ADVERTISEMENT

ಮಾನಸಿಕವಾಗಿ ಕುಗ್ಗದಿದ್ದರೆ ಕ್ಯಾನ್ಸರ್‌ ಗೆಲ್ಲಬಹುದು

ಬಾಲಕೃಷ್ಣ ಪಿ.ಎಚ್‌
Published 2 ಫೆಬ್ರುವರಿ 2023, 4:55 IST
Last Updated 2 ಫೆಬ್ರುವರಿ 2023, 4:55 IST
ರೇಣುಕಮ್ಮ
ರೇಣುಕಮ್ಮ   

ದಾವಣಗೆರೆ: ‘ಧೈರ್ಯವಾಗಿದ್ದರೆ ಕ್ಯಾನ್ಸರ್‌ ದೊಡ್ಡ ರೋಗವಲ್ಲ. ಮಾನಸಿಕವಾಗಿ ಕುಗ್ಗಿದರೆ ಮಾತ್ರ ಸಾವನ್ನು ಆಹ್ವಾನಿಸಿದಂತೆ’.

ಇದು ಕ್ಯಾನ್ಸರ್‌ ಗೆದ್ದು ಸಹಜ ಜೀವನ ನಡೆಸುತ್ತಿರುವ ಜಗಳೂರು ತಾಲ್ಲೂಕಿನ ಉದ್ಧಗಟ್ಟದ ನಿವಾಸಿ ರೇಣುಕಮ್ಮ ಅವರ ಅಭಿಪ್ರಾಯ.

ರೇಣುಕಮ್ಮ ಅವರಿಗೆ ಆರು ವರ್ಷಗಳ ಹಿಂದೆ ಎದೆ ಭಾಗದಲ್ಲಿ ಗೆಡ್ಡೆ ಕಾಣಿಸಿಕೊಂಡಿತ್ತು. ತೀವ್ರ ನೋವು ಬಾಧಿಸುತ್ತಿದೆ ಎಂದು ಮನೆಯಲ್ಲಿ ಹೇಳಿದ್ದರಿಂದ ಅವರನ್ನು ಮಂಗಳೂರಿನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕ್ಯಾನ್ಸರ್‌ ತಜ್ಞ ಡಾ. ಇಬ್ರಾಹಿಂ ನಾಗನೂರು ಅವರು ತಪಾಸಣೆ ನಡೆಸಿ ಕಿಮೋ ಥೆರಫಿ ಮಾಡಬೇಕು ಎಂದು ತಿಳಿಸಿದ್ದರು. ಗೆಡ್ಡೆ ತೆಗೆದ ಬಳಿಕ ಒಂದು ವರ್ಷದಲ್ಲಿ 12 ಬಾರಿ ಕಿಮೋ ಥೆರಫಿ ಮಾಡಲಾಗಿತ್ತು. ಇದೀಗ ಅವರು ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾರೆ.

ADVERTISEMENT

‘ಕೂದಲೆಲ್ಲ ಉದುರಿ ಸಣ್ಣ ಮಗುವಿನಂತಾಗಿದ್ದೆ. ಆದರೆ, ಕ್ಯಾನ್ಸರಿಗೂ, ಸಾವಿಗೂ ಹೆದರಿರಲಿಲ್ಲ. ಒಂದು ವರ್ಷ ಬಹಳ ಸೂಕ್ಷ್ಮವಾಗಿ ಬದುಕಬೇಕಾಯಿತು. ಈಗ ಮನೆ ಕೆಲಸ, ಹೊಲದ ಕೆಲಸ ಎಲ್ಲವನ್ನೂ ಮಾಡುತ್ತಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ ಜತೆಗೆ ತಾವು ಗಳಿಸಿದ ಯಶಸ್ಸಿನ ಅನುಭವ ಹಂಚಿಕೊಂಡರು.

‘ಕಿಮೋಥೆರಫಿ ಮಾಡಿದ್ರೆ ಕೂದಲು ಹೋಗುತ್ತದೆ, ಸೌಂದರ್ಯ ಹಾಳಾಗುತ್ತದೆ ಎಂದು ಬಹಳಷ್ಟು ಮಹಿಳೆಯರು ಕ್ಯಾನ್ಸರ್‌ ಇದ್ದರೂ ಮುಚ್ಚಿಡುತ್ತಾರೆ. ಕೆಲವರು ಸಾವಿಗೆ ಹೆದರಿ ಕುಳಿತುಕೊಳ್ಳುತ್ತಾರೆ. ಗಡ್ಡೆ ಕಾಣಿಸಿಕೊಂಡರೆ, ಕ್ಯಾನ್ಸರ್‌ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ವೈದ್ಯರಿಗೆ ತಿಳಿಸಬೇಕು. ಕೂದಲು ಉದಿರಿದರೆ ಮತ್ತೆ ಬರುತ್ತದೆ. ಕಿಮೋ ಥೆರಫಿ ಮಾಡಿದ ಮೇಲೆ ನನ್ನ ಕೂದಲು ಹೋಗಿದ್ದರೂ ಈಗ ಹಿಂದಿನಂತೆ ಬಂದಿದೆ. ಯಾರೂ ನೋವನ್ನು ಮುಚ್ಚಿಡಬೇಡಿ. ಕೂಡಲೇ ತಪಾಸಣೆಗೆ ಒಳಗಾಗಿ, ಚಿಕಿತ್ಸೆ ಪಡೆಯಿರಿ. ವೈದ್ಯರ ಸಲಹೆಯಂತೆ ಜೀವನ ನಡೆಸಿ’. ಎಂದು ಅವರು ಕಿವಿಮಾತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.