ADVERTISEMENT

ಕಲಬುರಗಿ ಸಮಾವೇಶಕ್ಕೆ ಜಿಲ್ಲೆಯಿಂದ ಶಕ್ತಿ ತುಂಬಿ

ಬಿಜೆಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 4:38 IST
Last Updated 2 ಅಕ್ಟೋಬರ್ 2022, 4:38 IST
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದಾವಣಗೆರೆಯಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕರ ಸಮಾವೇಶದ ಪೂರ್ವಭಾವಿ ಸಭೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹಾಗೂ ಮುಖಂಡರು ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದಾವಣಗೆರೆಯಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕರ ಸಮಾವೇಶದ ಪೂರ್ವಭಾವಿ ಸಭೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹಾಗೂ ಮುಖಂಡರು ಉದ್ಘಾಟಿಸಿದರು.   

ದಾವಣಗೆರೆ: ಬಿಜೆಪಿ ಕಾರ್ಯಕರ್ತರು ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ಮನಸ್ತಾಪಗಳನ್ನು ಬದಿಗೊತ್ತಿ ಮುಂದಿನ ವಿಧಾನಸಭೆ ಚುನಾವಣೆಗೆ ಸಂಘಟಿತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದಾವಣಗೆರೆಯಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ಸಮಾವೇಶಕ್ಕೆ ಜನರಷ್ಟೇ ಸೇರಿದರೆ ಸಾಲದು. ಸಮಾವೇಶದಲ್ಲಿ ಪಾಲ್ಗೊಂಡವರು ಮತಗಳಾಗಿ ಪರಿವರ್ತನೆಯಾಗಬೇಕು. ಪಾಲ್ಗೊಂಡವರೆಲ್ಲರೂ ಮತ ಹಾಕುತ್ತಾರೆ ಎಂಬುದು ಭ್ರಮೆ. ಬೂತ್‌ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಂಘಟಿತರಾಗಿ ಶಕ್ತಿ ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅ.30ರಂದು ಕಲಬುರಗಿಯಲ್ಲಿ ನಡೆಯುವ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಮುಖಂಡರು ಸಂದೇಶ ರವಾನಿಸಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ವಿಧಾನಸೌಧದಲ್ಲಿ ಬಿಜೆಪಿ ಬಾವುಟ ಹಾರಿಸುವಂತೆ ಮಾಡಬೇಕು’ ಎಂದು ಕರೆ ನೀಡಿದರು.

‘ಹಿಂದುಳಿದ ವರ್ಗಗಳೇ ಬಿಜೆಪಿಯ ಶಕ್ತಿಯಾಗಿದ್ದು, ಆ ವರ್ಗಗಳಿಂದಲೇ ಅಧಿಕಾರ ನಡೆಸಲು ಸಾಧ್ಯವಾಯಿತು. ಬೈರತಿ ಬಸವರಾಜ ಹಾಗೂ ಎಂ.ಟಿ.ಬಿ. ನಾಗರಾಜ್ ಪಕ್ಷ ಸೇರಿದ ಮೇಲೆ ಹಿಂದುಳಿದ ವರ್ಗದಿಂದ ಇನ್ನಷ್ಟು ಶಕ್ತಿ ಬಂದಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಕೇಂದ್ರ ಸಚಿವ ಸಂಪುಟದಲ್ಲಿ 27 ಹಾಗೂ ರಾಜ್ಯದಲ್ಲಿ 6 ಹಿಂದುಳಿದ ವರ್ಗಗಳ ಸಚಿವ ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿದೆ’ ಎಂದರು.

‘ಕಲಬುರಗಿಯಲ್ಲಿ ನಡೆಯುವ ವಿರಾಟ್ ಸಮಾವೇಶಕ್ಕೆ 8 ಲಕ್ಷ ಒಬಿಸಿ ಸಮುದಾಯದ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹಿಂದುಳಿದ ವರ್ಗದವರು ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ, ಔದ್ಯೋಗಿಕ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಗಬೇಕು. ಈ ನಿಟ್ಟಿನಲ್ಲಿ ವಿರಾಟ್ ಸಮಾವೇಶ ಹೊಸ ದಿಕ್ಕು, ಚಿಂತನೆ ಮೂಡಿಸಲಿದೆ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು ಹೇಳಿದರು.

ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶಬಾಬು, ಉಪಾಧ್ಯಕ್ಷ ಭೋಜರಾಜ್ ಕರೂದಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಕಾರ್ಯದರ್ಶಿ ಬಿ.ಎಸ್‌.ಜಗದೀಶ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಬಸವರಾಜ, ಪಾಲಿಕೆ ಸದಸ್ಯರಾದ ಗೀತಾ ದಿಳ್ಯೆಪ್ಪ, ಉಮಾ ಪ್ರಕಾಶ್, ರೇಣುಕಾ ಶ್ರೀನಿವಾಸ್, ಮುಖಂಡರಾದ ಕೊಳೆನಹಳ್ಳಿ ಸತೀಶ್‌, ಆನಂದಪ್ಪ, ವೈ.ಮಲ್ಲೇಶ್, ಜಯಣ್ಣ, ಗುರುನಾಥ್, ಕಲ್ಲೇಶ್ ಇದ್ದರು.

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬಂದಿದ್ದವರು ಅವರ ಅಭಿಮಾನಿಗಳು. ಅದು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಕೆಲಸಗಳು ಮತಗಳಾಗಿ ಪರಿವರ್ತನೆಯಾಗಬೇಕು.

ಎಂ.ಪಿ. ರೇಣುಕಾಚಾರ್ಯ, ಶಾಸಕ

ಕಾಂಗ್ರೆಸ್ ಕುತಂತ್ರದಿಂದ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ಈಗ ಅವರು ಆರೋಪಮುಕ್ತರಾಗಿದ್ದು, ಕಲಬುರಗಿ ಸಮಾವೇಶದ ವೇಳೆಗೆ ಅವರಿಗೆ ಸಚಿವ ಸ್ಥಾನ ಸಿಗಬೇಕು.

ಮಾಡಾಳ್ ವಿರೂಪಾಕ್ಷಪ್ಪ, ಶಾಸಕ‌

ಕಾಂಗ್ರೆಸ್‌ ನಡವಳಿಕೆಯಿಂದ ಬೇಸತ್ತು ಮಾತೃಪಕ್ಷಕ್ಕೆ ಮರಳಿದ್ದೇನೆ. ಸಮಾವೇಶದಲ್ಲಿ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಪಕ್ಷಕ್ಕೆ ಹೊಸ ಹುಮ್ಮಸ್ಸು ನೀಡಬೇಕು.
ಎಂ.ಡಿ. ಲಕ್ಷ್ಮಿನಾರಾಯಣ ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.