದರಂತೆ ವಿತರಣೆ ಮಾಡಲಾಗುವುದು. ಹಾಗೆಯೇ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಿರುವ ಖಾಸಗಿ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಅರುಣ್ ಕುಮಾರ್ ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಪಿ. ಲೋಹಿತ್ ಕುಮಾರ್, ಪಿ.ಎಸ್. ಸಿದ್ದೇಶ್, ಕುಮಾರಪ್ಪ, ಲೋಕೇಶಪ್ಪ, ಕೆ.ಜಿ. ಮರುಳಸಿದ್ದಪ್ಪ, ಕೆ. ಬಸವರಾಜ್, , ಕುಬೇಂದ್ರೋಜಿರಾವ್, ಕೆ.ಆರ್. ಮಾಲತೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್. ಸ್ವಾಮಿ, ಟಿ. ನಾಗರಾಜ್, ರುದ್ರೇಗೌಡ್ರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.